ಬಳ್ಳಾರಿ ನಗರದ ಏಕಶಿಲಾ ಬೆಟ್ಟಕ್ಕೆ 'ರೋಪ್-ವೇ' ಯೋಜನೆ, ಅಪ್‌ಡೇಟ್
ಬಳ್ಳಾರಿ, ಮಾರ್ಚ್ 29: ಬಳ್ಳಾರಿ ನಗರದಲ್ಲಿರುವ ಏಕಶಿಲಾ ಬೆಟ್ಟಕ್ಕೆ 'ರೋಪ್-ವೇ' ಅಳವಡಿಸುವ ಸಂಬಂಧ ಮುಂಬೈ ಮೂಲದ ತಜ್ಞರ ತಂಡ ಡ್ರೋನ್ ಸಮೀಕ್ಷೆ ನಡೆಸಿದೆ. ಈ ಯೋಜನೆ ಕುರಿತು ಕನ್ನಡ ರಾಜ್ಯೋತ್ಸವ, ಕರ್ನಾಟಕ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಈಗ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಯೋಜನೆ ಕುರಿತು ಮತ್ತೆ ಚರ್ಚೆಗಳು ಆರಂಭವಾಗಿದೆ.
ಕಾಲಕಾಲೇಶ್ವರ ದೇವಾಲಯ ಹಾಗೂ ಗಜೇಂದ್ರಗಡದ ರಾಜವಾಡೆ ಬಳಿಯ ಕೋಟೆ ಬಳಿ ಅಧಿಕಾರಿಗಳ ತಂಡ ಸ್ಥಳ ಪರಿಶಿಲನೆ ನಡೆಸಿದೆ. ರೋಪ್-ವೇ ಯೋಜನೆ ಕುರಿತು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರು ಮಾಡಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಳ್ಳಾರಿ ನಗರದ ಮಧ್ಯ ಭಾಗದಲ್ಲಿರುವ ಏಕಶಿಲಾ ಬೆಟ್ಟಕ್ಕೆ ರೋಪ್-ವೇ ನಿರ್ಮಾಣ ಮಾಡುವ ಸಂಬಂಧ ಕಾರ್ಯ ಸಾಧ್ಯತೆಯ ಕುರಿತು ಸ್ಥಳ ಪರಿಶೀಲನೆ ಮಾಡಲು ಮೇ.ರೈಟ್ಸ್ ಸಂಸ್ಥೆಯ ಪ್ರತಿನಿಧಿಗಳು, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ಏಕಶಿಲಾ ಬೆಟ್ಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.
ಈ ತಂಡದಲ್ಲಿ ಮೇ. ರೈಟ್ಸ್ ಸಂಸ್ಥೆಯ ಪ್ರತಿನಿಧಿ ಸತೀಶ್ ವರ್ಮ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರವೀಂದ್ರ ಸಿ. ಎ., ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಪ್ರಭುಲಿಂಗ. ಎಸ್ ತಳಕೇರಿ ಮುಂತಾದವರಿದ್ದರು.
ಬಳ್ಳಾರಿ ಕೋಟೆಗೆ ರೋಪ್-ವೇ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಬಳ್ಳಾರಿ ನಗರದ ಏಕಶಿಲಾ ಬೆಟ್ಟಕ್ಕೆ ರೋಪ್-ವೇ ಅಳವಡಿಸುವ ಸಂಬಂಧ ಅಧಿಕಾರಿಗಳಿಗೆ ಅಗತ್ಯ ಸಲಹೆ ಹಾಗೂ ನಿರ್ದೇಶನಗಳನ್ನು ನೀಡಿದರು.
ಅಧಿಕಾರಿಗಳ ತಂಡ ಮುಖ್ಯವಾಗಿ ರೋಪ್-ವೇಯ ಪ್ರಾರಂಭಿಕ ಸ್ಥಳ ಹಾಗೂ ಅಂತ್ಯದ ಸ್ಥಳವನ್ನು ಗುರುತಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧಿಕಾರಿಗಳಿಂದ ಇದೇ ಸಂದರ್ಭದಲ್ಲಿ ಮಾಹಿತಿ ಪಡೆದುಕೊಂಡಿತು.
ಬೆಟ್ಟದ ಸುತ್ತಲೂ ಸರ್ಕಾರಿ ನಿವೇಶನ ಅಥವಾ ಸ್ಥಳ ಲಭ್ಯವಿದ್ದಲ್ಲಿ ಗುರುತಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು. ನಗರದ ಏಕಶಿಲಾ ಬೆಟ್ಟಕ್ಕೆ ರೋಪ್-ವೇ ಅಳವಡಿಸುವ ಸಂಬಂಧ ಸ್ಥಳ ಪರಿಶೀಲನಾ ವರದಿಯನ್ನು ಪ್ರವಾಸೋದ್ಯಮ ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಮೇ. ರೈಟ್ಸ್ ಸಂಸ್ಥೆಯ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಯೋಜನೆ ಬಗ್ಗೆ ನವದೆಹಲಿಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾನಿರ್ದೇಶಕರೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ಗೂಗಲ್ ಮೀಟ್ ಮೂಲಕ ಸಭೆಯನ್ನು ಆಯೋಜಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕರ್ನಾಟಕ ಸರ್ಕಾರ 2024-25ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದ 12 ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರೋಪ್-ವೇ ನಿರ್ಮಾಣ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದೆ. ಈ 12 ಸ್ಥಳಗಳಲ್ಲಿ ಬಳ್ಳಾರಿ ಕೋಟೆ ಇರುವ ಏಕಶಿಲಾ ಬೆಟ್ಟ ಸಹ ಸೇರಿದೆ.
ರಾಜ್ಯಕ್ಕೆ ಪ್ರವಾಸಿಗರನ್ನು ಸೆಳೆಯಲು, ಈಗಿರುವ ಪ್ರವಾಸಿ ತಾಣಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಈ ರೋಪ್-ವೇ ಯೋಜನೆ ನಿರ್ಮಾಣ ಮಾಡಲಾಗಿದೆ. ಗಜೇಂದ್ರಗಡ ಗುಡ್ಡದಿಂದ ಕಾಲಕಾಲೇಶ್ವರ ಗುಡ್ಡಕ್ಕೆ ರೋಪ್-ವೇ ನಿರ್ಮಾಣ ಮಾಡಿದರೆ ಈ ಪ್ರದೇಶಕ್ಕೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಅಧಿಕಾರಿಗಳು ಮಾತನಾಡಿ, ಕಾಲಕಾಲೇಶ್ವರ ದೇವಾಲಯ ಹಾಗೂ ಗಜೇಂದ್ರಗಡದ ರಾಜವಾಡೆ ಬಳಿಯ ಕೋಟೆ ಬಳಿ ನಮ್ಮ ತಂಡ ಪರಿಶೀಲನೆ ನಡೆಸಿದ್ದು, ಸರ್ಕಾರಕ್ಕೆ ರೋಪ್-ವೇ ನಿರ್ಮಾಣದ ಕುರಿತು ಸಮಗ್ರ ಡಿಪಿಆರ್ ತಯಾರು ಮಾಡಿ ಸಲ್ಲಿಕೆ ಮಾಡಲಾಗುತ್ತದೆ ಎಂದು ಹೇಳಿದೆ.
ಬಳ್ಳಾರಿ ಏಕಶಿಲಾ ಬೆಟ್ಟಕ್ಕೆ ಟಿಪ್ಪು ಸುಲ್ತಾನ್ ಕೋಟೆ ಎಂದೂ ಸಹ ಕರೆಯಲಾಗುತ್ತದೆ. ಈ ಬೆಟ್ಟಕ್ಕೆ ರೋಪ್-ವೇ ನಿರ್ಮಾಣದ ಕುರಿತು ಮೊದಲು ಜಿಲ್ಲಾಡಳಿತ ಮತ್ತು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಪ್ರವಾಸೋದ್ಯಮ ಇಲಾಖೆಗೆ ಪತ್ರವನ್ನು ಬರೆದಿದ್ದರು. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿಯೂ ಈ ಕುರಿತು ವಿಷಯ ಪ್ರಸ್ತಾಪ ಮಾಡಿದ್ದರು.
ಆಗ ಪ್ರವಾಸೋದ್ಯಮ ಸಚಿವರು ಈ ಕುರಿತು ಮಾತನಾಡಿ, "ಬಳ್ಳಾರಿ ಬೆಟ್ಟದ ರೋಪ್-ವೇ ನಿರ್ಮಾಣದ ಕುರಿತು ಅಧ್ಯಯನಕ್ಕಾಗಿ ಇಲಾಖೆಯಿಂದ ತಜ್ಞರ ತಂಡವನ್ನು ಕಳಿಸಲಾಗುತ್ತದೆ" ಎಂದು ಭರವಸೆ ನೀಡಿದ್ದರು. ಫೆಬ್ರವರಿಯಲ್ಲಿ ಮುಂಬೈ ಮೂಲದ ಖಾಸಗಿ ಕಂಪನಿಯ ತಂಡ ಎರಡು ದಿನಗಳ ಕಾಲ ಬಳ್ಳಾರಿ ಬೆಟ್ಟದ ಮೇಲೆ ಡ್ರೋನ್ ಮೂಲಕ ಸಮೀಕ್ಷೆಯನ್ನು ನಡೆಸಿತ್ತು.
ಬಳ್ಳಾರಿ ನಗರದಲ್ಲಿರುವ ಏಕಶಿಲಾ ಬೆಟ್ಟ ಏಷ್ಯಾದಲ್ಲಿಯೇ ಅತಿದೊಡ್ಡ ಮತ್ತು ಏಕೈಕ ಏಕಶಿಲಾ ಬೆಟ್ಟ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. ರೋಪ್-ವೇ ನಿರ್ಮಾಣಗೊಂಡರೆ ಇನ್ನೂ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವ ನಿರೀಕ್ಷೆ ಇದೆ. ಇಲ್ಲಿಂದ ಕಾಣುವ ಸೌಂದರ್ಯವನ್ನು ಜನರಿಗೆ ಸವಿಯಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಪ್ರತಿ ವರ್ಷ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನದಂದು ಈ ಕೋಟೆಯ ಮೇಲೆ ಧ್ವಜಾರೋಹಣ ಮಾಡಲಾಗುತ್ತದೆ.
ಈ ಬೆಟ್ಟವನ್ನು ಹತ್ತಲು 400ಕ್ಕೂ ಅಧಿಕ ಮೆಟ್ಟಿಲುಗಳಿವೆ. ಆದ್ದರಿಂದ ಹಲವು ಪ್ರವಾಸಿಗರು ಬೆಟ್ಟವನ್ನು ಹತ್ತದೇ ಕೆಳಗಿನಿಂದಲೇ ನೋಡಿಕೊಂಡು ವಾಪಸ್ ಆಗುತ್ತಾರೆ. ಆದ್ದರಿಂದ ಪ್ರವಾಸಿಗರು ಭೇಟಿ ನೀಡಲು ಅನುಕೂಲಮಾಡಿಕೊಡಲು ರೋಪ್-ವೇ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
ವಿಶ್ವವಿಖ್ಯಾತ ಹಂಪಿ, ತುಂಗಭದ್ರಾ ಡ್ಯಾಂ ಹೀಗೆ ವಿವಿಧ ಪ್ರವಾಸಿ ತಾಣಗಳು ಬಳ್ಳಾರಿ ಜಿಲ್ಲೆಯಲ್ಲಿದ್ದವು. ಆದರೆ ಈಗ ಜಿಲ್ಲೆ ವಿಜಯನಗರ ಮತ್ತು ಬಳ್ಳಾರಿಯಾಗಿ ವಿಭಜನೆಗೊಂಡ ಬಳಿಕ ಬಳ್ಳಾರಿಯಲ್ಲಿರುವ ಪ್ರವಾಸಿತಾಣಗಳನ್ನು ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಹಂಪಿ ಉತ್ಸವದ ಮಾದರಿಯಲ್ಲಿಯೇ ಬಳ್ಳಾರಿ ಉತ್ಸವ ಮಾಡೋಣ, ಬಳ್ಳಾರಿ ಬೆಟ್ಟಕ್ಕೆ ರೋಪ್-ವೇ ನಿರ್ಮಾಣ ಮಾಡೋಣ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದರು.
ಬಳ್ಳಾರಿ ಜಿಲ್ಲಾಡಳಿತ ವೆಬ್‌ಸೈಟ್ ಮಾಹಿತಿಯ ಪ್ರಕಾರ ಬಳ್ಳಾರಿ ಕೋಟೆಯನ್ನು ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಹಳಮಪ್ಪ ನಾಯಕ ಎಂಬ ಪಾಳೆಯಗಾರ ನಿರ್ಮಾಣ ಮಾಡಿದೆ. 18ನೇ ಶತಮಾನದಲ್ಲಿ ಈ ಪ್ರದೇಶವನ್ನು ವಶಪಡಿಸಿಕೊಂಡ ಬಳಿಕ ಹೈದರಾಲಿ ಇನ್ನೊಂದು ಸುತ್ತು ಕೋಟೆಯನ್ನು (ಕೆಳಕೋಟೆ) ನಿರ್ಮಿಸುವ ಮೂಲಕ ಕೋಟೆ ಪ್ರದೇಶವನ್ನು ಮತ್ತಷ್ಟು ವಿಸ್ತರಣೆ ಮಾಡಿದರು.
ಮೂಲ ಬಳ್ಳಾರಿ ಕೋಟೆಯನ್ನು ನವೀಕರರಣ ಮಾಡಲು ಫ್ರೆಂಚ್ ಇಂಜಿನಿಯರ್‌ಗಳನ್ನು ನಿಯೋಜಿಸಲಾಗಿತ್ತು ಎಂಬ ಮಾಹಿತಿಯೂ ಇದೆ. ಕೋಟೆಯಲ್ಲಿ ಇಗರ್ಜಿ, ದೇವಾಲಯ, ಸೈನಿಕರಿಗೆ ಬೇಕಾದ ಬ್ಯಾರಕ್‌ಗಳು, ನೀರಿನ ಸಂಗ್ರಹಕ್ಕಾಗಿ ಆಳವಾದ ಬಾವಿಗಳನ್ನು ಆಗ ನಿರ್ಮಾಣ ಮಾಡಲಾಗಿತ್ತು. ಕೆಳಗಿನ ಕೋಟೆಯಲ್ಲಿ ಪಶ್ಚಿಮ ಮತ್ತು ಪೂರ್ವ ಭಾಗದಲ್ಲಿ ತಲಾ ಒಂದು ಪ್ರವೇಶ ದ್ವಾರವಿದೆ.












Click it and Unblock the Notifications