ಹೊಸಪೇಟೆಯಿಂದ ಮುಂಬೈ, ಪುಣೆಗೆ ಪ್ರತಿದಿನದ ರೈಲು, ವೇಳಾಪಟ್ಟಿ
ಬಳ್ಳಾರಿ, ಆಗಸ್ಟ್ 09; ವಿಜಯನಗರ ಜಿಲ್ಲೆಯ ಹೊಸಪೇಟೆಯ ಜನರ ಬಹುವರ್ಷಗಳ ಬೇಡಿಕೆಗೆ ರೈಲ್ವೆ ಸಚಿವಾಲಯ ಮನ್ನಣೆ ನೀಡಿದೆ. ಹೊಸಪೇಟೆಯಿಂದ ಮುಂಬೈ, ಪುಣೆ ಸಂಪರ್ಕಿಸಲು ಪ್ರತಿದಿನದ ರೈಲು ಸಂಚಾರ ಆರಂಭವಾಗಿದೆ. ಇದರಿಂದಾಗಿ ಪ್ರಸಿದ್ಧ ಪ್ರವಾಸಿ ತಾಣ ಹಂಪಿಯ ಪ್ರವಾಸಿಗರಿಗೂ ಅನುಕೂಲವಾಗಿದೆ.
ರೈಲ್ವೆ ಸಚಿವಾಲಯ ರೈಲು ನಂಬರ್ 11139 ಮತ್ತು 11140 ಮುಂಬೈ- ಗದಗ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಹೊಸಪೇಟೆ ತನಕ ವಿಸ್ತರಣೆ ಮಾಡಿದೆ. ಇದರಿಂದಾಗಿ ಹೊಸಪೇಟೆ ವಾಣಿಜ್ಯ ನಗರಿಯಾದ ಮುಂಬೈ, ಪುಣೆಗೆ ಸಂಪರ್ಕ ಪಡೆದಿದೆ.

ಮುಂಬೈ-ಗದಗ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಮುಂಬೈ, ಪುಣೆ, ಸೊಲ್ಹಾಪುರ, ವಿಜಯಪುರ, ಬಾಗಲಕೋಟೆ, ಬಾದಾಮಿ ಹೀಗೆ ವಿವಿಧ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಈಗ ಹೊಸಪೇಟೆಗೂ ವಿಸ್ತರಣೆ ಆಗಿರುವುದರಿಂದ ಪ್ರವಾಸೋದ್ಯಮಕ್ಕೂ ಸಹಾಯಕವಾಗಿದೆ.
ವೇಳಾಪಟ್ಟಿ; ರೈಲು ಸಂಖ್ಯೆ 11139 ಗದಗದಿಂದ 10.45ಕ್ಕೆ ಹೊರಟು, 12.45ಕ್ಕೆ ಹೊಸಪೇಟೆಗೆ ಆಗಮಿಸಲಿದೆ. ರೈಲು ನಂಬರ್ 11140 ಹೊಸಪೇಟೆಯಿಂದ 2 ಗಂಟೆಗೆ ಹೊರಟು, 3.25ಕ್ಕೆ ಗದಗ ತಲುಪಲಿದೆ.
ಹೊಸಪೇಟೆ ತನಕ ರೈಲು ವಿಸ್ತರಣೆ ಮಾಡುವ ಜೊತೆಗೆ ಕೊಪ್ಪಳ, ಮುನಿರಾಬಾದ್ ಎರಡು ನಿಲ್ದಾಣಗಳನ್ನು ಸಹ ನೀಡಲಾಗಿದೆ. ಹೊಸ ವಿಸ್ತರಿತ ಮಾರ್ಗದಲ್ಲಿ ರೈಲು ಓಡಿಸುವಂತೆ ಸ್ಥಳೀಯ ರೈಲ್ವೆ ವಲಯಕ್ಕೆ ಸೂಚನೆ ನೀಡಲಾಗಿದೆ.
ಮುಂಬೈ-ಗದಗ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಹೊಸಪೇಟೆ ತನಕ ವಿಸ್ತರಣೆಯಾಗಿರುವುದು ಯುನೆಸ್ಕೋ ಮಾನ್ಯತೆ ಪಡೆದ ಹಂಪಿಯ ಪ್ರವಾಸಿಗರಿಗೆ ಅನುಕೂಲವಾಗಿದೆ. ಮುಂಬೈ, ಪುಣೆ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬರುವ ಪ್ರವಾಸಿಗರಿಗೆ ರೈಲು ಸಂಪರ್ಕ ಸಿಕ್ಕಿದಂತೆ ಆಗಿದೆ.
ಹೊಸಪೇಟೆ ಹಂಪಿಗೆ ಅತಿ ಸಮೀಪವಿರುವ ರೈಲು ನಿಲ್ದಾಣವಾಗಿದೆ. ಸುಮಾರು 13 ಕಿ. ಮೀ. ದೂರದಲ್ಲಿ ಹಂಪಿ ಇದೆ. ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಮಹತ್ವ ತಿಳಿಯಲು ಪ್ರತಿದಿನ ನೂರಾರು ಪ್ರವಾಸಿಗರು ಹಂಪಿಗೆ ಆಗಮಿಸುತ್ತಾರೆ. ರೈಲು ಸೇವೆಯಿಂದ ಅವರ ಸಂಚಾರಕ್ಕೆ ಅನುಕೂಲವಾಗಿದೆ.
ಹೊಸಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಸೋದ್ಯಮವೇ ಆದಾಯದ ಪ್ರಮುಖ ಮೂಲವಾಗಿದೆ. ಈಗ ವಾಣಿಜ್ಯ ನಗರಿಗೆ ನೇರ ಸಂಪರ್ಕ ಸಿಕ್ಕಿದ ಕಾರಣ ಪ್ರವಾಸೋದ್ಯಮ ಚಟುವಟಿಕೆಗಳು ಸಹ ಇನ್ನಷ್ಟು ಅಭಿವೃದ್ಧಿಯಾಗುವ ನಿರೀಕ್ಷೆ ಇದೆ.
ಹಂಪಿ ಮೊದಲು ಬಳ್ಳಾರಿ ಜಿಲ್ಲೆಗೆ ಸೇರಿತ್ತು. ಕರ್ನಾಟಕ ಸರ್ಕಾರ ಹೊಸಪೇಟೆಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ, ವಿಜಯನಗರವನ್ನು ರಾಜ್ಯದ 31ನೇ ಜಿಲ್ಲೆಯಾಗಿ ಘೋಷಣೆ ಮಾಡಿದೆ.
ಹೊಸಪೇಟೆ ನಿಲ್ದಾಣದ ಅಭಿವೃದ್ಧಿ; ಈ ವರ್ಷದ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪುನರಾಭಿವೃದ್ಧಿ ಮಾಡಲಾದ ಹೊಸಪೇಟೆ ರೈಲು ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದಾರೆ. ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿಭಾಗದ ವಿದ್ಯುದ್ದೀಕರಣ ಮತ್ತು ನವೀಕರಣಗೊಂಡ ಹೊಸಪೇಟೆ ರೈಲು ನಿಲ್ದಾಣವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
ಹೊಸಪೇಟೆ ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಲಾಗಿದ್ದು, ಪ್ರಯಾಣಿಕರಿಗೆ ಅನುಕೂಲಕರ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಂಪಿಯ ಸ್ಮಾರಕಗಳನ್ನು ಹೋಲುವಂತೆ ರೈಲು ನಿಲ್ದಾಣವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ಸುಮಾರು 13.5 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಕೇಂದ್ರ ರೈಲ್ವೆ ಸಚಿವಾಲಯ, ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಜಂಟಿಯಾಗಿ ಹೊಸಪೇಟೆ ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಿವೆ. ಹಂಪಿಯ ಪ್ರಸಿದ್ಧ ಕಲ್ಲಿನ ರಥದ ಮಾದರಿಯಲ್ಲಿ ನಿಲ್ದಾಣದ ಪ್ರವೇಶ ದ್ವಾರವನ್ನು ವಿನ್ಯಾಸಗೊಳಿಸಲಾಗಿದೆ. ಈ ವಾಸ್ತುಶಿಲ್ಪದ ಶೈಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ನಿಲ್ದಾಣದ ಪ್ರವೇಶದ್ವಾರದ ಎರಡೂ ಬದಿಗಳಲ್ಲಿನ ಕಟ್ಟಡವನ್ನು ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ ಹೋಲುವಂತೆ ವಿನ್ಯಾಸಗೊಳಿಸಲಾಗಿದೆ. ನಿಲ್ದಾಣದಲ್ಲಿ 14 ವಿಶ್ರಾಂತಿ ಕೊಠಡಿಗಳನ್ನು ಮತ್ತು ಪ್ರಯಾಣಿಕರಿಗಾಗಿ ಒಂದು ನಿರೀಕ್ಷಣಾಲಯ ಹಾಗೂ ಒಂದು ಗಣ್ಯರ ನಿರೀಕ್ಷಣಾ ಕೊಠಡಿ, ಪ್ರವಾಸಿ ಮಾಹಿತಿ ಕೇಂದ್ರ ಹಾಗೂ ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ.












Click it and Unblock the Notifications