ಬಿಜೆಪಿ ವಿರುದ್ಧ ಮಾಜಿ ಸಚಿವ ಜನಾರ್ದನ ರೆಡ್ಡಿ ಕಿಡಿ!
ಬಳ್ಳಾರಿ, ಅಕ್ಟೋಬರ್ 31; ಗಣಿ ನಾಡಿನಲ್ಲಿ ರಾಜಕೀಯ ದಿನೇ ದಿನೇ ರಂಗೇರಿದೆ. ಒಂದು ಕಾಲದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ ಗಾಲಿ ಜನಾರ್ದನ ರೆಡ್ಡಿ ಇಂದು ಬಿಜೆಪಿ ವಿರುದ್ಧವೇ ಕಿಡಿ ಕಾರುವ ಮೂಲಕ ಬಿಜೆಪಿಗೆ ಮುಜುಗರ ತಂದಿದ್ದಾರೆ.
ಮುಂದಿನ ದಿನ ಕಾದು ನೋಡಿ ಎಂದಿರುವ ಜನಾರ್ದನ ರೆಡ್ಡಿ ಅವರ ಹೊಸ ರಾಜಕೀಯ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿಕೊಟಿದ್ದು ಕರ್ನಾಟಕ. ಆಗ ಸಹಕಾರಕ್ಕೆ ನಿಂತರವರು ರೆಡ್ಡಿ ಸಹೋದರರು.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ ಗಾಲಿ ಜನಾರ್ದನ ರೆಡ್ಡಿ, ಒಂದು ಕಾಲದಲ್ಲಿ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಆದರೆ ಇಂದು ಬಿಜೆಪಿಗೆ ರೆಡ್ಡಿ ಬಳಗ ಬೇಕಾಗಿಲ್ಲಾ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಬಿಜೆಪಿಗೆ ಬೇಡವಾದ್ರಾ ರೆಡ್ಡಿ ಸಹೋದರರು
ಅಕ್ರಮ ಗಣಿಗಾರಿಕೆ ಆರೋಪ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಜೈಲು ಸೇರಿದ್ದರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ರೆಡ್ಡಿ ಅವರ ಮೇಲೆ ಕೃಪೆ ತೋರಬಹುದಾಗಿತ್ತು. ಆದರೆ ಇಂದು ಬಿಜೆಪಿಗೆ ರೆಡ್ಡಿ ಬೇಕಾಗಿಲ್ಲ. ಅದೇ ಕಾರಣಕ್ಕಾಗಿ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲು ಬಿಜೆಪಿ ಪಕ್ಷ ಹಿಂದೇಟು ಹಾಕುತ್ತಿದೆ. ಈ ಕಾರಣಕ್ಕೆ ಜನಾರ್ದನ ರೆಡ್ಡಿ ಬಿಜೆಪಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಮೊದಲು ಕಾಂಗ್ರೆಸ್ ನಾಯಕರು ಹೆಚ್ಚು ತೊಂದರೆ ಕೊಟ್ಟಿದ್ದರು. ಆದರೆ ಈಗ, ಬಿಜೆಪಿ ನಾಯಕರು ಕೂಡ ನನಗೆ ತೊಂದರೆ ಕೊಡುತ್ತಿದ್ದಾರೆ" ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ರಾಜಕೀಯ ನಡೆಯ ಬಗ್ಗೆ ನಿರ್ಧಾರ ಮಾಡುತ್ತೇನೆ
"ನನ್ನ ರಾಜಕೀಯ ಜೀವನ ಮುಂದೆ ಹೇಗಾಗುತ್ತದೆ? ಅದು ನನಗೆ ಗೊತ್ತಿಲ್ಲ. ನಾನು ಬೆಳೆಸಿದ ಪಕ್ಷದವರು ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ. ಕಾಂಗ್ರೆಸ್‌ನವರು ಕಷ್ಟ ಕೊಟಿದ್ದಾರೆ, ಆದರೆ ಬಿಜೆಪಿ ಅವರು ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ. ನಾನು ನವೆಂಬರ್ 6ರ ಬಳಿಕ ಬಳ್ಳಾರಿಯಲ್ಲಿ ಇರುವ ಹಾಗಿಲ್ಲ. ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ನವೆಂಬರ್ 6ರ ಬಳಿಕ ಬಳಿಕ ನಾನು ಬಳ್ಳಾರಿ ಬಿಡಬೇಕು, ಆದರೆ ನಾನು ಬಳ್ಳಾರಿ ಬಿಟ್ಟು ಬೆಂಗಳೂರಿನಲ್ಲಿ ಇರಲ್ಲ. ಇಲ್ಲೇ ಆಸುಪಾಸಿನಲ್ಲಿ ಇರುತ್ತೇನೆ. ರಾಜಕೀಯ ನಡೆಯ ಬಗ್ಗೆ ಮುಂದೆ ನಾನು ಸೂಕ್ತ ನಿರ್ಧಾರ ಮಾಡುತ್ತೇನೆ" ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

ಹೇಳಿಕೆಯ ಹಿಂದೆ ಕಾಣದ ಕೈಗಳಿವೆ ಎಂದ ಜನಾರ್ದನ ರೆಡ್ಡಿ
"ಸೋಮಶೇಖರ್ ರೆಡ್ಡಿ ಮುಸ್ಲಿಂಮರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಆದರೆ ಆಗ ಅವರು ಹಾಗೆ ಹೇಳಿಕೆ ನೀಡಲು ಕಾರಣ ಬೇರೆ ಇದೆ. ಅವರು ಅಂದು ಹೇಳಿಕೆ ನೀಡಿ ಕ್ಷಮೆ ಕೂಡಾ ಕೇಳಿದ್ದರು. ಆ ಕಾಣದ ಕೈಗಳು ಹೇಳಿದ ಹಾಗೆ ಸೋಮಶೇಖರ್ ರೆಡ್ಡಿ ಹೇಳಿಕೆ ನೀಡಿದ್ದರು" ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ ಮುಂದಿನ ದಿನದಲ್ಲಿ ನಾನು ಹೇಳಿಕೆ ನೀಡುವಂತೆ ಯಾರು ಹೇಳಿದ್ದರು ಎನ್ನುವುದನ್ನು ನಾನು ಬಹಿರಂಗ ಪಡಿಸುತ್ತೇನೆ" ಎಂದು ಹೇಳಿದ್ದಾರೆ.

ಎರಡು ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಗಾಲಿ ಜನಾರ್ದನ ರೆಡ್ಡಿ
ಸೋಮಶೇಖರ್ ರೆಡ್ಡಿ ಮುಸ್ಲಿಂಮರ ಬಗ್ಗೆ ಅವಹೇಳನ ಕಾರಿ ಹೇಳಿಕೆ ನೀಡುವಂತೆ ಮಾಡಿದವರ ಯಾರು ಎನ್ನುವ ಹೊಸ ಪ್ರಶ್ನೆ ಎಲ್ಲರಲ್ಲಿ ಉದ್ಭವವಾಗಿದೆ. ಜನಾರ್ದನ ರೆಡ್ಡಿ ತಾವು ಕಟ್ಟಿ ಬೆಳೆಸಿದ ಪಕ್ಷದ ವಿರುದ್ಧವೇ ಅಸಮಾಧಾನದ ಮಾತುಗಳನ್ನು ಆಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೇ ಜನಾರ್ದನ ರೆಡ್ಡಿ ಮುಂದಿನ ರಾಜಕೀಯ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳದ ಗಂಗಾವತಿ ಹಾಗೂ ರಾಯಚೂರು ಕ್ಷೇತ್ರಗಳ ಮೇಲೆ ಜನಾರ್ದನ ರೆಡ್ಡಿ ಕಣ್ಣಿಟ್ಟಿದ್ದಾರೆ ಎಂಬ ಸುದ್ದಿಗಳೂ ಇವೆ.












Click it and Unblock the Notifications