ಸನಾತನ ಧರ್ಮದ ಬಗ್ಗೆ ಮಾತನಾಡುವ ಉದಯನಿಧಿ ದಕ್ಷಿಣ ಭಾರತದ ಪಪ್ಪು-ಶ್ರೀರಾಮುಲು ವ್ಯಂಗ್ಯ
ಬಳ್ಳಾರಿ, ಸೆಪ್ಟೆಂಬರ್ 06: ರಾಜ್ಯದಲ್ಲಿ ಭೀಕರ ಬರ ತಾಂಡವಾಡ್ತಾಯಿದೆ, ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ರೈತ ವಿರೋಧಿ ಧೋರಣೆ ತೋರುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಸೆಪ್ಟೆಂಬರ್ 8ರಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀರಾಮುಲು ಅವರು, ರಾಜ್ಯ ಸರ್ಕಾರ ಹಾಗೂ ಅಸರ ಸಚಿವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಅದಕ್ಕೆ ಸಾಕ್ಷಿ ಎನ್ನುವಂತೆ ಸಚಿವ ಶಿವಾನಂದ್ ಪಾಟೀಲ್ ರೈತರು ಪರಿಹಾರದ ಸಲುವಾಗಿ ಆತ್ಮಹತ್ಯೆ ಮಾಡಿಕೊಳ್ತಾರೆ ಎಂದಿದ್ದಾರೆ. ಸಚಿವ ಶಿವಾನಂದ ಅವರಿಗೆ ಸ್ವಲ್ಪವಾದರೂ ಜ್ಞಾನ ಇರಬೇಕಲ್ಲ. ಯಾರಾದರೂ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ತಾರಾ..? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಂತ್ರಿ ಶಿವಾನಂದ ಪಾಟೀಲರು ಹುಚ್ಚು ಹಿಡಿದಿದೆ ಅನಿಸುತ್ತದೆ. ಬೇಕಾದರೇ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡುತ್ತೇವೆ. ಆದರೆ ರೈತರ ಆತ್ಮಹತ್ಯೆಯ ಬಗ್ಗೆ ಹಗುರವಾಗಿ ಮಾತನಾಡಬೇಡಿ ಅಂಥಾ ಶಿವಾನಂದ ಪಾಟೀಲ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಸರ್ಕಾರ ಅಧಿಕಾರಕ್ಕೆ ಬಂದ 100 ದಿನದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನರು ಸತ್ತ ಬಳಿಕ ಪರಿಹಾರ ಕೊಡುತ್ತಾ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ಶ್ರೀ ರಾಮುಲು ಕಿಡಿಕಾರಿದರು.
ಅಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬರಾದ್ರು ಒಬ್ಬ ರೈತರ ಮನೆಗೆ ಹೋಗಿ ಕೇಳಿದ್ದಿರಾ..? ಎಲ್ಲಾ ಜಿಲ್ಲಾ ಮಂತ್ರಿಗಳು ಏನು ಘನಂದಾರಿ ಕೆಲಸ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ. ಬೆಂಗಳೂರಿನಲ್ಲಿ ಬಚ್ಚಿಟ್ಟುಕೊಂಡಿರುವ ಉಸ್ತುವಾರಿ ಮಂತ್ರಿಗಳು ಕೂಡಲೇ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಬೇಕೆಂದು ಒತ್ತಾಯಿಸಿದ ಮಾಜಿ ಸಚಿವರು ರೈತರ ಶಾಪ ರಾಜ್ಯ ಸರ್ಕಾರಕ್ಕೆ ತಟ್ಟದೇ ಇರಲ್ಲ ಎಂದರು.
ನಿಮ್ಮ ಹಣೆಬರಹಕ್ಕೆ ನೀವೆಲ್ಲ ಗ್ಯಾರಂಟಿ ಹಾಗೂ ಲಾಟರಿ ಮೂಲಕ ಗೆದ್ದಿದಿರಾ. ಹಾಗಾಗಿ ಇದೊಂದು ಲಾಟರಿ ಸರ್ಕಾರ ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ವ್ಯಂಗ್ಯ ಮಾಡಿದ ಶ್ರೀರಾಮುಲು, ರಾಜ್ಯದ ನೆಲ ಜಲದ ರಕ್ಷಣೆ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ ಈಗ ಕನ್ನಡಿಗರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ ಎಂದರು.

ಇಷ್ಟು ದಿನ ಕಾವೇರಿ ನೀರು ಕರ್ನಾಟಕಕ್ಕೆ ಮೊದಲ ಆದ್ಯತೆ ಇತ್ತು. ಆದರೆ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಎಲ್ಲ ಸೇರಿ ತಮಿಳುನಾಡಿಗೆ ಯಾರನ್ನು ಕೇಳದೇನೆ ನೀರು ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಮನಸ್ಸು ಮಾಡಿದ್ರೆ ಕಾವೇರಿ ನೀರು ಬಿಡದೇ ಮುಂದೂಡಬಹುದಿತ್ತು. ಆದರೆ ಸ್ಟಾಲೀನ್ ಇಂಡಿಯಾ ಒಕ್ಕೂಟದಲ್ಲಿ ಇದ್ದಾರೆ ಎಂದು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಎಂದು ಹೇಳಿದರು.
ಆ ಭಾಗ್ಯ ಈ ಭಾಗ್ಯ ಕೊಟ್ಟಿದ್ದೇವೆ ಎಂದು ಹೇಳುವ ಸರ್ಕಾರ ರಾಜ್ಯದ ಜನತೆಗೆ, ರೈತರಿಗೆ ಕತ್ತಲ ಭಾಗ್ಯ ನೀಡಿದೆ ಅಷ್ಟೇ. ಗ್ರಾಮಾಂತರ ಪ್ರದೇಶದ ಜನರು ಕಗ್ಗತ್ತಲೆಯಲ್ಲಿದ್ದಾರೆ. ರೈತರಿಗೆ ಲೋಡ್ ಶೆಡ್ಡಿಂಗ್ ಸಮಸ್ಯೆ ಸಾಕಷ್ಟಿದೆ ಎಂದು ಶ್ರೀರಾಮುಲು ತಿಳಿಸಿದರು.
ಉದಯನಿಧಿ ಸ್ಟಾಲೀನ್ ನೀಡಿರುವ ಹೇಳಿಕೆ ಕುರಿತು ಮಾತನಾಡಿದ ಅವರು, ಉತ್ತರ ಭಾರತದ ಪಪ್ಪು ರಾಹುಲ್ ಗಾಂಧಿ ಆದರೆ ದಕ್ಷಿಣ ಭಾರತದ ಪಪ್ಪು ಉದಯನಿಧಿ. ಸನಾತನ ಧರ್ಮದ ಬಗ್ಗೆ ಮಾತನಾಡೋ ಉದಯನಿಧಿ ನಿಜಕ್ಕೂ ಪಪ್ಪು ಅವನಿಗೇನು ಗೊತ್ತಿಲ್ಲ ಎಂದರು.
ಮತ್ತೆ ಪ್ರಧಾನಿ ಮೋದಿ ಬರಬಾರದು ಅಂತಾ ಎಲ್ಲರೂ ಒಕ್ಕೂಟ ಮಾಡಿಕೊಂಡಿದ್ದಾರೆ. ಇಂಡಿಯಾ ಒಕ್ಕೂಟಕ್ಕೆ ನಾವು ಹೆದರಿಲ್ಲ. ಸೂರ್ಯ ಚಂದ್ರ ಇರೋದೆಷ್ಟು ಸತ್ಯನೋ 2024ರಲ್ಲಿ ಪುನಃ ಮೋದಿ ಜಿ ಮತ್ತೆ ಪ್ರಧಾನಿ ಆಗುವುದು ಅಷ್ಟೇ ನಿಜ ಎಂದು ಲೋಕಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಮಹಾಭಾರತದ ಕಾಲದಿಂದಲೂ ಭಾರತ ಅಂತಾ ಇದೆ. ಮೊದಲಿಂದಲೂ ಭಾರತ ಎನ್ನುವ ಹೆಸರಿಗೆ ಬೇಡಿಕೆ ಇದೆ. ಇಂಡಿಯಾ ಎನ್ನುವುದು ಬ್ರಿಟೀಷರು ಇಟ್ಟಿರುವ ಹೆಸರು. ಇಂಡಿಯಾ ಒಕ್ಕೂಟಕ್ಕೆ ಭಯ ಬಿದ್ದು ಬದಲಿ ಮಾಡುತ್ತಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಸುದ್ದಿಗೋಷ್ಠಿಯಲ್ಲಿ ಹೇಳಿದರು.












Click it and Unblock the Notifications