ಸಂತೋಷ್ ಲಾಡ್ ದೆಹಲಿಯಲ್ಲಿ ಏನು ಮಾಡುತ್ತಿದ್ದಾರೆ?
ಬಳ್ಳಾರಿ, ಏಪ್ರಿಲ್ 05 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡರು ಚುನಾವಣಾ ಪ್ರಚಾರಕ್ಕಾಗಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ದೆಹಲಿಯಲ್ಲಿ ಏನು ಮಾಡುತ್ತಿದ್ದಾರೆ?.
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಭೀಮಾನಾಯ್ಕ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಹಲವು ನಾಯಕರು ಹೇಳುತ್ತಾರೆ.
ಆದರೆ, ಭೀಮಾನಾಯ್ಕ್ ಹಾಗಲ್ಲ. ಜೆಡಿಎಸ್ ಪಕ್ಷದಿಂದ ಗೆಲುವು ಸಾಧಿಸಿ, ಪಕ್ಷವನ್ನು, ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರನ್ನು ನಿಕೃಷ್ಟವಾಗಿ ತೆಗಳಿದ್ದ ಅವರು, 'ಇಡೀ ಕಾಂಗ್ರೆಸ್ ಕರ್ನಾಟಕದಲ್ಲಿರುವಾಗ, ನೀ ಏನ್ ಮಾಡ್ತಿದ್ದೀಯಿ, ದೆಲ್ಯಾಗ?' ಅಂತ ಸಂತೋಷ್ ಲಾಡ್ ಅವರನ್ನು ಸೂಕ್ಷ್ಮವಾಗಿ ಪ್ರಶ್ನಿಸಿದ್ದಾರೆ.

ನಿಜ, ಸಂತೋಷ್ ಲಾಡ್ ಕಾಲು ನೋವಿನ ಕಾರಣಕ್ಕಾಗಿ ರಾಮ್‍ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನೋವು ಗುಣಮುಖ ಆಗದೇ ಇದ್ದಲ್ಲಿ ಸಿಂಗಾಪುರಕ್ಕೆ ಹಾರಲು ಯೋಚನೆ ಮಾಡುತ್ತಿದ್ದಾರೆ. ಅದೂ, ಗೆಳೆಯ, ತಮ್ಮನ್ನು ನಂಬಿ ಕಾಂಗ್ರೆಸ್ ಸೇರಿರುವ ಭೀಮಾನಾಯ್ಕ್ ಅವರಿಗೆ ಟಿಕೆಟ್ ಕೊಡಿಸುವ ನೆಪದಲ್ಲಿ ದೆಹಲಿ ಸೇರಿ.
ಕೆ.ಸಿ.ವೇಣುಗೋಪಾಲ್ ಸಾಮಾಜಿಕ ನ್ಯಾಯ ಪಾಲನೆ ಮಾತನಾಡುತ್ತಿದ್ದಂತೆಯೇ, ಬೆಂಗಳೂರಿನಲ್ಲಿ ಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ ಸಂತೋಷ್ ಲಾಡ್, ಭೀಮಾನಾಯ್ಕ್ ಅವರಿಂದ ಮುಖ ತಪ್ಪಿಸಿಕೊಳ್ಳಲಿಕ್ಕಾಗಿ, ಟಿಕೆಟ್‌ಗಾಗಿ ಲಾಬಿ ಮಾಡುವ ನೆಪದಲ್ಲಿ, ಕಾಲು ನೋವಿನ ಚಿಕಿತ್ಸೆ ಪಡೆಯಲು ದೆಹಲಿ ಸೇರಿದ್ದಾರೆ.
ಭೀಮಾನಾಯ್ಕ್ ಅವರು 'ಸಂತೋಷ್ ಲಾಡ್ ಟಿಕೆಟ್ ಕೊಡಿಸುತ್ತಾರೆ' ಎನ್ನುವ ಶೇ. 100 ರಷ್ಟು ಭರವಸೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸಂಚರಿಸುತ್ತಲೇ ಇದ್ದಾರೆ. ಏಪ್ರಿಲ್ 11 ಅಥವ 12 ರಂದು ಭೀಮಾನಾಯ್ಕ್ ಅವರಿಗೆ ಕಾಂಗ್ರೆಸ್ ಟಿಕೆಟ್ ಲಭಿಸುವ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.












Click it and Unblock the Notifications