ಎತ್ತಿನ ಬಂಡಿಯೇರಿ ಚುನಾವಣಾ ಪ್ರಚಾರ ನಡೆಸಿದ ಬಿ.ಶ್ರೀರಾಮುಲು
ಬಳ್ಳಾರಿ, ಏಪ್ರಿಲ್ 18 : ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ತನ್ನ ಸೋದರ ಮಾವ, ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಅವರ ಪರವಾಗಿ ಬಿ. ಶ್ರೀರಾಮುಲು ಬುಧವಾರ ಎತ್ತಿನಬಂಡಿ ಹತ್ತಿ ಪ್ರಚಾರ ನಡೆಸಿದರು.
ಬಸವ ಜಯಂತಿ ಅಂಗವಾಗಿ ಮೋಕ ಮತ್ತು ಸಿರಿವಾರ ಗ್ರಾಮಗಳಲ್ಲಿ ಶ್ರೀರಾಮುಲು ಎತ್ತಿನಬಂಡಿ ಹತ್ತಿ, ಎತ್ತುಗಳ ಮುಗುದಾಣದ ಹಗ್ಗ ಬಿಗಿಯಾಗಿ ಹಿಡಿದು, ಬಿಜೆಪಿ, ಬಸವಣ್ಣ ಮತ್ತು ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರ ಮಾಡಿದರು.
ಕಾಯಕವೇ ಕೈಲಾಸ ಎನ್ನುತ್ತ ಜಾತ್ಯಾತೀತ ಸಮಾಜ ನಿರ್ಮಿಸಲು, ಜಾತಿ ವ್ಯವಸ್ಥೆ ಹೊಡೆದೋಡಿಸಲು ಬಸವಣ್ಣನವರು ಸಾಕಷ್ಟು ಶ್ರಮಿಸಿದ್ದರು. ಬಸವಣ್ಣ ಸಮಾನತೆಯ ಹರಿಕಾರರು. 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುನ್ನುಡಿ ಬರೆದವರು ಎಂದು ಬಸವಣ್ಣ ಅವರನ್ನು ಪ್ರಶಂಸಿದರು.

ಪ್ರತಿ ವರ್ಷ ಮೋಕ ಮತ್ತು ಸಿರಿವಾರ ಗ್ರಾಮಗಳಲ್ಲಿ ಬಸವ ಜಯಂತಿ ಅಂಗವಾಗಿ ಜೋಡೆತ್ತಿನ ಅಲಂಕಾರ ಮತ್ತು ಮೆರವಣಿಗೆ ನಡೆಯಲಿದೆ. ಈ ಗ್ರಾಮಗಳಿಗೆ ಭೇಟಿ ನೀಡಿದ ಬಿ. ಶ್ರೀರಾಮುಲು, ನವೀನ ರೀತಿಯಲ್ಲಿ ಚುನಾವಣಾ ಪ್ರಚಾರ ನಿರ್ವಹಿಸಿ, ಗ್ರಾಮಸ್ಥರ ಮೆಚ್ಚುಗೆ ಪಡೆದರು.
ಎಲ್ಲರಿಗಿಂತ ಮೊದಲೇ ಪ್ರಚಾರ ಕಾರ್ಯ ಶುರು...
ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಸೋಮವಾರ ಬಿಡುಗಡೆಯಾಗಿದ್ದು, ಚುನಾವಣೆ ಘೋಷಣೆಗೂ ಮುನ್ನವೇ ಸಂಸದ ಬಿ.ಶ್ರೀರಾಮುಲು ಅವರು ಸಣ್ಣ ಫಕ್ಕೀರಪ್ಪ ಅವರನ್ನು 'ಗ್ರಾಮೀಣ ಕ್ಷೇತ್ರದ ನಿಯೋಜಿತ ಅಭ್ಯರ್ಥಿ' ಎಂದು ಘೋಷಿಸಿ ಅವರೊಂದಿಗೆ ಆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು.

ಇದೀಗ ಮಾತಿನಂತೆಯೇ ಫಕ್ಕೀರಪ್ಪ ಅಲ್ಲಿ ಅಭ್ಯರ್ಥಿಯಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಸೋತಿದ್ದ ಓಬಳೇಶ್ ಅವರಿಗೆ ಈ ಬಾರಿ ಹಿನ್ನಡೆಯಾಗಿದೆ.
ಜಿಲ್ಲೆಯಲ್ಲಿ ಇತರರಿಗಿಂತಲೂ ಮೊದಲೇ ಪಕ್ಷ ಸಂಘಟನೆ ಆರಂಭಿಸಿದ್ದ ಬಿಜೆಪಿಯಲ್ಲಿ ಈಗ ಬಲವರ್ಧನೆಯ ಕಸರತ್ತು ಅನಿವಾರ್ಯವಾಗಿ ಆರಂಭವಾಗಿದ್ದು, ಶ್ರೀರಾಮುಲು ಅವರು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ತಮಗೆ ಅವಕಾಶ ದೊರಕದಿದ್ದರೆ ಸಣ್ಣ ಫಕ್ಕೀರಪ್ಪ ಅವರಿಗೆ ಅವಕಾಶ ದೊರಕಿಸಲಾಗುವುದು ಎಂದು ಹೇಳಿ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದರು.











Click it and Unblock the Notifications