Gruhalakshmi; ಬಳ್ಳಾರಿ ಜಿಲ್ಲೆಯ ಫಲಾನುಭವಿಗಳು ಎಷ್ಟು?
ಬಳ್ಳಾರಿ, ಆಗಸ್ಟ್ 28: ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿಗಳಲ್ಲಿ 'ಗೃಹಲಕ್ಷ್ಮಿ' ಯೋಜನೆಯೂ ಒಂದು. ಆಗಸ್ಟ್ 30ರಂದು ಈ ಯೋಜನೆಗೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮ ನೇರ ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ.
'ಗೃಹಲಕ್ಷ್ಮಿ' ಯೋಜನೆ ಉದ್ಘಾಟನೆ ಕಾರ್ಯಕ್ರಮದ ಕುರಿತು ಯುವ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಸಭೆಯನ್ನು ನಡೆಸಿದರು. ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಸಚಿವ ಬಿ. ನಾಗೇಂದ್ರ ಮಾತನಾಡಿ, "ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಮಹಾತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ರಾಜ್ಯ ಮಟ್ಟದ ಚಾಲನೆ ಕಾರ್ಯಕ್ರಮ ಮೈಸೂರಿನಲ್ಲಿ ಆ. 30ರಂದು ನಡೆಯಲಿದ್ದು, ಕಾರ್ಯಕ್ರಮವನ್ನು ಮಹಾನಗರಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್‍ನ ವಾರ್ಡ್ ಮಟ್ಟದಲ್ಲಿ ಹಾಗೂ ಪ್ರತಿಯೊಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಎಲ್ಇಡಿ ಅಥವಾ ಪ್ರೊಜೆಕ್ಟರ್ ಪರದೆಯ ಮೂಲಕ ಮಹಿಳೆಯರು ವೀಕ್ಷಣೆ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ" ಎಂದು ಹೇಳಿದರು.
"ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ದಿನ ಮನೆಯ ಯಜಮಾನಿಯು ಅವರ ಮನೆಯ ಮುಂದೆ ರಂಗೋಲಿ ಹಾಕಬೇಕು. ಮನೆಯ ಮುಂದೆ ರಂಗೋಲಿಯಲ್ಲಿ 'ನಾನು ಗೃಹಲಕ್ಷ್ಮಿ, ಮನೆಯ ಯಜಮಾನಿ' ಎಂದು ಬರೆಯಬೇಕು, ಒಟ್ಟಾರೆಯಾಗಿ ಗ್ರಾಮಗಳಲ್ಲಿ ಹಬ್ಬದ ವಾತವರಣ ಮೂಡಿಸಲು ವ್ಯವಸ್ಥೆ ಮಾಡಲಾಗಿದೆ" ಎಂದು ಸಚಿವರು ತಿಳಿಸಿದರು.
"ಬಳ್ಳಾರಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಾರಂಭದ ದಿನದಿಂದ 27/08/2023ರ ತನಕ 3,01,180 ಫಲಾನುಭವಿಗಳ ಪೈಕಿ 2,59,161 (ಶೇ. 86.05) ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, 42,019 ಅರ್ಜಿ ಸಲ್ಲಿಸಲು ಬಾಕಿಯಿರುತ್ತದೆ. ಈ ಪೈಕಿ ನೋಂದಣಿಯಲ್ಲಿ ಜಿಲ್ಲೆಯು 5ನೇ ಸ್ಥಾನದಲ್ಲಿದೆ. ಕೂಡಲೇ ಅರ್ಹರು ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ" ಎಂದರು.
ತಾಲೂಕುವಾರು ಅಂಕಿ-ಅಂಶ: ಬಳ್ಳಾರಿ ನಗರಕ್ಕೆ ಫಲಾನುಭವಿಗಳ ಗುರಿ 77,945, ನೋಂದಣಿಯಾದವರು 69,089. ಬಳ್ಳಾರಿ ಗ್ರಾಮೀಣಕ್ಕೆ ಗುರಿ 50,488, ನೋಂದಣಿಯಾದವರು 24,926. ಕುರುಗೋಡು ಗುರಿ 26,495, ನೋಂದಣಿ 24,926. ಕಂಪ್ಲಿಗೆ ಗುರಿ 30,050, ನೋಂದಣಿ 24,137. ಸಿರುಗುಪ್ಪಗೆ ಗುರಿ 64,350, ನೋಂದಣಿ 55,372. ಸಂಡೂರು ಗುರಿ 51,852, ನೋಂದಣಿ 43,231.
ಮೈಸೂರಿನಲ್ಲಿ ಆಗಸ್ಟ್ 30ರ ಬುಧವಾರ ನಡೆಯುವ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನೆ ಸಮಾರಂಭದ ನೇರ ಪ್ರಸಾರದ ಕಾರ್ಯಕ್ರಮ ವೀಕ್ಷಿಸಲು ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟ ಗ್ರಾಮ ಪಂಚಾಯತ್ ಮಟ್ಟ ಸೇರಿದಂತೆ ಬಳ್ಳಾರಿಯಲ್ಲಿ 101 ಕಡೆ ವ್ಯವಸ್ಥೆ ಮಾಡಲಾಗಿದೆ.
ಮೈಸೂರಿನಲ್ಲಿ ಆಗಸ್ಟ್ 30ರ ಬುಧವಾರ ನಡೆಯುವ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನೆ ಸಮಾರಂಭದ ನೇರ ಪ್ರಸಾರದ ಕಾರ್ಯಕ್ರಮ ವೀಕ್ಷಿಸಲು ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟ ಗ್ರಾಮ ಪಂಚಾಯತ್ ಮಟ್ಟ ಸೇರಿದಂತೆ ಬಳ್ಳಾರಿಯಲ್ಲಿ 101 ಕಡೆ ವ್ಯವಸ್ಥೆ ಮಾಡಲಾಗಿದೆ.
ಉದ್ಘಾಟನಾ ಕಾರ್ಯಕ್ರಮದ ನೇರ ವೀಕ್ಷಣೆಗೆ ಸಿರುಗುಪ್ಪ ತಾಲೂಕಿನ ಬಾಲಾಜಿ ಚಿತ್ರಮಂದಿರ, ಕಾಡಸಿದ್ದೇಶ್ವರ ದೇವಸ್ಥಾನ ಹಾಗೂ ತೆಕ್ಕಲಕೋಟೆಯ 3ನೇ ವಾರ್ಡ್ ಪಕ್ಕಿರ ಮಸೀದಿ ಹತ್ತಿರ ಮತ್ತು 27 ಪಂಚಾಯತ್ ಕೇಂದ್ರ ಸ್ಥಾನಗಳಲ್ಲಿ, ಕುರುಗೋಡು ತಾಲೂಕಿನ ಎಸ್. ವಿ. ಕಲ್ಯಾಣ ಮಂಟಪ ಹಾಗೂ 12 ಪಂಚಾಯತ್ ಕೇಂದ್ರ ಸ್ಥಾನಗಳಲ್ಲಿ, ಕಂಪ್ಲಿ ತಾಲೂಕಿನ ಪುರಸಭೆ ಭವನ ಹಾಗೂ 20ನೇ ವಾರ್ಡ್ ಮಾರುತಿನಗರ ಮತ್ತು 11 ಪಂಚಾಯತ್‌ನಲ್ಲಿ ವೀಕ್ಷಣೆ ಮಾಡಬಹುದು.
ಬಳ್ಳಾರಿ ನಗರದಲ್ಲಿ ಡಾ. ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಮೈದಾನ, ಜಿಲ್ಲಾ ಕ್ರೀಡಾಂಗಣ ರಸ್ತೆಯ ವಾಲ್ಮೀಕಿ ಭವನ ಹಾಗೂ ಬಳ್ಳಾರಿ ಗ್ರಾಮಾಂತರದಲ್ಲಿ ಕುಡುತಿನಿ ಪಟ್ಟಣ ಪಂಚಾಯತ್ ಹಾಗೂ 25 ಪಂಚಾಯತ್ ಕೇಂದ್ರ ಸ್ಥಾನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಡೂರು ತಾಲೂಕಿನ ಆದರ್ಶ ಕಲ್ಯಾಣ ಮಂಟಪ ಹಾಗೂ ಕುರೇಕುಪ್ಪ ಪುರಸಭೆಯ ಶ್ರೀ ಆಂಜನೇಯ ದೇವಸ್ಥಾನ ಮತ್ತು 26 ಪಂಚಾಯತ್ ಕೇಂದ್ರ ಸ್ಥಾನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ಕಾರ್ಯಕ್ರಮ ವೀಕ್ಷಣೆ ನೇರ ಪ್ರಸಾರದ ಸ್ಥಳದಲ್ಲಿ ಒಂದು ಎಲ್‌ಇಡಿ ಟಿವಿ ಅಥವಾ ಒಂದು 10*10 ಅಳತೆಯ ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ಟಿವಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದ ನೇರಪ್ರಸಾರವನ್ನು ಪ್ರದರ್ಶಿಸಲಾಗುವುದು. ಹಾಗೂ ಎಲ್ಇಡಿ ಪರದೆಯಲ್ಲಿ ಮೈಸೂರು ಕಾರ್ಯಕ್ರಮದ ಸ್ಥಳದಿಂದ ಸ್ಥಳೀಯ ಕಾರ್ಯಕ್ರಮದ ಸ್ಥಳದೊಂದಿಗೆ ಪರಸ್ಪರ ಸಂವಾದ ನಡೆಸಲು ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications