T Narasipura Accident: ಸಂಗನಕಲ್ಲು ಗ್ರಾಮದಲ್ಲಿ 9 ಮೃತದೇಹಗಳ ಸಾಮೂಹಿಕ ಅಂತ್ಯಕ್ರಿಯೆ, ಆಕ್ರಂದನ

ಬಳ್ಳಾರಿ, ಮೇ, 30: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕುರುಬೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಸಂಗನಕಲ್ಲು ಗ್ರಾಮದ 9 ಜನರ ಮೃತದೇಹಗಳನ್ನು ಮಂಗಳವಾರ (ಮೇ 30) ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಯಿತು.

ಸಂಗನಕಲ್ಲು ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ವಿಧಿವಿಧಾನಗಳಿಂದ ಒಂದೇ ಸಾಲಿನಲ್ಲಿ ಗುಂಡಿಗಳನ್ನು ಅಗೆದು, ಏಕಕಾಲದಲ್ಲಿ ಮೃತದೇಹಗಳನ್ನು ಮಣ್ಣು ಮಾಡಲಾಯಿತು. ಮೈಸೂರಿನಿಂದ ನಾಲ್ಕು ಆಂಬ್ಯುಲೆನ್ಸ್‌ಗಳಲ್ಲಿ 9 ಜನರ ಮೃತದೇಹಗಳನ್ನು ತರಲಾಯಿತು. ಮೃತದೇಹಗಳನ್ನು ಕೆಲಹೊತ್ತು ಮನೆ ಅಂಗಳದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಈ ವೇಳೆ ಕೆಲವರು ಹೂಮಾಲೆ ಹಾಕಿ ನಮಸ್ಕರಿಸಿ ಅಂತಿಮ ದರ್ಶನ ಪಡೆದರು.

T Narasipura Accident: Mass Funeral in Sanganakallu village

ಬಳಿಕ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅದೇ ಆಂಬ್ಯುಲೆನ್ಸ್‌ಗಳಲ್ಲಿ ಮೃತದೇಹಗಳನ್ನು ಸಮೀಪದ ವೀರಶೈವ ರುದ್ರಭೂಮಿಗೆ ತಂದು ಸಾಮೂಹಿಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕೊನೆಗೆ ಸಾರ್ವಜನಿಕರು ಮಣ್ಣು ನೀಡಿದ ಬಳಿಕ ಜೆಸಿಬಿ ಯಂತ್ರದಿಂದ ಕುಣಿಗಳನ್ನು ಮುಚ್ಚಲಾಯಿತು.

ಸ್ಥಳಕ್ಕೆ ಮಾಜಿ ಸಚಿವ ಬಿ.ಶ್ರೀರಾಮುಲು, ಸಚಿವ ಬಿ.ನಾಗೇಂದ್ರ ಅವರ ಸಹೋದರ ಬಿ.ವೆಂಕಟೇಶ್ ಪ್ರಸಾದ್, ಡಿಸಿ ಪವನ್ ಕುಮಾರ್ ಮಾಲಪಾಟಿ, ಎಡಿಸಿ ಮೊಹಮ್ಮದ್ ಝುಬೇರಾ, ಡಿಹೆಚ್ಒ ಹೆಚ್.ಎಲ್.ಜನಾರ್ಧನ ಸೇರಿ ಹಲವರು ಸ್ಥಳದಲ್ಲೇ ಇದ್ದು, ಅಂತ್ಯಕ್ರಿಯೆ ನೆರವೇರಿಸಲು ಅನುವು ಮಾಡಿಕೊಟ್ಟರು.

ಇನ್ನು ರಾಜ್ಯ ಸರ್ಕಾರ ಮೃತ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರದಿಂದ ಕೂಡ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ಎರಡು ಲಕ್ಷದ ಬದಲಿಗೆ ತಲಾ 5 ಲಕ್ಷ ಪರಿಹಾರ ನೀಡಬೇಕು. ನಮ್ಮ ಸರ್ಕಾರದ ಅವಧಿಯಲ್ಲಿ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿತ್ತು. ಅದೇ ರೀತಿ ಈಗಿನ ರಾಜ್ಯ ಸರ್ಕಾರ ತಲಾ 5 ಲಕ್ಷ ಪರಿಹಾರ ನೀಡುವಂತೆ ಮಾಜಿ ಸಚಿವ ಶ್ರೀರಾಮುಲು ಒತ್ತಾಯಿಸಿದರು.

ಈ ವೇಳೆ ಡಿಸಿ ಪವನ್‌ ಕುಮಾರ್ ಮಾಲಪಾಟಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಘೋಷಿಸಿರುವ ಪರಿಹಾರ ವಿತರಿಸಲು ಮೃತರಿಗೆ ಸಂಬಂಧಪಟ್ಟವರ ಬ್ಯಾಂಕ್ ಅಕೌಂಟ್ ಮಾಹಿತಿ ನೀಡುವಂತೆ ಸಿಎಂ ಕಚೇರಿಯಿಂದ ಹೇಳಿದ್ದಾರೆ. ಈಗಾಗಲೇ ಎಡಿಸಿ ಬ್ಯಾಂಕ್ ಅಕೌಂಟ್ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಇನ್ನೂ ಎರಡು ದಿನದಲ್ಲಿ ಸಿಎಂ ಪರಿಹಾರ ಅವರ ಅಕೌಂಟ್‌ಗೆ ಜಮಾ ಆಗಲಿದೆ ಎಂದು ಹೇಳಿದರು.

ಇನ್ನು ಮೂವರು ಗಾಯಾಳುಗಳು ಮೈಸೂರು ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರ ಪೈಕಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಈ ಕುರಿತು ನಮ್ಮ ಡಿಹೆಚ್‌ಒ ಅವರು ಆಸ್ಪತ್ರೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದಾರೆ ಎಂದು ತಿಳಿಸಿದರು.

ಗಾಯಾಳುಗಳನ್ನು ಭೇಟಿಯಾದ ಎಚ್.ಸಿ.ಮಹದೇವಪ್ಪ

ಇನ್ನು ಈ ಸಂಬಂಧ ಸೋಮವಾರ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಚೆಲುವಾಂಬ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು. ನಂತರ ಮಾತನಾಡಿದ ಸಚಿವರು, ಈ ಘಟನೆ ದುರದೃಷ್ಟಕರವಾದದ್ದು. ಹತ್ತು ಮಂದಿ ಮೃತಪಟ್ಟಿರುವುದು ಮನಸ್ಸಿಗೆ ತುಂಬಾ ನೋವಾಗಿದೆ ಎಂದರು.

ಈಗಾಗಲೇ ಸರ್ಕಾರ ಮೃತರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಹಾಗೆಯೇ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಬಳ್ಳಾರಿಯ ಜನಾರ್ಧನ್‌, ಪುನೀತ್‌, ಸಂಗನಕಲ್ ಗ್ರಾಮದ ಶಶಿಕುಮಾರ್ ಸಹ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ

ಮೈಸೂರು ಜಿಲ್ಲೆ ತಿ.ನರಸೀಪುರ ಸಮೀಪದ ಕುರುಬೂರು ಬಳಿ ಸೋಮವಾರ ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಮೂವರಿಗೆ ನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಿಕೊಡಲಾಯಿತು. ಬಳ್ಳಾರಿ ಮೂಲದ ಇನ್ನೋವಾ ಕಾರಿನಲ್ಲಿ ತೀವ್ರ ಗಾಯಗೊಂಡಿದ್ದ ಜನಾರ್ಧನ್, ಶಶಿಕುಮಾರ್ ಹಾಗೂ ಬಾಲಕ ಪುನೀತ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ಕರೆ ತರಲಾಗಿತ್ತು.

ಗಾಯಾಳುಗಳಿಗೆ ಜಿಲ್ಲಾ ಶಸ ಚಿಕಿತ್ಸಕ (ಡಿ.ಎಸ್) ಡಾ. ಕೃಷ್ಣಪ್ರಸಾದ್ ಅವರೇ ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೆ, ಮೂವರ ತಲೆಗೂ ತೀವ್ರ ರೀತಿಯಲ್ಲಿ ಪೆಟ್ಟಾಗಿತ್ತು. ಅದರಲ್ಲೂ ಜನಾರ್ಧನ್ ಅವರ ಪರಿಸ್ಥಿತಿ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಅವರನ್ನು ರವಾನಿಸಲಾಯಿತು.

ಇನ್ನು ಗಾಯಾಳಗಳ ತಲೆ ತೀವ್ರ ಪೆಟ್ಟಾಗಿದ್ದ ಕಾರಣ ನರರೋಗ ತಜ್ಞರ ಸಲಹೆ ಅಗತ್ಯವಿತ್ತು. ಆದ್ದರಿಂದ ನಾವು ಮೂವರು ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಿ ಮೈಸೂರಿಗೆ ರವಾನಿಸಿದೆವು ಎಂದು ಜಿಲ್ಲಾ ಶಸ ಚಿಕಿತ್ಸಕ ಡಾ.ಕೃಷ್ಣಪ್ರಸಾದ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+