ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಗೆ ಅಭಿಮಾನಿಗಳಿಂದ ನಾಣ್ಯದ ತುಲಾಭಾರ ಸೇವೆ
ಬಳ್ಳಾರಿ, ಅಕ್ಟೋಬರ್, 23: ಅಭಿಮಾನಿಯೊಬ್ಬರು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ನಾಣ್ಯದ ತುಲಾಭಾರ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಕೃಷ್ಣಾನಗರ ಕ್ಯಾಂಪ್‌ನಲ್ಲಿ ನಾಣ್ಯದ ತುಲಾಭಾರ ಕಾರ್ಯಕ್ರಮ ನಡೆದಿದೆ. ಬಳ್ಳಾರಿಯ ಕೃಷ್ಣಾನಗರ ಕ್ಯಾಂಪ್‌ನ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ನಾಣ್ಯದ ತುಲಾಭಾರ ಮಾಡಿದ್ದಾರೆ.
ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರೆಡ್ಡಿ ಅಭಿಮಾನಿ ಆಲಪಾಟಿ ಶ್ರೀನಿವಾಸನಿಂದ ಲೋಕ ಕಲ್ಯಾಣಾರ್ಥ ಗಣಪತಿ ಹೋಮ ಮತ್ತು ತುಲಾಭಾರ ಆಯೋಜನೆ ಮಾಡಲಾಗಿತ್ತು. ಹೋಮ ಹಾಗೂ ಪೂಜೆಯಲ್ಲಿ ರೆಡ್ಡಿ ದಂಪತಿ ಎರಡು ಗಂಟೆಗಳ ಕಾಲ ಪಾಲ್ಗೊಂಡರು. ಬಳಿಕ ಜನಾರ್ದನ ರೆಡ್ಡಿಗೆ ನಾಣ್ಯದ ತುಲಾಭಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೋಮದ ನಂತರ ಜನಾರ್ದನ ರೆಡ್ಡಿಯವರ ತುಲಾಭಾರವು ಮಂತ್ರಘೋಷಗಳ ಮಧ್ಯೆ ನಡೆಯಿತು. ರೆಡ್ಡಿಯವರ ಫೋಟೋ ತೆಗೆಯಲು ಜನರು ಮುಗಿಬಿದಿದ್ದು, ಹೋಮ ಕಾರ್ಯಕ್ರಮದಲ್ಲಿ ರೆಡ್ಡಿಯವರ ಅಭಿಮಾನಿಗಳು, ಆಪ್ತರು ಭಾಗಿಯಾಗಿದ್ದರು.
ಈ ಹಿಂದೆಯೂ ರೆಡ್ಡಿಗೆ ತುಲಾಭಾರ ಸೇವೆ
ಈ ಹಿಂದೆಯೂ ಸಹ ಜನಾರ್ದನ ರೆಡ್ಡಿ ಅವರು 55ನೇ ವಸಂತಕ್ಕೆ ಕಾಲಿಟ್ಟಾಗ ಅಭಿಮಾನಿಗಳು ಬಳ್ಳಾರಿಯ ದುರ್ಗಮ್ಮ ದೇಗುಲದಲ್ಲಿ ಜನಾರ್ದನ ರೆಡ್ಡಿಗೆ ತುಲಾಭಾರ ಸೇವೆ ನಡೆಸಿದ್ದರು. ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯಕ್ಕೆ ಜನಾರ್ದನ ರೆಡ್ಡಿ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ನಂತರ ದೇವಸ್ಥಾನದ ಆವರಣದಲ್ಲಿ 55 ಬೆಳ್ಳಿ ನಾಣ್ಯ, 55 ಬಂಗಾರದ ನಾಣ್ಯ ಜೊತೆಗೆ ಐದು ರೂಪಾಯಿ ಮತ್ತು ಹತ್ತು ರೂಪಾಯಿ ನಾಣ್ಯದಿಂದ ತುಲಾಭಾರ ನಡೆಸಲಾಗಿತ್ತು.

ನವರಾತ್ರಿಯ ಹಿನ್ನೆಲೆ ನಗರದ ಆದಿ ದೇವತೆ ಶ್ರೀಕನಕ ದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಿದ್ದ ಗಾಲಿ ರೆಡ್ಡಿಗೆ ದೀಪಾವಳಿ ಸಂಭ್ರಮವನ್ನು ಸ್ವಂತ ಊರಿನಲ್ಲೇ ಕಾಣಲು ಸುಪ್ರೀಂಕೋರ್ಟ್ ಅನುಮತಿಸಿದೆ. ನವರಾತ್ರಿ ಸಂದರ್ಭದಲ್ಲಿ ಮಾತನಾಡಿದ್ದ ರೆಡ್ಡಿ, ನನ್ನ ಮೇಲೆ ಕೇಸ್ ಆಗಿ ಹನ್ನೆರಡು ವರ್ಷ ಕಳೆದಿವೆ. ಕಳೆದ ಹನ್ನೆರಡು ವರ್ಷಗಳಿಂದ ಕೇಸ್ ನಡೆಯುತ್ತಿಲ್ಲ. ನಾನು ಬಳ್ಳಾರಿಯಲ್ಲಿ ಇರುವುದಕ್ಕೆ ಅಧಿಕಾರಿಗಳು ಪದೇ ಪದೇ ಕೋರ್ಟ್‌ನಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿ ದಿನ ವಿಚಾರಣೆ ನಡೆಸುವಂತೆ ಕೊರ್ಟ್‌ಗೆ ಕೇಳಿದ್ದೇನೆ. ಮೂರ್ನಾಲ್ಕು ತಿಂಗಳಲ್ಲೇ ಪ್ರಕರಣ ಇತ್ಯರ್ಥ ಮಾಡಿ ಎಂದು ಕೇಳಿದ್ದೇನೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications