ವಿಜಯನಗರದಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆ ಸಾವು ಪ್ರಕರಣ- ಈಗ ಬಂದ್ರಂತೆ ಅಧಿಕಾರಿಗಳು...
ವಿಜಯನಗರ ಜನವರಿ 8: ಇಷ್ಟು ದಿನ ಕಲುಷಿತ ನೀರು ಸೇವನೆಯಿಂದಾಗಿ ಜನ ಅಸ್ವಸ್ಥರಾಗುವ ಘಟನೆಗಳು ಹೆಚ್ಚಾಗಿ ರಾಯಚೂರಿನಲ್ಲಿ ಕಂಡು ಬರುತ್ತಿದ್ದವು. ಈಗ ಆ ನೀರು ವಿಜಯನಗರಕ್ಕೂ ಹರಿದಿದೆ. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಅನ್ನೋ ಹಾಗೆ ಈಗ ಅಧಿಕಾರಿಗಳು ನೀರು ಪರಿಶೀಲನೆಗೆ ಮುಂದಾಗಿದ್ದಾರೆ.
ನೀರು ಮನುಷ್ಯನಿಗೆ ಅತ್ಯಗತ್ಯವಾದ ಜೀವಜಲ. ಆದರೆ ಕಲುಷಿತ ನೀರು ಸೇವನೆಯಿಂದಾಗಿ ಜನ ಅಸ್ವಸ್ಥರಾಗುತ್ತಿರುವ ಘಟನೆಗಳು ಆಗಾಗ ರಾಜ್ಯದಲ್ಲಿ ಕಂಡು ಬರುತ್ತಿದ್ದು ಆತಂಕಕ್ಕೆ ಎಡೆಮಾಡಿವೆ. ಹೌದು... ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಕಾರಿಗನೂರು ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ ವಾಂತಿಭೇದಿ ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಮಾತ್ರವಲ್ಲದೆ ನಗರದ 24ನೇ ವಾರ್ಡ್ ಕಾರಿಗನೂರು ಗ್ರಾಮದಲ್ಲಿ ವಾಂತಿಬೇಧಿಯಿಂದಾಗಿ 27 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ ಶಾಸಕ ಎಚ್. ಆರ್. ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕ ಎಚ್.ಆರ್.ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಕಾರಿಗನೂರು ಶಿಕಾರಿ ಕ್ಯಾಂಪ್‍ಗೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡದೇ ಇರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ನಗರಸಭೆ ಎಇಇ ಸತೀಶ್ ಹಾಗೂ ಇತರೆ ಅಧಿಕಾರಿಗಳನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡರು.
ಕಾರಿಗನೂರು ಗ್ರಾಮಕ್ಕೆ ಕಳೆದ ನಾಲ್ಕಾರು ದಿನದಿಂದಲೇ ಕಲುಷಿತ ನೀರು ಪೂರೈಕೆ ಆಗುತ್ತಿದೆ ಆದರೆ, ಏಕಾಏಕಿ ಜನರು ಆಸ್ಪತ್ರೆಗೆ ಬರಲು ಆರಂಭಿಸಿದ್ದಾರೆ. ಗ್ರಾಮಕ್ಕೆ ಸಪ್ಲೈ ಆಗುವ ನೀರನ್ನು ಪರಿಶೀಲನೆ ಮಾಡಿದಾಗ ಕಲುಷಿತ ನೀರು ಪೂರೈಕೆ ಆಗಿರುವುದು ಬೆಳಕಿಗೆ ಬಂದಿದೆ.
ಜೊತೆಗೆ ಕಾರಿಗನೂರು ಗ್ರಾಮಕ್ಕೆ ತುಂಗಭದ್ರಾ ಜಲಾಶಯದಿಂದ ಕಳೆದ 20 ವರ್ಷದ ಹಿಂದೆ ನೀರು ಸರಬರಾಜುಗೆ ಪೈಪ್ ಲೈನ್ ಅಳವಡಿಕೆ ಮಾಡಲಾಗಿದೆ. ಆದರೆ, ಅಳವಡಿಕೆಯಾದ ಪೈಪ್‍ಲೈನ್‍ನಲ್ಲಿ ಎಲ್ಲಿ ಲೋಪವಾಗಿದೆ ಎಂಬ ಬಗ್ಗೆ ಅಧಿಕಾರಿಗಳ ಗಮನ ಹರಿಸಿಲ್ಲ. ಗ್ರಾಮದಲ್ಲಿ ವಾಂತಿಭೇದಿ ಪ್ರಕರಣ ಹೆಚ್ಚಾಗುತ್ತಿಂದತೇ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಕೂಡಲೇ ಶುದ್ಧ ಕುಡಿಯುವ ನೀರು ಪೂರೈಕೆ ಪೈಪ್‍ಲೈನ್ ದುರಸ್ತಿಗೊಳಿಸಬೇಕು. ಸಮಸ್ಯೆ ಬಗೆ ಹರಿಸದಿದ್ದರೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಗವಿಯಪ್ಪ ಎಚ್ಚರಿಸಿದರು.
ಶೋಕಾಸ್ ನೋಟಿಸ್:
ಶುದ್ಧ ಕುಡಿಯುವ ನೀರು ಘಟಕದಿಂದ ಉಚಿತ ಕುಡಿಯುವ ನೀರು ಗ್ರಾಮಸ್ಥರಿಗೆ ನೀಡುವಂತೆ ಸೂಚನೆ ನೀಡಲಾಗಿದೆ. ಪ್ರಕರಣ ಕುರಿತಂತೆ ಕಾರಿಗನೂರು, ಶಿಕಾರಿ ಕ್ಯಾಂಪ್‍ಗೆ ಕಲುಷಿತ ನೀರು ಸರಬರಾಜು ಆಗಿದೆ. ಕಲುಷಿತ ನೀರು ಪೂರೈಕೆಯಿಂದ ಆಗಿದ್ದರೆ, ನಿರ್ಲಕ್ಷ್ಯವಹಿಸಿದ ಅಧಿಕಾರಿಗಳಿಗೆ ಶೋಕಾಸ್ ನೀಡುತ್ತೇವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ 27 ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅದರಲ್ಲಿ 3 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯಕ್ ತಿಳಿಸಿದ್ದಾರೆ.
ದೀಪದ ಕೆಳಗೆ ಕತ್ತಲು ಎಂಬಂತೆ ತುಂಗಭದ್ರಾ ಜಲಾಶಯ ಕೂಗಳತೆ ದೂರದಲ್ಲಿದ್ದರೂ ವಿಜಯನಗರ ಜಿಲ್ಲೆಯ ಜನರಿಗೆ ಮಾತ್ರ ಕುಡಿಯುವ ನೀರಿನ ಬವಣೆ ತಪ್ಪಿಲ್ಲದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. ಈ ಕೂಡಲೇ ಕಾರಿಗನೂರು, ಶಿಕಾರಿ ಕ್ಯಾಂಪ್‍ಗೆ ಶುದ್ಧ ಕುಡಿಯುವ ನೀರು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅಲೆಮಾರಿ, ಅರೆ ಅಲೆಮಾರಿ ಒಕ್ಕೂಟದ ಅಧ್ಯಕ್ಷ ಸಣ್ಣ ಮಾರೆಪ್ಪ ಆಗ್ರಹಿಸಿದ್ದಾರೆ.












Click it and Unblock the Notifications