ಶ್ರೀರಾಮುಲು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು- ಉಗ್ರಪ್ಪ ಆಗ್ರಹ
ಬಳ್ಳಾರಿ ಅಕ್ಟೋಬರ್ 18: ಅಕ್ರಮ ಭೂ ಹಗರಣದಲ್ಲಿ ಭಾಗಿಯಾಗಿರುವ ಸಚಿವ ಶ್ರೀರಾಮುಲು, ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರಿಗೆ ಕಾನೂನಿನ ಮೇಲೆ ಗೌರವ ಇದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಥವಾ ಸಿಎಂ ಬೊಮ್ಮಾಯಿ ಅವರು ಸಚಿವ ಸ್ಥಾನದಿಂದ ಶ್ರೀರಾಮುಲು ಅವರನ್ನು ವಜಾಗೊಳಿಸಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಆಗ್ರಹಿಸಿದ್ದಾರೆ.
ಬಳ್ಳಾರಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನಾನು ತಿನ್ನಲ್ಲ, ತಿನ್ನೋಕೆ ಬಿಡಲ್ಲ ಎನ್ನುತ್ತಾರೆ ಆದರೆ ಬಳ್ಳಾರಿ ಅಕ್ರಮ ಭೂ ಹಗರಣ ಪ್ರಕರಣದಲ್ಲಿ 300 ಕೋಟಿ ಅವ್ಯವಹಾರ ಆಗಿರುವುದು ಕಂಡು ಬರುತ್ತದೆ ಎಂದು ಉಗ್ರಪ್ಪ ಆರೋಪಿಸಿದರು.
ಬಳ್ಳಾರಿ ಅಕ್ರಮ ಭೂ ಹಗರಣ ಪ್ರಕರಣದಲ್ಲಿ 6 ಸಾವಿರ ಪುಟಗಳ ಚಾರ್ಜ್ ಶೀಟ್ ಹಾಕಲಾಗಿದೆ. ಬಳ್ಳಾರಿಯ ಲೋಕಾಯುಕ್ತ ಪೊಲೀಸರು 11 ಜನರ ಮೇಲೆ ಚಾರ್ಜ್ ಶೀಟ್ ಹಾಕಿದ್ದಾರೆ. ಎ1 ಆಗಿನ ಜಿಲ್ಲಾಧಿಕಾರಿ ಬಿ.ಶಿವಪ್ಪ, ಎ2 ಆರ್ ವೆಂಕಟೇಶ್, ಎ3 ಶಶಿಧರ ಬಗಲಿ, ಎ4 ವೀರೇಶಬಾಬು, ಎ6 ಶ್ರೀರಾಮುಲು. ಜಮೀನು ಕಬಳಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ದೋಷಾರೋಪಣೆಯ 6,000 ಪುಟಗಳ ಪಟ್ಟಿಯನ್ನು ಕಳೆದ ಮಾರ್ಚ್‌ನಲ್ಲಿ ಬಳ್ಳಾರಿ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದಾರೆ. ಸಚಿವ ಶ್ರೀರಾಮುಲು ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದರು.

ಇನ್ನು ಬಿಜೆಪಿ ನಾಯಕರು ಕಾಂಗ್ರೆಸ್‌ನವರು ಬೇಲ್ ಮೇಲೆ ಇದ್ದಾರೆಂದು ಹೇಳುತ್ತಾರೆ. ಹಾಗದರೆ ಇವರು ಬೇಲೆ ಮೇಲೆ ಇಲ್ಲವಾ..? ಶ್ರೀರಾಮುಲು ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾರೆ. ಆತ ಸಾಚಾ ಅಲ್ಲ. ಭೂ ಹಗರಣ ಪ್ರಕರಣದಲ್ಲಿ ಆರನೇ ಆರೋಪಿ, ಈ ಸಂಬಂಧ 6 ಸಾವಿರ ಪುಟಗಳ ದೋಷಾರೋಪ ಪಟ್ಟಿ ಸಹ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದು, ಜಾಮೀನು ಪಡೆದು ಹೊರಗಿದ್ದಾರೆ. ಇಷ್ಟಾಗಿಯೂ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡುತ್ತಾರೆ ಎಂದು ಶ್ರೀರಾಮುಲು ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್‌ನವರು ಅರ್ಧದಷ್ಟು ಜನರು ಜಾಮೀನಿನಲ್ಲಿ ಹೊರಗಿದ್ದಾರೆ ಎಂದು ಹೇಳುವ ಸಚಿವ ಶ್ರೀರಾಮುಲು, ಖುದ್ದು ತಾನೇ ಮೇಲೆ ಹೊರಗಿರುವುದನ್ನು ಜಾಮೀನಿನ ಮರೆತಿದ್ದಾರೆಯೇ ಎಂದು ಉಗ್ರಪ್ಪ ಪ್ರಶ್ನಿಸಿದರು.
ಇನ್ನು ಶ್ರೀರಾಮುಲು, ಆಕುಲ ಲಕ್ಷ್ಮಮ್ಮ ಎಂಬುವರಿಗೆ ಸೇರಿದ 27.25 ಎಕರೆ ಜಮೀನಿನ ಪೈಕಿ 17.25 ಎಕರೆ ಜಮೀನನ್ನು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಭೂ ಅಕ್ರಮ ಮಾಡಿದ್ದಾರೆ ಎಂಬ ಆರೋಪದಡಿ ದೂರು ದಾಖಲಾಗಿ, ದೋಷಾರೋಪ ಪಟ್ಟಿಯೂ ಸಲ್ಲಿಕೆಯಾಗಿದೆ. ಈ ಪ್ರಕರಣವನ್ನು ನಾವು ಸುಮ್ಮನೆ ಬಿಡುವುದಿಲ್ಲ. ಸದನದೊಳಗೆ ಈ ವಿಷಯ ಪ್ರಸ್ತಾಪ ಮಾಡುತ್ತೇವೆ, ರಾಜ್ಯಪಾಲರಿಗೆ ದೂರು ಕೊಡುತ್ತೇವೆ, ಹೋರಾಟ ಮಾಡುತ್ತೇವೆ, ಜನತಾ ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.
ಬಳ್ಳಾರಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಂ.ದಿವಾಕರಬಾಬು, ಕಾಂಗ್ರೆಸ್ ಮುಖಂಡ ಸುನೀಲ್ ರಾವೂರು, ಬಿ.ಎಂ.ಪಾಟೀಲ್ ಸೇರಿದಂತೆ ಇತರ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications