ಹೊಸಪೇಟೆಯಲ್ಲಿ ಆನಂದ್ ಸಿಂಗ್ ವಿರುದ್ಧ ದೀಪಕ್ ಸಿಂಗ್
ಬಳ್ಳಾರಿ, ಏಪ್ರಿಲ್. 22 : ಬಳ್ಳಾರಿ ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ ದೀಪಕ್ ಕುಮಾರ್ ಸಿಂಗ್ ಅವರು ಕಾಂಗ್ರೆಸ್ ಬಿಟ್ಟು, ಜೆಡಿಎಸ್ ಸೇರಿ ಸ್ಪರ್ಧಿಸಲಿದ್ದಾರೆ. ಇವರ ಸ್ಪರ್ಧೆಯಿಂದ ಕಾಂಗ್ರೆಸ್‍ನ ಅಭ್ಯರ್ಥಿ ಬಿ.ಎಸ್. ಆನಂದಸಿಂಗ್ ಅವರ ಗೆಲುವಿನಲ್ಲಿ ಅಡ್ಡಗಾಲು ಉಂಟಾಗುವ ಸಾಧ್ಯತೆಗಳೇ ಹೆಚ್ಚಿವೆ. ಏಪ್ರಿಲ್ 23 ರಂದು ದೀಪಕ್ ಕುಮಾರ್ ಸಿಂಗ್ ನಾಮಪತ್ರ ಸಲ್ಲಿಸಲಿದ್ದಾರೆ.
ದೀಪಕ್‍ಸಿಂಗ್ ಕಾಂಗ್ರೆಸ್‍ನ ನಿಷ್ಠಾವಂತ. ಕಾಂಗ್ರೆಸ್ ಟಿಕೇಟ್‍ಗಾಗಿ ಕಳೆದ ದಶಕಗಳಿಂದ ಪಕ್ಷದ ಜೊತೆಯಲ್ಲೇ ಗುರುತಿಸಿಕೊಂಡಿದ್ದರು. ಆದರೆ, ಪಕ್ಷಾಂತರ ಪರ್ವದಲ್ಲಿ ಬಿಜೆಪಿ ಬಿಟ್ಟು, ಕಾಂಗ್ರೆಸ್ ಸೇರಿದ ಬಿ.ಎಸ್. ಆನಂದಸಿಂಗ್ ಅವರಿಗೆ ಪಕ್ಷ ಟಿಕೇಟ್ ನೀಡಿತು. ಆಗಿನಿಂದಲೂ ಪಕ್ಷದ ವರಿಷ್ಟರಲ್ಲಿ ತಮ್ಮ ಅಹವಾಲು ಸಲ್ಲಿಸುತ್ತಲೇ ಇದ್ದ ದೀಪಕ್ ಕುಮಾರ್ ಸಿಂಗ್, ಹಿರಿಯ ಮುಖಂಡರ ಮಾತುಗಳಿಂದ ಸಮಾಧಾನ ಆಗಲಿಲ್ಲ. ಬದಲಾಗಿ, ತಾವೂ ಪಕ್ಷಾಂತರ ಮಾಡಿ, ಜೆಡಿಎಸ್‍ನಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ದೀಪಕ್ ಕುಮಾರ್ ಸಿಂಗ್, 'ಕಾಂಗ್ರೆಸ್ ಪಕ್ಷದಲ್ಲಿ ಕಳೆದ 27 ವರ್ಷಗಳಿಂದ ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ. ಪಕ್ಷ ಕಟ್ಟಿದವರಿಗೆ ಪಕ್ಷದಲ್ಲಿ ಬೆಲೆ ಇಲ್ಲವಾಗಿದೆ. ಪಕ್ಷಾಂತರಿಗಳಿಗೆ ಸಾಕಷ್ಟು ಗೌರವವಿದೆ. ನನಗೆ ಟಿಕೇಟ್ ನೀಡಿಲ್ಲ ಎನ್ನುವದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪಕ್ಷಕ್ಕಾಗಿ ದುಡಿದವರ ಶ್ರಮವನ್ನು ಗುರುತಿಸುವ ಕೆಲಸ ಮುಖಂಡರಿಂದ ಆಗಲಿಲ್ಲ. ವರಿಷ್ಠರಿಗೆ ಮಾಹಿತಿ ನೀಡಿ, ಜೆಡಿಎಸ್ ಸೇರುತ್ತಿರುವೆ. ಏಪ್ರಿಲ್ 23 ರ ಸೋಮವಾರ ನಾಮಪತ್ರ ಸಲ್ಲಿಸುವೆ' ಎಂದರು.












Click it and Unblock the Notifications