ಹಂಪಿಯ ವಿರೂಪಾಕ್ಷ ದೇಗುಲದ ಕಲ್ಲಿನ ಕಂಬಗಳು ಕುಸಿತ, ಪ್ರವಾಸಿಗರಿಗೆ ಆತಂಕ
ಬಳ್ಳಾರಿ, ಆಗಸ್ಟ್, 31: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ವಿಶ್ವವಿಖ್ಯಾತ ಹಂಪಿಯ ದೇವಸ್ಥಾನದ ಒಳಭಾಗದ ಮಂಟಪವೊಂದು ಕುಸಿದು ಬಿದ್ದಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದಾರೆ. ಹಂಪಿಯಿಂದ ಕಮಲಾಪುರ ರಸ್ತೆಗೆ ತೆರಳುವ ಮಾರ್ಗ ಮಧ್ಯದಲ್ಲಿರುವ ನೆಲಸ್ತರದ ಶಿವ ದೇವಾಲಯದಲ್ಲಿ ಮಂಟಪ ಕುಸಿದಿದೆ.
ವಿರೂಪಾಕ್ಷ ದೇಗುಲದ ಕಲ್ಲಿನ ಕಂಬಗಳು ಕುಸಿತ
ಪ್ರಸನ್ನ ವಿರೂಪಾಕ್ಷ ದೇಗುಲದ ಕಲ್ಲಿನ ಕಂಬಗಳು ನೆಲಕ್ಕುರುಳಿವೆ. ಮೂರು ಕಲ್ಲಿನ ಕಂಬಗಳು ನೆಲಕ್ಕುರುಳಿದ್ದು, ಇವುಗಳ ಜೊತೆಗೆ ಮಣ್ಣಿನ ತಡೆಗೋಡೆ ಸಹ ಕುಸಿದು ಬಿದ್ದಿದೆ. ಇನ್ನು ಜಿಲ್ಲೆಯಲ್ಲಿ ವರುಣ ಆರ್ಭಟಿಸಿದ್ದು, ಶಿವ ದೇವಾಲಯವು ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ ದೇವಾಲಯವನ್ನು ನೋಡಲು ಬರುವ ಪ್ರವಾಸಿಗರು ನಿರಾಸೆಯಿಂದಲೇ ಹಿಂತಿರುಗುತ್ತಿದ್ದಾರೆ. ಪುರಾತತ್ವ ಇಲಾಖೆ ಮಾತ್ರ ಇದುವರೆಗೂ ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ಹೊರಹಾಕಿದರು.

ಪುರಾತತ್ವ ಇಲಾಖೆಯ ವಿರುದ್ಧ ಆಕ್ರೋಶ
ಈಗ ನಡೆದಿರುವ ಘಟನೆಗೆ ರಾಜ್ಯ ಹಾಗೂ ಕೇಂದ್ರ ಪುರಾತತ್ವ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಗಳು ಕೇಳಿಬರುತ್ತಿವೆ. ಸ್ಮಾರಕಗಳ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಈ ಇಲಾಖೆಗಳು ಶಿಥಿಲಾವಸ್ಥೆಯಲ್ಲಿರುವ ದೇವಾಲಯಗಳು ಹಾಗೂ ಸ್ಮಾರಕಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಈಗಾಗಲೇ ಹಲವಾರು ಬಾರಿ ಹಂಪಿ ರಥ ಬೀದಿಯ ಕೆಲ ಮಂಟಪಗಳು, ವಿರೂಪಾಕ್ಷ ದೇವಸ್ಥಾನದ ಒಳಭಾಗದಲ್ಲಿ ಹಾಗೂ ವಿಜಯವಿಠಲ ದೇವಸ್ಥಾನದ ಬಳಿಯೂ ಮಂಟಪಗಳು ಕುಸಿದು ಬಿದ್ದಿವೆ. ಇಷ್ಟಾದರೂ ಎಚ್ಚೆತ್ತುಕೊಳ್ಳದೇ ಪುರಾತ್ವ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ಇದರ ಪರಿಣಾಮ ಶಿವ ದೇವಾಲಯದ ಒಳಗಿನ ಮಂಟಪದ ಕಂಬಗಳು ಕುಸಿದಿದೆ ಅನ್ನುವುದು ಸ್ಥಳೀಯರ ಆರೋಪ ಆಗಿದೆ.

ದೇವಾಲಯದ ಸಂರಕ್ಷಣೆಗೆ ಹಂಪಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈಗಲಾದರೂ ರಾಜ್ಯ ಹಾಗೂ ಕೇಂದ್ರ ಪುರಾತತ್ವ ಇಲಾಖೆಗಳು ಐತಿಹಾಸಿಕ ಮಹತ್ವ ಸಾರುವ ಈ ದೇಗುಲಗಳ ರಕ್ಷಣೆಗೆ ಮುಂದಾಗಬೇಕಿದೆ. ಇತ್ತ ಗಮನಹರಿಸಿ ಸರ್ಕಾರ ಸೂಕ್ತ ರೀತಿಯಲ್ಲಿ ತುರ್ತು ಕ್ರಮಕೈಗೊಳ್ಳಬೇಕು ಎಂದು ಇತಿಹಾಸ ಪ್ರೇಮಿಗಳು ಒತ್ತಾಯಿಸುತ್ತಿದ್ದಾರೆ.












Click it and Unblock the Notifications