'ಬಳ್ಳಾರಿ ಡಿಸಿ ಕಾಂಗ್ರೆಸ್ ಏಜೆಂಟ್' ಎಂದ ಶೆಟ್ಟರ್
ಬಳ್ಳಾರಿ, ಏ.2: ಬಳ್ಳಾರಿ ಜಿಲ್ಲಾಧಿಕಾರಿಗಳು 'ಕಾಂಗ್ರೆಸ್ ಏಜೆಂಟ್'ರಂತೆ ವರ್ತಿಸುತ್ತ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗಧೀಶಶೆಟ್ಟರ್ ಆರೋಪಿಸಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಪ್ರವಾಸ ಕೈಗೊಂಡಿರುವ ಅವರು ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಜಿಲ್ಲಾಧಿಕಾರಿಗಳು ಒತ್ತಡ ತಂತ್ರ, ದಬ್ಬಾಳಿಕೆ ಮತ್ತು ಕಿರುಕುಳ ನೀಡುತ್ತಿದ್ದಾರೆ. ಬಿಜೆಪಿ ಮುಖಂಡರ, ಕಾರ್ಯಕರ್ತರ ಮನೆ, ಪ್ರಚಾರದಲ್ಲೂ ಪೊಲೀಸ್, ಕ್ಯಾಮೆರಾ ಅಳವಡಿಕೆ ಮಾಡಿರುವುದು ಮಾನವಹಕ್ಕುಗಳ ಉಲ್ಲಂಘನೆ. ಜಿಲ್ಲಾಧಿಕಾರಿ ಬಿಜೆಪಿಯವರಲ್ಲಿ ಭಯ, ಆತಂಕ ಮೂಡಿಸುತ್ತಿದ್ದಾರೆ ಎಂದರು.
ಪಕ್ಷ, ಅಭ್ಯರ್ಥಿ ಮತ್ತು ಪ್ರಭಾವಗಳ ಮಧ್ಯೆ ತಾರತಮ್ಯ ಅನುಸರಿಸಬಾರದು ಎಂದು ಚುನಾವಣಾ ಆಯೋಗ ಎಲ್ಲಾ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದೆ. ಬಳ್ಳಾರಿಯಲ್ಲಿ ಬಿಜೆಪಿ ಮುಖಂಡರ ಖಾಸಗಿ ಬದುಕು, ಪ್ರಚಾರ ನಿರ್ವಹಣೆಗಳ ಮೇಲೆ ಧಕ್ಕೆ ಆಗುವ ರೀತಿಯಲ್ಲಿ ಚುನಾವಣಾ ಸಿಬ್ಬಂದಿ ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ಬಿಜೆಪಿ ಕುರಿತು ಹೊಂದಿರುವ ಧೋರಣೆಯನ್ನು ಬದಲಾಯಿಸಿಕೊಂಡು ಕರ್ತವ್ಯ ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಲಿದೆ. ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಾಗಬಾರದು ಎಂದು ಅವರು ಹೇಳಿದರು. [ಗ್ಯಾಲರಿ: ರಾಮುಲು ಪರ ಶೆಟ್ಟರ್ ಪ್ರಚಾರ]
ಬಿಜೆಪಿಯ ಅಂಗವಿಕಲ ಕಾರ್ಯಕರ್ತ, ತೋರಣಗಲ್ಲು ನಿವಾಸಿ ಅಂಬಣ್ಣನ ಮೇಲೆ ಕಲಂ 107 ಕಾಯ್ದೆಯನ್ವಯ ದೂರು ದಾಖಲಿಸಲಾಗಿದೆ. ಸಂಡೂರು ತಹಸೀಲ್ದಾರರು ಬಿಜೆಪಿ ಕಾರ್ಯಕರ್ತರಿಗೆ ಭಯ ಬೀಳಿಸುತ್ತಿದ್ದಾರೆ. ಪೊಲೀಸರು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಸಿದ್ಧರಾಮಯ್ಯ ಅವರ ಸರ್ಕಾರ ನಿರ್ಜೀವವಾಗಿದೆ
ಕಳೆದ 10 ತಿಂಗಳಿಂದ ಸಿದ್ಧರಾಮಯ್ಯ ಅವರ ಸರ್ಕಾರ ನಿರ್ಜೀವವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿದ್ಧರಾಮಯ್ಯ ಅನ್ ಪಾಪುಲರ್ ಸಿಎಂ. ಹಣಕಾಸು ನಿರ್ವಹಣೆಯಲ್ಲಿ ಸಂಪೂರ್ಣ ಎಡವಿದ್ದಾರೆ. ರಾಜ್ಯಾಡಳಿತ ಸಂಪೂರ್ಣವಾಗಿ ಕುಸಿದಿದೆ. ಸಿಎಂ ಹುದ್ದೆಯ ಜವಾಬ್ದಾರಿಯೇ ಪಾಲನೆ ಆಗುತ್ತಿಲ್ಲ. ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಶಾಸಕರೇ ಸಿದ್ಧರಾಮಯ್ಯ ವಿರುದ್ಧ ಸಿಡಿದೇಳಲಿದ್ದಾರೆ.
ಭಿನ್ನಮತ, ಗೊಂದಲಗಳಲ್ಲಿ ಸಿಲುಕಿರುವ ಸಿದ್ಧರಾಮಯ್ಯ ಸರ್ಕಾರದ ಬಗ್ಗೆ ಜನರಲ್ಲಿ ನಂಬಿಕೆ ಇಲ್ಲ. ಬದಲಾವಣೆ ಬಯಸಿರುವ ರಾಜ್ಯದ ಜನತೆ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ.
ಕೇಂದ್ರ ಸರ್ಕಾರ ವ್ಯಾಪಕ ಭ್ರಷ್ಟಾಚಾರ, ದುರಾಡಳಿತದಲ್ಲಿ ಮುಳುಗಿದೆ ಎಂದರು.

ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ
ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಬೇಕಾಗಿದೆ. ಮೋದಿ ಅಲೆ ಚಂಡಮಾರುತದಂತೆ, ಸುನಾಮಿಯಂತೆ ಭೋರ್ಗರೆಯುತ್ತಿದೆ. ಮೋದಿ ಅಲೆ ಕುರಿತು ಕಾಂಗ್ರೆಸ್ಸಿಗರಲ್ಲಿ ನಡುಕ ಹುಟ್ಟಿದೆ. ಸಿಎಂ, ಕೆಪಿಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ ಚಡಪಡಿಸುತ್ತಿದ್ದಾರೆ. ಬಳ್ಳಾರಿ ಲೋಕಸಭೆ ಕ್ಷೇತ್ರ ಸೇರಿದಂತೆ ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.
ರಾಹುಲ್ ಗಾಂಧಿ ಪ್ರಚಾರಕ್ಕೆ ಜನರೇ ಬರುತ್ತಿಲ್ಲ. ನೂರೈವ್ವತ್ತು ಜನರನ್ನು ಹಿಡಿದುಕೊಳ್ಳಲಾಗದ ಕಾಂಗ್ರೆಸ್ ನಾಯಕರಿಂದಾಗಿ ರಾಹುಲ್ ಗಾಂಧಿ ಸಂವಾದ ನಡೆಸುತ್ತಿದ್ದಾರೆ. ರಾಹುಲ್‍ಗಾಂಧಿ ನಡೆಸುವುದು ರ್ಯಾಲಿಯೋ - ಸಂವಾದವೋ ಜನರೇ ನಿರ್ಧರಿಸಬೇಕು. ನರೇಂದ್ರ ಮೋದಿ ಹೋದಲ್ಲಿ ಲಕ್ಷಾಂತರ ಜನರು ಸ್ವಯಂಪ್ರೇರೇಪಿತರಾಗಿ ಬರುತ್ತಿದ್ದಾರೆ.
ಸೂರ್ಯ - ಚಂದ್ರ ಎಷ್ಟು ನಿಖರವೋ, ಮೋದಿ ಪ್ರಧಾನಿ ಆಗುವುದೂ ಖಚಿತ. ಮತದಾರರು ಯಾರಿಗೆ ಮತ ಹಾಕಬೇಕು ಎಂದು ನಿರ್ಧರಿಸಿ ಮತದಾನದ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ. ಮೋದಿ ಪ್ರಧಾನಿ ಆಗಲಿದ್ದಾರೆ ಎಂದರು.

ಪೊಲೀಸರನ್ನು ಬಿಟ್ಟು ಜನರಿಗೆ ಕಿರುಕುಳ
ಕಾಂಗ್ರೆಸ್ಸಿಗರಿಗೆ ಸರಿಯಾಗಿ ಆಡಳಿತ ಮಾಡಲು ಬರುವುದಿಲ್ಲ, ಪೊಲೀಸರನ್ನು ಬಿಟ್ಟು ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗಧೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ಸಂಡೂರು ಬಿಜೆಪಿ ತಾಲೂಕು ಘಟಕ ತೋರಣಗಲ್ಲುನಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿ, ಜಗತ್ತಿನ ಯಾವುದೇ ಶಕ್ತಿ ಮೋದಿ ಪ್ರಧಾನಿ ಆಗುವುದನ್ನು ತಪ್ಪಿಸಲು, ನಿಯಂತ್ರಿಸಲು ಸಾಧ್ಯವಿಲ್ಲ. ಮೋದಿ ಚಂಡಮಾರುತ, ಬಿರುಗಾಳಿಯಂತೆ ಬೀಸಿಕೊಂಡು ಬಂದು ಪ್ರಧಾನಿ ಆಗಲಿದ್ದಾರೆ ಎಂದರು.
ಬಳ್ಳಾರಿ ಜಿಲ್ಲೆಯ ಅಧಿಕಾರಿಗಳು ಕಾಂಗ್ರೆಸ್ ಏಜೆಂಟ್‍ರಾಗಿದ್ದಾರೆ. ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿ ಪ್ರಧಾನಿಯಾದಲ್ಲಿ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದು ಖಚಿತ. ಬಿ. ಶ್ರೀರಾಮುಲು ಮಂತ್ರಿಯಾಗಿದ್ದಾಗ
ತೋರಣಗಲ್ - ಹೊಸಪೇಟೆವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ 240 ಕೋಟಿ ರೂಪಾಯಿ ಅನುದಾನ ತಂದಿದ್ದರು ಎಂದರು.

ಶ್ರೀರಾಮುಲು ವಾಲ್ಮೀಕಿ ಜನಾಂಗಕ್ಕೆ ಸೀಮಿತವಲ್ಲ
ಬಿ. ಶ್ರೀರಾಮುಲು ಕೇವಲ ವಾಲ್ಮೀಕಿ ಜನಾಂಗಕ್ಕೆ ಸೀಮಿತವಲ್ಲ. ಎಲ್ಲ ಜಾತಿ, ಜನಾಂಗ, ವರ್ಗದ ಪ್ರೀತಿ, ಗೌರವಕ್ಕೆ, ಮನ್ನಣೆಗೆ ಅರ್ಹರಾಗಿದ್ದಾರೆ. ಶ್ರೀರಾಮುಲು ಗೆದ್ದರೆ ಈ ಭಾಗದ ಜನರು ಗೆದ್ದಂತೆ. ನರೇಂದ್ರ ಮೋದಿ ಪ್ರಧಾನಿ ಆದಂತೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಸ್ವಂತ, ಸ್ವತಂತ್ರ ಆಡಳಿತ ನಡೆಸಲು ಸಾಧ್ಯವಿಲ್ಲ. ಹಣಕಾಸು, ಅಬಕಾರಿ ಸೇರಿ ಯಾವುದೇ ಇಲಾಖೆಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ 100 ಕೋಟಿ ರೂಪಾಯಿ ಅನುದಾನದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ, 120 ಕೋಟಿ ರೂಪಾಯಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಮೇಲ್ದರ್ಜೆಗೇರಿದ ವಿಮ್ಸ್, ನಗರದ ಪ್ರಮುಖ 17 ರಸ್ತೆಗಳ ಅಗಲೀಕರಣ, ನೂರಾರು ಒಳರಸ್ತೆಗಳ ಅಭಿವೃದ್ಧಿ, ಉದ್ಯಾನವನಗಳು, ರಿಂಗ್ ರಸ್ತೆ ಹೀಗೆ ನಾನಾ ಅಭಿವೃದ್ಧಿ ಕೆಲಸಗಳು ನಡೆದವು ಎಂದರು.

ಶೆಟ್ಟರ್ ಹಾಗೂ ಶ್ರೀರಾಮುಲು ಪರ ನಿಂತವರು
ಕೆಎಂಎಫ್ ಜಿ. ಸೋಮಶೇಖರರೆಡ್ಡಿ, ಸಂಸದೆ ಜೆ. ಶಾಂತಾ, ಮಾಜಿ ಶಾಸಕ ಬಾಣಾಪುರ ಶಿವರಾಮರೆಡ್ಡಿ, ಬಿಜೆಪಿ ಮುಖಂಡರಾದ ಎಸ್. ಗುರುಲಿಂಗನಗೌಡ, ಡಾ. ಎಸ್.ಜೆ.ವಿ. ಮಹಿಪಾಲ್, ಎ.ಎಂ. ಸಂಜಯ್, ಕೆ.ಎ. ರಾಮಲಿಂಗಪ್ಪ, ವಕ್ತಾರ ಜಿ. ರಾಮಚಂದ್ರಯ್ಯ, ಕೆ.ಎ. ವೇಮಣ್ಣ, ಮಹಿಳಾ ಪ್ರತಿನಿಧಿಗಳಾದ ಸುಮಾರೆಡ್ಡಿ, ಮಂಜಮ್ಮ ಮಲ್ಲೇಶ್, ಶಶಿಕಲಾ, ಶಿವಾಕೃಷ್ಣ, ಅಲವೇಲು, ರಾಮುಲಮ್ಮ ಸೇರಿ ಅನೇಕ ಕಾರ್ಯಕರ್ತರು ಹಾಜರಿದ್ದರು.
ಸಂಡೂರು ಬಿಜೆಪಿ ತಾಲೂಕು ಘಟಕ ತೋರಣಗಲ್ಲುನಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಡಾ. ವೆಂಕಟ್ ಮಹಿಪಾಲ್, ಗುತ್ತಿಗನೂರು ವಿರೂಪಾಕ್ಷಗೌಡ, ಚಕ್ರವರ್ತಿ, ದಿವಾಕರ್, ಗೋನಾಳು ರಾಜಶೇಖರಗೌಡ ಇನ್ನಿತರರು ಇದ್ದರು.

ಮಠದ ಶ್ರೀಗಳ ಆಶೀರ್ವಾದ ಪಡೆದ ಬಿ. ಶ್ರೀರಾಮುಲು
ಬಡವರನ್ನು ಬಡವರನ್ನಾಗಿಸಿ, ಶ್ರೀಮಂತರನ್ನು ಶ್ರೀಮಂತರನ್ನಾಗಿಸಿ ದೇಶವನ್ನು ಬಂಡವಾಳಶಾಹಿಗಳ ಕೈಗೊಪ್ಪಿಸಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಧೂಳೀಪಟ ಆಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಡಣಾಯಕನ ಕೆರೆ, ನಾಗಲಾಪುರ, ಚಿಲಕನಹಟ್ಟಿ ಸೇರಿ ವಿವಿಧ ಗ್ರಾಮಗಳಲ್ಲಿ ಬುಧವಾರ ಚುನಾವಣಾ ಪ್ರಚಾರ ನಿರ್ವಹಿಸಿ, ಏಪ್ರಿಲ್ 17 ರ ಮತದಾನದ ದಿನ ಪ್ರತಿಯೊಬ್ಬರೂ ಕಮಲ'ಕ್ಕೆ ಮತ ಚಲಾಯಿಸಬೇಕು. ಬಿಜೆಪಿ ಗೆಲ್ಲಿಸಿ ನರೇಂದ್ರ
ಮೋದಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಹೇಳಿದರು.












Click it and Unblock the Notifications