ಕಾಂಗ್ರೆಸ್ ಕಚೇರಿಗೆ ಜಾಗ ಕೊಡಲ್ಲ ಅಂದ್ರು ಕೊಂಡಯ್ಯ
ಬಳ್ಳಾರಿ, ಏ. 8 : ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕಾಗಿ ಮಂಜೂರಾಗಿದ್ದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿರುವ ಪಕ್ಷದ ಹಿರಿಯ ನಾಯಕ ಕೆ.ಸಿ.ಕೊಂಡಯ್ಯ ಅವರು ಸಂಕೀರ್ಣದಲ್ಲಿ ಪಕ್ಷದ ಕಚೇರಿಗೆ ಸ್ಥಳವಕಾಶ ನೀಡುವುದಿಲ್ಲ ಎಂದು ಹೇಳಿದರು.
ಬಳ್ಳಾರಿಯಲ್ಲಿ ಬುಧವಾರ ಮಾತನಾಡಿದ ಕೆ.ಸಿ.ಕೊಂಡಯ್ಯ ಅವರು, ನನ್ನ ಹೆಸರು ಕೆಡಿಸಲು ಶಾಸಕ ಅನಿಲ್ ಲಾಡ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಜನೇಯಲು ಅವರು ನನ್ನ ವಿರುದ್ಧ ಆರೋಪ ಮಾಡಿದ್ದರು. ಆದರೆ, ಈ ಪ್ರಕರಣದಲ್ಲಿ ನನಗೆ ಕ್ಲೀನ್‌ಚಿಟ್ ದೊರೆಕಿದೆ ಎಂದರು. [ಕೆಸಿ ಕೊಂಡಯ್ಯಗೆ ಕೆಪಿಸಿಸಿಯಿಂದ ನೋಟಿಸ್]

ವಿವಾದವೇನು : 2001ರಲ್ಲಿ ರಾಜೀವ್ ಗಾಂಧಿ ಮೆಮೋರಿಯಲ್ ಟ್ರಸ್ಟ್ ಅಡಿ ಕಾಂಗ್ರೆಸ್ ಕಚೇರಿ ಕಟ್ಟಲು ಬಳ್ಳಾರಿಯಲ್ಲಿ 86*65 ಚದರ ಅಡಿ ಸರ್ಕಾರಿ ಜಾಗವನ್ನು ಗುತ್ತಿಗೆ ನೀಡಲಾಗಿತ್ತು. ಟ್ರಸ್ಟಿಗೆ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಎಂ.ವೈ.ಘೋರ್ಪಡೆ, ದಿವಾಕರ್ ಬಾಬು, ಸಿರಾಜ್ ಶೇಖ್ ಅವರನ್ನು ಟ್ರಸ್ಟಿಗಳಾಗಿ ಮಾಡಲಾಗಿತ್ತು. [ಪಕ್ಷದ ನಾಯಕರ ಸಂಚಿಗೆ ಬಲಿಯಾದೆ : ಕೊಂಡಯ್ಯ]
ಆದರೆ, 2005ರಲ್ಲಿ ಕೆ.ಸಿ.ಕೊಂಡಯ್ಯ ಉಳಿದ ಟ್ರಸ್ಟಿಗಳನ್ನು ಬದಲಾವಣೆ ಮಾಡಿ, ತಮ್ಮ ಪತ್ನಿ ಮೀನಾಕ್ಷಿ, ಮಗ ಕೆ.ವಿ.ಆರ್. ಪ್ರಸಾದ್ ಅವರನ್ನು ಟ್ರಸ್ಟಿಗಳನ್ನಾಗಿ ನೇಮಕ ಮಾಡಿದ್ದರು. ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕಾಗಿ ಮಂಜೂರಾಗಿದ್ದ ನಿವೇಶನದಲ್ಲಿ ವಾಣ್ಯಜ್ಯ ಕಟ್ಟಡ ನಿರ್ಮಿಸುತ್ತಿದ್ದರು. [ಕೆಸಿ ಕೊಂಡಯ್ಯ ಅಮಾನತಿಗೆ ರಾಹುಲ್ ಸೂಚನೆ!]
ಈ ಕುರಿತು ಬಳ್ಳಾರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಆಂಜನೇಯಲು ಅವರು ಕೆಪಿಸಿಸಿ, ಸಿದ್ದರಾಮಯ್ಯ ಸೇರಿದಂತೆ ಪ್ರಮುಖರಿಗೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸಮಗ್ರ ವರದಿ ಪಡೆದ ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದ್ದರು.
ಈ ಬಗ್ಗೆ ಭಾರೀ ವಿವಾದವಾದ ನಂತರ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದಿತ್ತು. ಕೆ.ಸಿ.ಕೊಂಡಯ್ಯ ವಾಣಿಜ್ಯ ಸಂಕೀರ್ಣದಲ್ಲಿ ಒಂದು ಭಾಗವನ್ನು ಪಕ್ಷದ ಕಚೇರಿಗಾಗಿ ನೀಡುವುದಾಗಿ ಹೇಳಿದ್ದರು. ಆದರೆ, ಈಗ ಕೊಂಡಯ್ಯ ಅವರು ಜಾಗ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ.












Click it and Unblock the Notifications