ಬಳ್ಳಾರಿ: ಆತಿಥ್ಯ ಕ್ಷೇತ್ರದ ವಿವಿಧ ತರಬೇತಿ, ಸ್ಟೈಫಂಡ್ ವಿವರಗಳು
ಬಳ್ಳಾರಿ, ಮಾರ್ಚ್ 22: ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ, ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಮಾಸಿಕ ಸ್ಟೈಫಂಡ್ ಸಹಿತ ತರಬೇತಿಯನ್ನು ನೀಡುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಐದು ತಿಂಗಳ ಅವಧಿಯ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಆಸಕ್ತರು ಅಗತ್ಯ ದಾಖಲೆಗಳ ಜೊತೆ ಅರ್ಜಿಗಳನ್ನು ಸಲ್ಲಿಕೆ ಮಾಡಲು ಏಪ್ರಿಲ್ 3 ಕೊನೆಯ ದಿನವಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ 2ನೇ ಹಂತದಲ್ಲಿ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

ಅಭ್ಯರ್ಥಿಗಳಿಗೆ ವಿವರಗಳು: ಆಹಾರ ಮತ್ತು ಪಾನೀಯ ಸೇವಾ ವ್ಯವಸ್ಥಾಪಕ ತರಬೇತಿ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಅಭ್ಯರ್ಥಿ ಹೊಂದಿರಬೇಕು. 20 ರಿಂದ 45 ವರ್ಷದೊಳಗಿನವರಾಗಿರಬೇಕು. ಈ ತರಬೇತಿ ಅವಧಿ ನಾಲ್ಕು ತಿಂಗಳು.
ಬಹು ವಿಧದ ಅಡುಗೆಯವರು ತರಬೇತಿ. ಅಭ್ಯರ್ಥಿ 8ನೇ ತರಗತಿ ಉತ್ತೀರ್ಣರಾಗಿರಬೇಕು. 20 ರಿಂದ 45 ವರ್ಷದೊಳಗಿನವರಾಗಿರಬೇಕು. ಈ ತರಬೇತಿ ಐದು ತಿಂಗಳ ಅವಧಿಯದ್ದಾಗಿದೆ.
ಆಸಕ್ತರು ಅರ್ಜಿಗಳನ್ನು ಕಮಲಾಪುರದ ಲೋಟಸ್ ಮಹಲ್ ಹತ್ತಿರದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಏಪ್ರಿಲ 3ರೊಳಗಾಗಿ ಕಛೇರಿಗೆ ಸಲ್ಲಿಸಬೇಕು. ಈಗಾಗಲೇ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್‌ಗಳಲ್ಲಿ ಉದ್ಯೋಗ ಖಾತರಿಯಾಗಿದೆ.
ತರಬೇತಿ ಪಡೆಯುವ ವೇಳೆ ಅಭ್ಯರ್ಥಿಗೆ ರೂ. 2000ರಂತೆ ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿಗೆ ಹಾಜರಾಗುವವರಿಗೆ ವಸತಿ, ಊಟೋಪಚಾರ ಹಾಗೂ ಸಮವಸ್ತ್ರ ನೀಡಲಾಗುವುದು. ತರಗತಿಯ ತರಬೇತಿ ಜೊತೆಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್‌ಗಳಲ್ಲಿ ಉದ್ಯೋಗ ತರಬೇತಿ ಸಹ ನೀಡಲಾಗುವುದು.
ಐಹೆಚ್‌ಎಂ ಬೆಂಗಳೂರು ಮತ್ತು ಎಫ್‌ಸಿಐ ಮೈಸೂರು ಸಂಸ್ಥೆಗಳು ಪ್ರತಿಷ್ಠಿತ ಅತಿಥ್ಯ ಕ್ಷೇತ್ರದಲ್ಲಿ ತರಬೇತಿ ನೀಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿದ್ದು ಈ ಸಂಸ್ಥೆಗಳಿಂದ ತರಬೇತಿ ನೀಡಿ ಪ್ರಮಾಣ ಪತ್ರಗಳನ್ನು ನೀಡುವುದರಿಂದ ರಾಜ್ಯದೊಳಗೆ ಅಲ್ಲದೇ ದೇಶದ ಯಾವುದೇ ಭಾಗದ ಹೋಟೆಲ್ ಉದ್ಯಮದಲ್ಲಿ ಕೆಲಸ ಖಾತರಿಯಾಗುವುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಮಲಾಪುರದ ಲೋಟಸ್ ಮಹಲ್ ಹತ್ತಿರದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಕಚೇರಿಯನ್ನು ಸಂಪರ್ಕಿಸಿ. ಕರೆ ಮಾಡಲು ದೂರವಾಣಿ ಸಂಖ್ಯೆ 08394-295640.
ದಾವಣಗೆರೆಯಲ್ಲಿ ಉದ್ಯೋಗ ಮೇಳ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ಮಾರ್ಚ್ 25ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಛೇರಿಯ ಕೊಠಡಿ ಸಂಖ್ಯೆ-51ರಲ್ಲಿನ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಖಾಸಗಿ ಸಂಸ್ಥೆಗಳು ಭಾಗವಹಿಸುತ್ತಿದ್ದು, ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎಸ್‍ಎಸ್‍ಎಲ್‍ಸಿ, ಐಟಿಐ, ಡಿಪ್ಲೋಮಾ, ಪಿಯುಸಿ, ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಕನಿಷ್ಠ 5 ಸ್ವವಿವರದ ಪ್ರತಿ ಮತ್ತು ಆಧಾರ್ ನಂಬರ್‌ನೊಂದಿಗೆ ಭಾಗವಹಿಸಿ, ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7483808321 ಸಂಪರ್ಕಿಸಬಹುದು.












Click it and Unblock the Notifications