ವಿಜಯನಗರ: ಮರಳಿ ಗೂಡಿಗೆ ಸೇರಿದ ಅಪರೂಪದ ಯೂರೇಷಿಯನ್ ರಣಹದ್ದು
ವಿಜಯನಗರ, ಜನವರಿ, 15: ಕಳೆದ ತಿಂಗಳಷ್ಟೆ ನಗರದ ರಾಣಿಪೇಟೆಯ ಶಾಲಾ ಮಕ್ಕಳ ಕೈಗೆ ಸಿಕ್ಕಿದ್ದ ಅಪರೂಪದ ಗ್ರಿಫನ್ ಯೂರೇಷಿಯನ್ ರಣಹದ್ದು ಮರಳಿಗೂಡಿಗೆ ಹಾರಿದೆ.
ಕಳೆದ ತಿಂಗಳು ಡಿಸೆಂಬರ್‌ನಲ್ಲಿ ನಗರದ ರಾಣಿಪೇಟೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಹುಡುಗರ ಕಣ್ಣಿಗೆ ಕಾಣಸಿಕ್ಕ ಯೂರೇಷಿಯನ್ ಗ್ರಿಫನ್ ಜಾತಿಯ ರಣಹದ್ದನ್ನು ಪತ್ರಕರ್ತ ಹಾಗೂ ಹವ್ಯಾಸ ಛಾಯಾಗ್ರಾಹಕ ಶಿವಶಂಕರ ಬಣಗಾರ್ ಅವರು ರಕ್ಷಿಸಿದ್ದರು. ಅದನ್ನು ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್‌ಗೆ ಹಸ್ತಾಂತರ ಮಾಡಿದ್ದರು. ಮೃಗಾಲಯದ ತಜ್ಞ ಪಶುವೈದ್ಯೆ ಡಾ.ವಾಣಿ ಅವರು, ಅಸ್ವಸ್ಥ ಸ್ಥಿತಿಯಲ್ಲಿದ್ದ ಪಕ್ಷಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಿದ್ದರು. ಚೇತರಿಸಿಕೊಂಡ ಪಕ್ಷಿಯನ್ನು ತಾಲೂಕಿನ ಇಂಗಳಿಗಿ ಗ್ರಾಮದ ಬೆಟ್ಟದ ತುದಿಯಲ್ಲಿ ಹಾರಿ ಬಿಟ್ಟು ಪಂಜರದಿಂದ ಅದನ್ನು ಮುಕ್ತಗೊಳಿಸಿದರು.
ರಣಹದ್ದಿನ ನೈಜ ಸ್ಥಳದ ಪತ್ತೆ
ವನ್ಯಜೀವಿ ಸಂಶೋದಕ ಡಾ.ಸಮದ್ ಕೊಟ್ಟೂರು ಅವರು ರಾಷ್ಟೀಯ ರಣಹದ್ದು ತಜ್ಞರನ್ನು ಸಂಪರ್ಕಿಸಿ, ಅಪರೂಪವಾಗಿ ಕಂಡು ಬಂದ ರಣಹದ್ದಿನ ನೈಜ ಗುರುತನ್ನು ಪತ್ತೆ ಮಾಡಿದರು. ಬೃಹತ್ ಗಾತ್ರದ ಪಕ್ಷಿಯ ಎತ್ತರ, ಗಾತ್ರ, ತೂಕ, ಗರಿಗಳ ಬಣ್ಣ, ಮುಂತಾದ ಗುಣ, ಬಣ್ಣವನ್ನು ಪರೀಕ್ಷಿಸಿದ್ದು, ಇದೊಂದು ವರ್ಷ ವಯೋಮಾನದ ಯೂರೋಪಿಯನ್ ಗ್ರಿಫನ್ ಎಂಬ ರಣಹದ್ಧು ಎಂಬುದನ್ನು ಖಚಿತ ಪಡಿಸಿದರು. ಸಾಮಾನ್ಯವಾಗಿ ಹೆಚ್ಚಾಗಿ ಉತ್ತರ ಭಾರತದಲ್ಲಿ ಕಂಡು ಬರುವ ಈ ರಣಹದ್ದುಗಳು ದಕ್ಷಿಣ ಭಾರತಕ್ಕೆ ವಲಸೆ ಬಂದಾಗ ಕೆಲವೊಮ್ಮೆ ನಿರ್ಜಲೀಕರಣದಿಂದ ಬಸವಳಿದು ನೆಲಕ್ಕೆ ಬೀಳುತ್ತವೆ.

ರಣಹದ್ದುಗಳು ನೆಲಕ್ಕೆ ಬೀಳುವುದೇಕೆ?
ಹಾಗೆಯೇ ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಹೆಚ್ಚಾಗಿ ರಣಹದ್ದುಗಳು ಬಸವಳಿದು ನೆಲಕ್ಕೆ ಬಿದ್ದಿರುವ ಪ್ರಸಂಗಗಳು ಕಂಡುಬಂದಿವೆ. ಅವುಗಳನ್ನು ಸಂರಕ್ಷಿಸಿ, ಚಿಕಿತ್ಸೆ ನೀಡಿ ಅವು ಚೇತರಿಸಿಕೊಂಡ ಬಳಿಕ ಮರಳಿ ಹಾರಿಬಿಡಲಾಗುತ್ತದೆ. ಅದೇ ರೀತಿ ಇದೀಗ ಈ ರಣಹದ್ದನ್ನು ಕೂಡ ಸಮೀಪದ ಇಂಗಳಗಿ ಗ್ರಾಮದ ಬಳಿಯ ಎತ್ತರದ ಬೆಟ್ಟದ ತುದಿಯಲ್ಲಿ ಪೆಟ್ಟಿಗೆಯಿಂದ ಹೊರಬಿಡಲಾಗಿದೆ. ನಂತರ ಸುತ್ತಮುತ್ತಲಿನ ಪರಿಸರವನ್ನು ಅವಲೋಕಿಸಲು ಅವಕಾಶ ನೀಡಲಾಯಿತು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಬೆಟ್ಟದ ಮೇಲೆ ಹಾರಾಡಿದ ರಣಹದ್ದು ಸುಲಲಿತವಾಗಿ ಉತ್ತರ ದಿಕ್ಕಿನ ಕಡೆ ಹಾರಿ ಕಣ್ಮರೆಯಾಯಿತು.
ನೀಲಿ ಬಣ್ಣದ ಉಂಗುರ ಹಾಕಿದ್ದು ಏಕೆ?
ಈ ರಣಹದ್ದಿನ ಕಾಲಿಗೆ ವಿಶೇಷ ಗುರುತಿನ ನೀಲಿ ಬಣ್ಣದ ಉಂಗುರವನ್ನು ಹಾಕಲಾಗಿದೆ. ಉಂಗುರದ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ ಸಿಯು, ಸಿಯು ಎಂದು ಮುದ್ರಿಸಲಾಗಿದೆ. ಇದನ್ನು ಆಧಾರಿಸಿ ಮುದೊಂದು ದಿನ ರಣಹದ್ದು ಹೊಸಪೇಟೆಯ ಪ್ರದೇಶದಲ್ಲಿ ಕಾಣಿಸಕೊಂಡು ರಕ್ಷಿಸಲ್ಪಟ್ಟಿತ್ತು ಎಂಬುದನ್ನು ಸುಲಭವಾಗಿ ಗುರುತಿಸಬಹುದು ಎಂದು ಡಾ. ಸಮ್ಮದ್ ಕೊಟ್ಟೂರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್. ಕಿರಣ್, ತಜ್ಞ ಪಶುವೈದ್ಯೆ ಡಾ. ವಾಣಿ, ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು, ಹವ್ಯಾಸಿ ಛಾಯಾಗ್ರಾಹಕ ಶಿವಶಂಕರ ಬಣಗಾರ ಹಾಗೂ ಮೃಗಾಲಯದ ಸಿಬ್ಬಂದಿ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications