ತುಂಗಭದ್ರಾ ಜಲಾಶಯ ಖಾಲಿ, ರಾಯಚೂರು ನಗರಕ್ಕೆ ಕುಡಿಯುವ ನೀರು ಪೂರೈಕೆ
ಕೊಪ್ಪಳ, ಜೂನ್ 19; ಮುಂಗಾರು ಮಳೆ ವಿಳಂಬದ ಕಾರಣ ರಾಜ್ಯದ ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಭಾರೀ ಕುಸಿತವಾಗಿದೆ. ಹೊಸಪೇಟೆಯ ತುಂಗಭದ್ರಾ ಡ್ಯಾಂನಲ್ಲಿ 2.84 ಟಿಎಂಸಿ ಅಡಿ ನೀರು ಮಾತ್ರ ಬಳಕೆಗೆ ಲಭ್ಯವಿದೆ. ಇದರ ನಡುವೆಯೇ ರಾಯಚೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ನೀರು ಹರಿಸಲಾಗಿದೆ.
ಕರ್ನಾಟಕದ 4 ಜಿಲ್ಲೆಗಳು, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಗೆ ನೀರಿನ ಆಧಾರವಾಗಿರುವ ತುಂಗಭದ್ರಾ ಜಲಾಶಯದ ಒಟ್ಟು ಸಾಮರ್ಥ್ಯ 105.78 ಟಿಎಂಸಿ ಅಡಿ. ಆದರೆ ಈಗ ಡ್ಯಾಂನಲ್ಲಿ 4.84 ಟಿಎಂಸಿ ಅಡಿ ಮಾತ್ರ ನೀರಿದೆ. ಇದರಲ್ಲಿ 2 ಟಿಎಂಸಿ ಅಡಿ ಡೆಡ್‌ಸ್ಟೋರೇಜ್ ಆಗಿದ್ದು, ಲಭ್ಯವಿರುವ ನೀರು ಕೇವಲ 2.84 ಟಿಎಂಸಿ ಅಡಿ ಮಾತ್ರ.

ಜಲಾಶಯದಲ್ಲಿ ಕಳೆದ ವರ್ಷ ಇದೇ ಸಮಯದಲ್ಲಿ 40.47 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಶಿವಮೊಗ್ಗ ಸುತ್ತಮುತ್ತಲು ಮಳೆಯಾಗದ ಕಾರಣ ತುಂಗ ಮತ್ತು ಭದ್ರಾ ನದಿಗಳ ನೀರಿನ ಮಟ್ಟ ಕಡಿಮೆಯಾಗಿದೆ. ಆದ್ದರಿಂದ ಜಲಾಶಯಕ್ಕೆ ಒಳಹರಿವು ಬಂದ್ ಆಗಿದೆ. ಜೂನ್ 19 ಬಂದರೂ ಮಲೆನಾಡಿನಲ್ಲಿ ಮಳೆಯ ಸುಳಿವಿಲ್ಲ, ಸುಡು ಬಿಸಿಲಿನಿಂದ ಜನರು ಕಂಗಾಲಾಗಿದ್ದಾರೆ.
ಡ್ಯಾಂ ನೀರಿನ ಮಟ್ಟ ಇನ್ನೂ ಕುಸಿತವಾದರೆ ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ರಾಯಚೂರು ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು ಡ್ಯಾಂ ನಿಂದ ರಾಯಚೂರು ಜಿಲ್ಲೆಯ ಗಣೇಕಲ್ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ. ಆದ್ದರಿಂದ ಡ್ಯಾಂ ಹೊರ ಹರಿವು 1,075 ಕ್ಯೂಸೆಕ್ ಆಗಿದೆ.
ರಾಯಚೂರು ಪಟ್ಟಣಕ್ಕೆ ನೀರು; ರಾಯಚೂರು ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ತುಂಗಭದ್ರಾ ಜಲಾಶಯದಿಂದ ರಾಯಚೂರು ಜಿಲ್ಲೆ ಗಣೇಕಲ್ ಜಲಾಶಯಕ್ಕೆ (ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ 0 ರಿಂದ 104 ಮೈಲ್) ಜೂನ್ 16ರಿಂದ ಜೂನ್ 23ರವರೆಗೆ ನೀರು ಹರಿಸಲಾಗುತ್ತಿದೆ. ಈ ಕುರಿತು ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ತುಂಗಭದ್ರಾಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಎಲ್. ಬಸವರಾಜ್ ಮಾಹಿತಿ ನೀಡಿದ್ದಾರೆ.

ತುಂಗಭದ್ರಾ ಜಲಾಶಯದಲ್ಲಿ 2023-24ನೇ ಜಲವರ್ಷದಲ್ಲಿ ನೀರಿನ ಲಭ್ಯತೆ ಆಧರಿಸಿ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರ ಆದೇಶದ ಮೇರೆಗೆ ನೀರು ಹರಿಸಲಾಗುತ್ತಿದ್ದು, ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ತಮ್ಮ ವ್ಯಾಪ್ತಿಯಲ್ಲಿನ ತೂಬುಗಳ ಗೇಟ್‌ಗಳನ್ನು ಬಂದು ಮಾಡಿ ನಿಗದಿತ ಪ್ರಮಾಣದ ನೀರನ್ನು ಹರಿಸಿ ಗಣೇಕಲ್ ಜಲಾಶಯವನ್ನು ತುಂಬಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಕಾಲುವೆಯಲ್ಲಿ ಮತ್ತು ಕಾಲುವೆಯ ಅಂಚಿನಲ್ಲಿ ಓಡಾಡುವುದು, ಕಾಲುವೆಯಿಂದ ನೀರನ್ನು ಜನಸಾಮಾನ್ಯರು ಅಥವಾ ರೈತರು ಬಳಸುವುದನ್ನು ಮತ್ತು ಎತ್ತಿಕೊಳ್ಳುವುದನ್ನು ನಿಷೇಧದಿಸಲಾಗಿದೆ. ಎಲ್ಲಾ ಜನಸಾಮಾನ್ಯರಿಗೂ ಹಾಗೂ ರೈತ ಭಾಂದವರು ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ನೀರಿನ ಲಭ್ಯತೆ ಕುರಿತು ಮಾತನಾಡಿದ್ದು, "ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವ ಕಾರಣ ವಿಜಯನಗರ ಜಿಲ್ಲೆ, ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ವಿಜಯನಗರ ಜಿಲ್ಲೆಯಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಇಲ್ಲ" ಎಂದು ಹೇಳಿದ್ದಾರೆ.
"ಶಿವಮೊಗ್ಗ ಮತ್ತು ಸುತ್ತಮುತ್ತಲು ಮುಂಗಾರು ಮಳೆ ಇನ್ನೂ ವಿಳಂಬವಾದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಆಗ ಡೆಡ್‌ಸ್ಟೋರೇಜ್ ನೀರನ್ನು ಕುಡಿಯಲು ಮಾತ್ರ ಬಳಕೆ ಮಾಡಬೇಕಾಗುತ್ತದೆ" ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications