ಬೆಳೆ ಸಮೀಕ್ಷೆ ಆರಂಭ: ರೈತರು ತಮ್ಮ ಬೆಳೆ ವಿವರಗಳನ್ನು ತಾವೇ ದಾಖಲಿಸಬಹುದು
ಬಳ್ಳಾರಿ, ಜುಲೈ 15: ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳ ವಿವರ ದಾಖಲಿಸಲು ಆಂಡ್ರಾಯ್ಡ್ ಆಪ್ ಡೌನ್‍ಲೋಡ್ ಮಾಡಿಕೊಂಡು ಬೆಳೆ ವಿವರ ತಾವೇ ಸ್ವತಃ ಮೊಬೈಲ್ ತಂತ್ರಾಂಶದ ಮೂಲಕ ದಾಖಲಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಾದ್ಯಂತ ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗಿದ್ದು, ರೈತರು ಬೆಳೆದ ಬೆಳೆಗಳ ಬಗ್ಗೆ ನಿಖರವಾಗಿ ಮಾಹಿತಿ ಪಡೆದುಕೊಳ್ಳಲು ಇ-ಆಡಳಿತ ವತಿಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ.

ಮೊಬೈಲ್ ಅಪ್ಲಿಕೇಷನ್ ಪಡೆಯಲು ಅನುಸರಿಸಬೇಕಾದ ಅಂಶಗಳು
ರೈತರು ತಮ್ಮ ಮೊಬೈಲಿನಲ್ಲಿ ಗೂಗಲ್ ಪ್ಲೇಸ್ಟೋರ್‍ನಿಂದ ಬೆಳೆ ಸಮೀಕ್ಷೆ ಮುಂಗಾರು ಹಂಗಾಮಿನ "ಕ್ರಾಪ್ ಸರ್ವೇ ಖಾರಿಫ್ 2024" (Crop Survey Kharif 2024) ಆಪ್‍ನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ 3,80,888 ಬೆಳೆ ತಾಕುಗಳಿದ್ದು, ಆ ತಾಕುಗಳಿಗೆ ರೈತರು ತಮ್ಮ ಬೆಳೆಗಳ ಮಾಹಿತಿಯನ್ನು ಸ್ವಯಂ ದಾಖಲಿಸಬೇಕು.
ಬೆಳೆ ಸಮೀಕ್ಷೆ ದತ್ತಾಂಶ ಮಾಹಿತಿಯನ್ನು ಬೆಳೆ ವಿಸ್ತರಣೆ ಎಣಿಕೆ ಕಾರ್ಯದಲ್ಲಿ, ಬೆಳೆ ಕಟಾವು ಪ್ರಯೋಗದಲ್ಲಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ, ಬೆಳೆಹಾನಿ ವರದಿ ಸಿದ್ಧಪಡಿಸಲು, ಬೆಳೆ ವಿಮಾ ಯೋಜನೆ, ಬೆಂಬಲ ಬೆಲೆ ಯೋಜನೆ, ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಿಸಲು, ರಾಷ್ಟ್ರೀಯ ಹಾಗೂ ಗ್ರಾಮೀಣ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಮಂಜೂರು ಮಾಡಲು ಬೆಳೆ ಸಮೀಕ್ಷೆ ಮಾಹಿತಿಯನ್ನು ಉಪಯೋಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ, ತೋಟಗಾರಿಕೆ, ಪಿ.ಆರ್ ಅಥವಾ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜು.29 ರಂದು ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ
ಕಾರ್ಮಿಕರ ಭವಿಷ್ಯ ಸಂಸ್ಥೆ ಬಳ್ಳಾರಿ ಪ್ರಾದೇಶಿಕ ಕಚೇರಿ ವತಿಯಿಂದ ಭವಿಷ್ಯ ನಿಧಿ ನಿಮ್ಮ ಹತ್ತಿರಕ್ಕೆ ಎಂಬ ಅಂಶದಡಿ ಜುಲೈ 29 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಡೂರು ತಾಲ್ಲೂಕಿನ ತೋರಣಗಲ್ಲಿನ ಎಂಡಿ ಮೂವರ್ಸ್‍ನಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಆಯುಕ್ತ ಕೆ.ವೆಂಕಟ ಸುಬ್ಬಯ್ಯ ಅವರು ತಿಳಿಸಿದ್ದಾರೆ.
ಕಾರ್ಮಿಕರ, ಪಿಂಚಣಿದಾರರ ಮತ್ತು ಉದ್ಯೋಗದಾತರರ ಕುಂದು ಕೊರತೆ ಪರಿಹಾರ, ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಉದ್ಯೋಗದಾತರ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಅರಿವು, ಕಾರ್ಮಿಕರಿಗೆ, ಉದ್ಯೋಗದಾತರಿಗೆ, ಪ್ರಧಾನ ಉದ್ಯೋಗದಾತರಿಗೆ ಮತ್ತು ಗುತ್ತಿಗೆದಾರರಿಗೆ ಲಭ್ಯವಿರುವ ಆನ್ಲೈನ್ ಸೇವೆಗಳ ಮಾಹಿತಿ, ಹೊಸ ಉಪಕ್ರಮಗಳು ಹಾಗೂ ಸುಧಾರಣೆ ಕ್ರಮಗಳ ಕುರಿತು ಮಾಹಿತಿ ಒದಗಿಸುವ ಕಾರ್ಯಕ್ರಮವಾಗಿದೆ.
ಕಾರ್ಮಿಕರು, ಪಿಂಚಣಿದಾರರು, ಉದ್ಯೋಗದಾತರು ಜು.29 ರಂದು ನಡೆಯುವ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications