ತುಂಗಾಭದ್ರಾ ಜಲಾಶಯಕ್ಕೆ ಕೃಷ್ಣಾ ನದಿ ನೀರು ಹರಿಸಿ
ಬಳ್ಳಾರಿ, ಆಗಸ್ಟ್ 05 : ತುಂಗಾಭದ್ರಾ ಜಲಾಶಯಕ್ಕೆ ಕೃಷ್ಣಾ ನದಿ ನೀರನ್ನು ಹರಿಸಬೇಕು ಎಂದು ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಮನವಿ ಮಾಡಿದರು.
ಯಡಿಯೂರಪ್ಪ ಇಂದು ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಆಗ ಅವರನ್ನು ಭೇಟಿಯಾದ ಶಾಸಕರು, "ಕೃಷ್ಣಾ ನದಿಯನ್ನು ಜೋಡಿಸಿದರೆ ತ್ರಿವಳಿ ಜಿಲ್ಲೆಗಳ ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬಹುದು" ಎಂದು ವಿವರಿಸಿದರು.
ಅತ್ಯಂತ ಸಮಾಧಾನದಿಂದ ಮನವಿಯನ್ನು ಆಲಿಸಿದ ಮುಖ್ಯಮಂತ್ರಿಗಳು, "ಇದಕ್ಕೆ ಸಂಬಂಧಿಸಿದ ವಿಸ್ತ್ರತ ಯೋಜನಾ ವರದಿಯೊಂದನ್ನು ನೀಡಿ. ಮುಂದಿನ ಬಜೆಟ್‍ನಲ್ಲಿ ಘೋಷಿಸಿ ಅನುಷ್ಠಾನಗೊಳಿಸೋಣ" ಎಂದು ಭರವಸೆ ನೀಡಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಸೋಮಶೇಖರ್ ರೆಡ್ಡಿ, "ತ್ರಿವಳಿ ಜಿಲ್ಲೆಗಳ ಹಾಗೂ ನೆರೆಯ ರಾಜ್ಯದ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯ ಇದುವರೆಗೆ ತುಂಬಿಲ್ಲ. ಕೇವಲ 30 ಟಿಎಂಸಿ ನೀರು ಮಾತ್ರ ಇದೆ. ಇನ್ನೂ 70 ಟಿಎಂಸಿ ನೀರಿನ ಅಗತ್ಯ ಇದೆ" ಎಂದರು.
"4 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಯಿಂದ ಹರಿಬಿಡಲಾಗುತ್ತಿದೆ. ಅದು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಕೃಷ್ಣಾ ನದಿ ನೀರನ್ನು ನಮ್ಮ ಜಲಾಶಯಕ್ಕೆ ಜೋಡಿಸಿದರೆ ನೀರು ಸದ್ಭಳಕೆಯಾಗುತ್ತದೆ" ಎಂದು ಹೇಳಿದರು.
"ಮೂರು ಜಿಲ್ಲೆಗಳ ನಿಯೋಗವನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳಿಗೆ ವಿಸ್ತ್ರೃತ ಯೋಜನೆ ವಿವರಿಸಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುವುದು" ಎಂದು ಸೋಮಶೇಖರ ರೆಡ್ಡಿ ತಿಳಿಸಿದರು.
"ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರ ನೇತೃತ್ವದಲ್ಲಿ ಈ ಯೋಜನೆ ಸಾಕಾರಗೊಂಡರೇ ರೈತರ ಬದುಕು ಬಂಗಾರವಾಗಲಿದೆ. ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗಲಿದೆ" ಎಂದರು.












Click it and Unblock the Notifications