ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್‌ ಪಕ್ಷ ತಂದುಕೊಟ್ಟ ಸ್ವಾತಂತ್ರ್ಯವನ್ನು ಬಿಜೆಪಿ ಇಂದು ಅನುಭವಿಸುತ್ತಿದ್ದಾರೆ: ಸಿದ್ದರಾಮಯ್ಯ

|
Google Oneindia Kannada News

ಬಳ್ಳಾರಿ, ಅಕ್ಟೋಬರ್ 15: ಭಾರತೀಯ ಜನತಾ ಪಕ್ಷ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆಯನ್ನು ಲಘುವಾಗಿ ಟೀಕೆ ಮಾಡುತ್ತಿದ್ದಾರೆ. ದೇಶಕ್ಕಾಗಿ ರಾಹುಲ್‌ ಗಾಂಧಿ ಕುಟುಂಬ ತ್ಯಾಗ, ಬಲಿದಾನವನ್ನು ಮಾಡಿದೆ, ಆದರೆ ದೇಶಕ್ಕೆ ಬಿಜೆಪಿಯವರ ಕೊಡುಗೆ ಏನು? ಎಂಬುದನ್ನು ಅಮಿತ್‌ ಶಾ, ಮೋದಿಗೆ ಕೇಳಬೇಕಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಕಾಂಗ್ರೆಸ್‌ ಪಕ್ಷ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಮಹಾತ್ಮ ಗಾಂಧಿ, ನೆಹರು ಆದಿಯಾಗಿ ನಮ್ಮ ಪಕ್ಷದ ಅನೇಕರು ತ್ಯಾಗ ಮಾಡಿದ್ದಾರೆ, ಹುತಾತ್ಮರಾಗಿದ್ದಾರೆ. 1925ರಲ್ಲಿ ಆರಂಭವಾದ ಆರ್‌ಎಸ್‌ಎಸ್‌ ನವರಲ್ಲಿ ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಒಬ್ಬ ವ್ಯಕ್ತಿ ಇದ್ದಾರಾ? ಕಾಂಗ್ರೆಸ್‌ ಪಕ್ಷ ತಂದು ಕೊಟ್ಟ ಸ್ವಾತಂತ್ರ್ಯವನ್ನು ಬಿಜೆಪಿಯವರು ಅನುಭವಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ದುಡ್ಡಿದ್ದರೆ ಸರಕಾರಿ ಕೆಲಸವನ್ನು ಖರೀದಿಸಬಹುದು: ರಾಹುಲ್ ಗಾಂಧಿಕರ್ನಾಟಕದಲ್ಲಿ ದುಡ್ಡಿದ್ದರೆ ಸರಕಾರಿ ಕೆಲಸವನ್ನು ಖರೀದಿಸಬಹುದು: ರಾಹುಲ್ ಗಾಂಧಿ

ರಾಹುಲ್‌ ಗಾಂಧಿ ಅವರು ಪಾದಯಾತ್ರೆ ಆರಂಭ ಮಾಡಿದ ಮೇಲೆ ಬಿಜೆಪಿ ಈಗ ಜನಸಂಕಲ್ಪ ಯಾತ್ರೆ ಹೊರಟಿದೆ. ಆದರೆ 2023ಕ್ಕೆ ಬಿಜೆಪಿಯನ್ನು ಕಿತ್ತೆಸೆದು ಮತ್ತೆ ಕಾಂಗ್ರೆಸ್‌ ಸರಕಾರವನ್ನು ಸ್ಥಾಪನೆ ಮಾಡಬೇಕು ಎಂದು ರಾಜ್ಯದ ಜನ ಸಂಕಲ್ಪ ಮಾಡಿದ್ದಾರೆ. ರಾಹುಲ್‌ ಗಾಂಧಿ ಅವರ ಪಾದಯಾತ್ರೆಗೆ ವ್ಯಕ್ತವಾಗುತ್ತಿರುವ ಅಭೂತಪೂರ್ವ ಸ್ಪಂದನೆಯಿಂದ ಬಿಜೆಪಿಗೆ ನಡುಕ ಹುಟ್ಟಿದೆ. ಅದೇ ಕಾರಣಕ್ಕೆ ಬಾಯಿಗೆ ಬಂದಂತೆ ಮಾತನಾಡಲು ಆರಂಭ ಮಾಡಿದ್ದಾರೆ ಎಂದರು.

ರಾಹುಲ್‌ ಗಾಂಧಿ ಭಾರತ ಐಕ್ಯತಾ ಯಾತ್ರೆಯನ್ನು ಕೈಗೊಂಡಿರುವುದು ಮುಂದಿನ ಲೋಕಸಭಾ ಚುನಾವಣೆಯನ್ನೋ ಅಥವಾ ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಅಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ದೇಶದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಪಾದಯಾತ್ರೆ. ಮಹತ್ಮಾ ಗಾಂಧಿ, ವಿನೋಬಾ ಭಾವೆ, ಚಂದ್ರಶೇಖರ್‌ ಪಾದಯಾತ್ರೆಯನ್ನು ಮಾಡಿದ್ದಾರೆ. ಆದರೆ ರಾಹುಲ್‌ ಗಾಂಧಿ ಅವರು ಏಕಕಾಲದಲ್ಲಿ ಸುಮಾರು 3,570 ಕಿ.ಮೀ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಇಷ್ಟೊಂದು ಉದ್ದನೆಯ ಪ್ರವಾಸ ಕೈಗೊಂಡಿರುವುದು ಇದೇ ಮೊದಲು. ಈಗಾಗಲೇ 1,000 ಕಿ.ಮೀ ನಡಿಗೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಕರ್ನಾಟಕದಲ್ಲಿ ಪಾದಯಾತ್ರೆ ಮುಗಿದ ಮೇಲೆ ಆಂದ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹೀಗೆ 12 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಾದಯಾತ್ರೆ ಸಾಗಲಿದೆ ಎಂದರು.

ಗುಂಡಿ ಬಿದ್ದ ರಸ್ತೆ ಮೇಲೆ ರಾಹುಲ್‌ ನಡಿಗೆ: 40 ಪರ್ಸೆಂಟ್‌ ಸರ್ಕಾರದ ಅಭಿವೃದ್ಧಿ ಎಂದ ಕಾಂಗ್ರೆಸ್‌ಗುಂಡಿ ಬಿದ್ದ ರಸ್ತೆ ಮೇಲೆ ರಾಹುಲ್‌ ನಡಿಗೆ: 40 ಪರ್ಸೆಂಟ್‌ ಸರ್ಕಾರದ ಅಭಿವೃದ್ಧಿ ಎಂದ ಕಾಂಗ್ರೆಸ್‌

 10% ಭರವಸೆಗಳನ್ನು ಕೂಡ ಈಡೇರಿಸಿಲ್ಲ

10% ಭರವಸೆಗಳನ್ನು ಕೂಡ ಈಡೇರಿಸಿಲ್ಲ

ರಾಹುಲ್‌ ಗಾಂಧಿ ಅವರು ನನಗೆ 5 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ಅವಕಾಶ ಕೊಟ್ಟಿದ್ದರು. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ ಮತ್ತು ಇದರ ಜೊತೆಗೆ ಹೆಚ್ಚುವರಿಯಾಗಿ 30 ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು. ಬಿಜೆಪಿ 2018ರಲ್ಲಿ ನೀಡಿದ್ದ ಚುನಾವಣಾ ಪ್ರಣಾಳಿಕೆಯ ಭರವಸೆಗಳಲ್ಲಿ 10% ಭರವಸೆಗಳನ್ನು ಕೂಡ ಈಡೇರಿಸಿಲ್ಲ. ನಾಚಿಕೆಯಾಗಬೇಕು ಬಿಜೆಪಿ ನಾಯಕರಿಗೆ. ಈ ಸತ್ಯ ಜನರಿಗೆ ಗೊತ್ತಾಗಬೇಕೋ? ಬೇಡವೋ? ಒಡೆದಿರುವ ಜನರ ಮನಸುಗಳನ್ನು ಒಂದು ಮಾಡಬೇಕು ಎಂಬ ಕಾರಣಕ್ಕೆ ರಾಹುಲ್‌ ಗಾಂಧಿ ಅವರು ಪಾದಯಾತ್ರೆ ಮಾಡುತ್ತಿದ್ದಾರೆ.

 ಪೆಟ್ರೋಲ್, ಡೀಸೆಲ್, ಗ್ಯಾಸ್‌ ಬೆಲೆ ನಿರಂತರ ಏರಿಕೆ

ಪೆಟ್ರೋಲ್, ಡೀಸೆಲ್, ಗ್ಯಾಸ್‌ ಬೆಲೆ ನಿರಂತರ ಏರಿಕೆ

ಇಂದು ಬೆಲೆ ಏರಿಕೆ ಗಗನ ಮುಟ್ಟಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಚ್ಚಾತೈಲದ ಬೆಲೆ 125 ಡಾಲರ್‌ ಇದ್ದಾಗ ಡೀಸೆಲ್‌ ಬೆಲೆ 46 ಹಾಗೂ ಪೆಟ್ರೋಲ್‌ ಬೆಲೆ 71 ರೂಪಾಯಿ ಇತ್ತು. ಇಂದು ಪೆಟ್ರೋಲ್‌ ಬೆಲೆ 102 ಹಾಗೂ ಡೀಸೆಲ್‌ ಬೆಲೆ 95 ಆಗಿದೆ. 2016ರಲ್ಲಿ ಕಚ್ಚಾತೈಲ ಬೆಲೆ 40 ರಿಂದ 50 ಡಾಲರ್‌ ಒಳಗೆ ಇದ್ದರೂ ಪೆಟ್ರೋಲ್‌ ಡೀಸೆಲ್‌ ಬೆಲೆ ಇಳಿಕೆ ಮಾಡಿಲ್ಲ. ಗ್ಯಾಸ್‌ ಬೆಲೆ 2013ರಲ್ಲಿ 414 ಇತ್ತು, ಇಂದು ಅದು 1050 ಆಗಿದೆ. ಇದನ್ನೇ ಜನರಿಗೆ ತಿಳಿಸಲು ಪಾದಯಾತ್ರೆ ಮಾಡುತ್ತಿರುವುದು. ನರೇಂದ್ರ ಮೋದಿ ಅವರು ಯುವಕರಿಗೆ ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದರು. ಅಂದರೆ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಅದರ ಬದಲಿಗೆ ಸುಮಾರು 5 ರಿಂದ 6 ಲಕ್ಷ ಸಣ್ಣ ಮತ್ತು ಮಧ್ಯಮಗಾತ್ರದ ಕೈಗಾರಿಕೆಗಳು ಮುಚ್ಚಿ ಯುವಕರ ಬದುಕು ಬೀದಿ ಪಾಲಾಗಿದೆ.

 ಸಣ್ಣ ಹಿಡುವಳಿದಾರರು ಬೀದಿಪಾಲು

ಸಣ್ಣ ಹಿಡುವಳಿದಾರರು ಬೀದಿಪಾಲು

2022ಕ್ಕೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು, ಈಗ ರೈತರು ಕೃಷಿ ಚಟುವಟಿಕೆಗಳಿಗೆ ಮಾಡುವ ಖರ್ಚು ದುಪ್ಪಟ್ಟಾಗಿದೆ. ರೈತರಿಗೆ ಕನಿಷ್ಟ ಬೆಂಬಲ ಬೆಲೆ ಕೊಡದೆ ರೈತರ ಮನೆ ಹಾಳು ಮಾಡಿದ್ದಾರೆ. ಇಂದಿರಾ ಗಾಂಧಿ ಅವರು ಜಾರಿ ಮಾಡಿದ್ದ ಭೂಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಟಾಟಾ, ಬಿರ್ಲಾ, ಅಂಬಾನಿ, ಅದಾನಿಯಂತವರು ಭೂಮಿ ಖರೀದಿಸಲು ಅವಕಾಶ ಮಾಡಿಕೊಟ್ಟು ಸಣ್ಣ ಹಿಡುವಳಿದಾರರನ್ನು ಬೀದಿಪಾಲು ಮಾಡಿದ್ದಾರೆ. ಹೀಗೆ ಆದರೆ ದೇಶ ಉಳೀತದಾ?

 ಸಾಲದ ಹೊರೆ ಹೆಚ್ಚಿಸಿದ್ದ ಮೋದಿ ಅಚ್ಚೇದಿನ್

ಸಾಲದ ಹೊರೆ ಹೆಚ್ಚಿಸಿದ್ದ ಮೋದಿ ಅಚ್ಚೇದಿನ್

ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ದೇಶದ ಸಾಲ ಇದ್ದಿದ್ದು 53 ಲಕ್ಷದ 11 ಸಾವಿರ ಕೋಟಿ. 2023ರ ವರ್ಷದ ಮಾರ್ಚ್‌ ಕೊನೆಗೆ ಅದು 155 ಲಕ್ಷ ಕೋಟಿ ಆಗುತ್ತದೆ. ಸ್ವಾತಂತ್ರ್ಯ ಬಂದ ಮೇಲಿಂದ ಇಷ್ಟು ಸಾಲ ಯಾವ ಸರಕಾರವೂ ಮಾಡಿರಲಿಲ್ಲ. ಅಚ್ಚೇದಿನ್‌ ಆಯೇಗಾ ಎಂದಿದ್ದರು, ಇದೇನಾ ಅಚ್ಚೇದಿನ್? ಇದನ್ನು ಜನರಿಗೆ ಹೇಳಬೇಕಾ ಬೇಡ್ವಾ?

 ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿ

ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿ

ದೇಶದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ, ಸಂವಿಧಾನ ಇವೆಲ್ಲವಕ್ಕೂ ಆರ್‌ಎಸ್‌ಎಸ್‌ ಮತ್ತು ಸಂಘ ಪರಿವಾರ ವಿರೋಧ ಮಾಡುತ್ತಿದೆ. ಇದನ್ನು ಬಹಿರಂಗವಾಗಿ ಮತ್ತು ಆಡಳಿತಾತ್ಮಕವಾಗಿ ಅವರು ವಿರೋಧ ಮಾಡುತ್ತಿದ್ದಾರೆ, ಇದರಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇದನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಇಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವುದು, ನಾನು ಮುಖ್ಯಮಂತ್ರಿಯಾಗಿರುವುದು ಕೂಡ ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ. ಇದನ್ನೇ ನಾಶ ಮಾಡಲು ಹೊರಟಿದ್ದೀರಲ್ವಾ ನಿಮಗೆ ನಾಚಿಕೆಯಾಗಲ್ವಾ? ಎಂದು ಅಸಮಧಾನ ಹೊರ ಹಾಕಿದರು.

ನಾನು ರಾಹುಲ್‌ ಗಾಂಧಿ ಅವರಿಗೆ ಭಾರತ ಐಕ್ಯತಾ ಯಾತ್ರೆ ಎಂಬ ದೊಡ್ಡ ಸಾಹಸಕ್ಕೆ ಕೈ ಹಾಕಿರುವುದಕ್ಕಾಗಿ ತುಂಬುಹೃದಯದಿಂದ ನಮಸ್ಕಾರ ಮಾಡುತ್ತೇನೆ, ನಾವೆಲ್ಲರೂ ರಾಹುಲ್‌ ಗಾಂಧಿ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿಯೋಣ, ಕರ್ನಾಟಕದಲ್ಲಿ ಪಾದಯಾತ್ರೆಯು ನಮ್ಮ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂಬ ಭರವಸೆಯನ್ನು ನಾನು ರಾಹುಲ್‌ ಗಾಂಧಿ ಅವರಿಗೆ ನೀಡಲು ಬಯಸುತ್ತೇನೆ. ಇದು ನೂರಕ್ಕೆ ನೂರರಷ್ಟು ಸತ್ಯ.

English summary
Leader of the Opposition of the Karnataka Legislative Assembly Siddaramaiah said, people are suffering due to unemployment and price rise, but BJP and RSS busy with disturbing peace in the country in communalpolitics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X