Tungabhadra Dam: ಮುರಿದ ತುಂಗಭದ್ರಾ ಡ್ಯಾಂ ಗೇಟ್, ತುರ್ತು ಸಭೆ ಕರೆದ ಡಿಕೆಶಿ
ಬೆಂಗಳೂರು, ಆಗಸ್ಟ್ 11: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಮುರಿದು ಹೋಗಿದೆ. ಅಪಾರ ನೀರು ಡ್ಯಾಂನಿಂದ ನದಿಗೆ ಹರಿದು ಹೋಗುತ್ತಿದೆ. ನದಿ ಪಾತ್ರದ ಜನರು ನದಿಯ ನೀರಿನ ಮಟ್ಟದ ಕುರಿತು ಆತಂಕಗೊಂಡಿದ್ದಾರೆ. ತಜ್ಞರ ತಂಡ ಡ್ಯಾಂಗೆ ಆಗಮಿಸಿದ್ದು, ಕ್ರೆಸ್ಟ್ ಗೇಟ್ ದುರಸ್ತಿ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.
ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಭಾನುವಾರ ಮಧ್ಯಾಹ್ನ ಹೊಸಪೇಟೆಗೆ ಆಗಮಿಸಲಿದ್ದಾರೆ. ಅವರು ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯನ್ನು ಕರೆದಿದ್ದಾರೆ. ಇದಕ್ಕೂ ಮೊದಲು ಚೈನ್‌ಲಿಂಕ್ ಮುರಿದಿರುವ ಕುರಿತು ಅಧಿಕಾರಿಗಳಿಂದ ವರದಿ ಕೇಳಿದ್ದಾರೆ.

ಕೊಪ್ಪಳ-ಹೊಸಪೇಟೆ ಗಡಿಯ ಮುನಿರಾಬಾದ್‌ನಲ್ಲಿ ತುಂಗಭದ್ರಾ ಡ್ಯಾಂ ಇದೆ. ಶನಿವಾರ ಮಧ್ಯರಾತ್ರಿ ಡ್ಯಾಂನ ಕ್ರೆಸ್ಟ್ ಗೇಟ್ ನಂಬರ್ 19ರ ಚೈನ್ ಲಿಂಕ್ ಮುರಿದು ಹೋಗಿದೆ. ಆದ್ದರಿಂದ ಜಲಾಶಯದ ನೀರು ವ್ಯರ್ಥವಾಗಿ ನದಿಗೆ ಹರಿದು ಹೋಗುತ್ತಿದೆ.
ಸದ್ಯ ಜಲಾಶಯದಿಂದ ತುಂಗಭದ್ರಾ ನದಿಗೆ 1.35 ಲಕ್ಷ ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ಗೇಟ್ ನಂಬರ್ 19ರ ಮೇಲೆ ಒತ್ತಡ ಹೆಚ್ಚಾಗಿದ್ದು, ಈ ಒಂದು ಗೇಟ್‌ನಿಂದಲೇ 35 ಸಾವಿರ ಕ್ಯುಸೆಕ್‌ಗೂ ಅಧಿಕ ನೀರು ನದಿಗೆ ಹೋಗುತ್ತಿದೆ. ಗೇಟ್ ಮುರಿದಿರುವ ಪರಿಣಾಮ ಭಾನುವಾರ ಡ್ಯಾಂಗೆ ಜನರ ಭೇಟಿಯನ್ನು ನಿಷೇಧಿಸಲಾಗಿದೆ.
ಹೈದರಾಬಾದ್, ಚೆನ್ನೈನಿಂದ ತಜ್ಞರ ತಂಡ ಡ್ಯಾಂಗೆ ಆಗಮಿಸಿದೆ. ದುರಸ್ತಿ ಕಾರ್ಯವನ್ನು ಕೈಗೊಳ್ಳುವ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಡ್ಯಾಂ ಪೂರ್ಣ ಭರ್ತಿಯಾಗಿದ್ದು, ದುರಸ್ತಿ ಕಾರ್ಯವನ್ನು ನಡೆಸುವುದು ಸವಾಲಿನ ಕೆಲಸವಾಗಿದೆ. ಡಿ. ಕೆ. ಶಿವಕುಮಾರ್ ಅಧಿಕಾರಿಗಳ ಜೊತೆಯೂ ದುರಸ್ತಿ ಕುರಿತು ಚರ್ಚಿಸಲಿದ್ದಾರೆ.
ಜಿಲ್ಲಾಧಿಕಾರಿಗಳ ಪ್ರಕಟಣೆ: 19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಮುರಿದ ಬಗ್ಗೆ ವಿಜಯನಗರ ಜಿಲ್ಲಾಧಿಕಾರಿಗಳು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ರಾತ್ರಿ 11:10ರ ಸುಮಾರಿಗೆ ತುಂಗಭದ್ರಾ ಅಣೆಕಟ್ಟಿನ ಗೇಟ್ ನಂ 19ರ ಚೈನ್ ಲಿಂಕ್ ಕಟ್ ಆಗಿದ್ದು, ನದಿಗೆ 55 ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ ಸಾರ್ವಜನಿಕರು ಮತ್ತು ನದಿ ಪಾತ್ರದ ಜನರು ಆತಂಕ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.
ತಜ್ಞರ ಮಾಹಿತಿಯ ಮೇಲೆ ಹೆಚ್ಚಿನ ನೀರು ಬಿಡಲಾಗುವುದು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ. 15 ದಿವಸಗಳ ಹಿಂದೆ ಸುಮಾರು 1,80,000ಕ್ಕೂ ಅಧಿಕ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿತ್ತು. ಆಗ ನದಿ ಪಾತ್ರದ ಜನರಿಗೆ ಯಾವುದೇ ತೊಂದರೆ ಆಗಿರುವುದಿಲ್ಲ.
ಹಾಗಾಗಿ ಯಾರೂ ಆತಂಕ ಪಡಬಾರದಾಗಿ ಕೋರಲಾಗಿದೆ. ಡ್ಯಾಮೇಜ್ ಗೇಟ್ ಅನ್ನು ರಿಪೇರಿ ಮಾಡುವ ಸಲುವಾಗಿ ತಜ್ಞರು ಪರಿಶೀಲಿಸಿ ಕೂಡಲೇ ಕ್ರಮ ವಹಿಸಲು ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, "ಹೊಸ ಗೇಟ್ ತಯಾರಿ ಹೊಣೆಯನ್ನು ಹೊಸಪೇಟೆಯ ನಾರಾಯಣ ಎಂಜಿನಿಯರಿಂಗ್ ಕಂಪನಿಗೆ ವಹಿಸಲಾಗಿದೆ. 19ನೇ ಗೇಟ್ ಲಿಂಕ್ ಚೈನ್ ಬಲಭಾಗದ ಕೊಂಡಿ ಕಳಚಿದೆ. ಗೇಟ್ ನೂರು ಮೀಟರ್ ದೂರ ಕೊಚ್ಚಿಕೊಂಡು ಹೋಗಿದೆ" ಎಂದು ಸಚಿವರು ಹೇಳಿದ್ದಾರೆ.












Click it and Unblock the Notifications