ಸಚಿವ ಆನಂದ್ ಸಿಂಗ್ ಸಹೋದರಿ ಕಾಂಗ್ರೆಸ್ ಸೇರ್ಪಡೆ!
ಹೊಸಪೇಟೆ, ಏಪ್ರಿಲ್ 22; ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಟ್ಟಿ ಪ್ರಕಟವಾದ ಮೇಲೆ ಹಲವಾರು ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಮೇ 10ರಂದು ನಡೆಯುವ ಚುನಾವಣೆಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಸಚಿವ ಆನಂದ್ ಸಿಂಗ್ ಸಹೋದರಿ ಕಾಂಗ್ರೆಸ್ ಸೇರಿದರು.
ಶನಿವಾರ ರಾಜ್ಯ ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ, ಸಚಿವ ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತಾ ಸಿಂಗ್ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಈ ಕುರಿತು ಅವರು ಫೇಸ್‌ಬುಕ್‌ನಲ್ಲಿ ಫೋಟೋ ಫೋಸ್ಟ್ ಮಾಡಿದ್ದಾರೆ.

ಶುಕ್ರವಾರ ಅವರುರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭೇಟಿಯಾಗಿ ಮಾತುಕತೆ ನಡೆಸಿದ್ದರು ಎಂಬ ಮಾಹಿತಿ ಇತ್ತು. ಶನಿವಾರ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದರು. ಕಾಂಗ್ರೆಸ್ ಈ ಬಾರಿಯ ಚುನಾವಣೆಗೆ ಹೆಚ್. ಆರ್. ಗವಿಯಪ್ಪ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ಬಿ. ಎಲ್. ರಾಣಿ ಸಂಯುಕ್ತಾ ಸಿಂಗ್ ವಿಜಯನಗರದ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದರು. ಹೈಕಮಾಂಡ್ ಮಟ್ಟದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದ ಅವರು ದೆಹಲಿಯಲ್ಲಿಯೂ ಟಿಕೆಟ್‌ಗಾಗಿ ಲಾಬಿ ನಡೆಸಿದ್ದರು. ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದರು. ಆದರೆ ಟಿಕೆಟ್ ಕೈತಪ್ಪಿತ್ತು.

ಆನಂದ್ ಸಿಂಗ್‌ಗೆ ಟಿಕೆಟ್ ಇಲ್ಲ; ವಿಜಯನಗರದ ಹಾಲಿ ಶಾಸಕರು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್. ಆದರೆ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಪುತ್ರ ಸಿದ್ಧಾರ್ಥ್ ಸಿಂಗ್‌ಗೆ ಟಿಕೆಟ್ ನೀಡಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದರು.
ಬಿಜೆಪಿ ಹೈಕಮಾಂಡ್ ನಾಯಕರು ಆನಂದ್ ಸಿಂಗ್ ಪುತ್ರ ಮತ್ತು ಬಿ. ಎಲ್. ರಾಣಿ ಸಂಯುಕ್ತಾ ಸಿಂಗ್ ಅಳಿಯ ಸಿದ್ಧಾರ್ಥ್ ಸಿಂಗ್‌ಗೆ ಟಿಕೆಟ್ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ರಾಣಿ ಸಂಯುಕ್ತಾ ಸಿಂಗ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಅವರು ಕಾಂಗ್ರೆಸ್ ಪರವಾಗಿ ವಿಜಯನಗರದಲ್ಲಿ ಪ್ರಚಾರ ನಡೆಸಲಿದ್ದಾರೆ.
ಚುನಾವಣಾ ಚಿತ್ರಣ; ಬಳ್ಳಾರಿಯಿಂದ ವಿಭಜನೆಗೊಂಡು ವಿಜಯನಗರ ಪ್ರತ್ಯೇಕವಾದ ಜಿಲ್ಲೆಯಾದ ಬಳಿಕ ಮೊದಲ ಚುನಾವಣೆ ನಡೆಯುತ್ತಿದೆ. ವಿಜಯನಗರದ ಹಾಲಿ ಶಾಸಕರು ಆನಂದ್ ಸಿಂಗ್. 2008, 2013ರಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲವು ಸಾಧಿಸಿದ್ದರು. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಕಂಡಿದ್ದರು. ವಿಜಯನಗರ ಜಿಲ್ಲಾ ರಚನೆ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಬಿಜೆಪಿ ಸೇರಿ 2019ರ ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾದರು, ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವರೂ ಆದರು. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಮುಂದುವರೆದರು.
ಸಿದ್ಧಾರ್ಥ್ ಸಿಂಗ್‌ಗೆ ಟಿಕೆಟ್ ನೀಡಿ ಮತ್ತು ಗೆಲ್ಲಿಸಿಕೊಂಡು ಬರುವ ಹೊಣೆ ನನಗೆ ಬಿಡಿ ಎಂದು ಆನಂದ್ ಸಿಂಗ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪಗೆ ಮಾತು ನೀಡಿದ್ದಾರೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಕ್ಷೇತ್ರದಲ್ಲಿ ಪಕ್ಷವನ್ನೂ ಮೀರಿ ಆನಂದ್ ಸಿಂಗ್ ಪ್ರಭಾವ ಹೊಂದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವಿಜಯನಗರದ ಜನರು ಕುಟುಂಬ ರಾಜಕಾರಣ ಬೆಂಬಲಿಸಲಿದ್ದಾರೆಯೇ?. ಅದರಲ್ಲೂ ಸಹೋದರಿ ಎದುರಾಳಿ ಪಕ್ಷದಲ್ಲಿರುವಾಗ ಪುತ್ರನ ಗೆಲುವಿಗೆ ಆನಂದ್ ಸಿಂಗ್ ಯಾವ ತಂತ್ರವನ್ನು ರೂಪಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
ಈಗಾಗಲೇ ಕರ್ನಾಟಕದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications