ಹೊಸಪೇಟೆ-ಹರಿಹರ ರೈಲು ವೇಳಾಪಟ್ಟಿ ಬದಲಾವಣೆಗೆ ಒತ್ತಾಯ
ಬಳ್ಳಾರಿ, ಮಾರ್ಚ್ 12 : ಕೊಟ್ಟೂರು ಮೂಲಕ ಸಂಚಾರ ನಡೆಸುವ ಹೊಸಪೇಟೆ-ಹರಿಹರ ರೈಲಿನ ವೇಳಾಪಟ್ಟಿ ಬದಲಾವಣೆ ಮಾಡುವಂತೆ ಬೇಡಿಕೆ ಇಡಲಾಗಿದೆ. ಆರು ತಿಂಗಳ ಹಿಂದೆ ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲುಗಳ ಸಂಚಾರ ಆರಂಭವಾಗಿತ್ತು.
ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಬಳ್ಳಾರಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ಇರುವ ರೈಲಿನ ವೇಳಾಪಟ್ಟಿ ಜನರಿಗೆ ಅನುಕೂಲವಾಗಿಲ್ಲ ಎಂದು ಹೇಳಿದ್ದಾರೆ.
ಸದ್ಯ ರೈಲು ಪ್ರತಿದಿನ ಬೆಳಗ್ಗೆ 6.30ಕ್ಕೆ ಹರಿಹರದಿಂದ ಹೊರಟು ಮಧ್ಯಾಹ್ನ 1ಕ್ಕೆ ಹೊಸಪೇಟೆಗೆ ತಲುಪುತ್ತಿದೆ. 130 ಕಿ. ಮೀ. ಕ್ರಮಿಸಲು ರೈಲು 6 ತಾಸು ತೆಗೆದುಕೊಳ್ಳುತ್ತಿದೆ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ, ರೈಲಿನಲ್ಲಿ ಪ್ರಯಾಣಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ.

ಈ ರೈಲನ್ನು ಬಳ್ಳಾರಿಯ ತನಕ ವಿಸ್ತರಣೆ ಮಾಡಬೇಕು. ಅಲ್ಲಿಂದ ಪ್ರತಿನಿತ್ಯ ಬಳ್ಳಾರಿ ಹಾಗೂ ಹರಿಹರದಿಂದ ಏಕಕಾಲಕ್ಕೆ ಬೆಳಗ್ಗೆ 7ಕ್ಕೆ ಸಂಚಾರ ಆರಂಭಿಸುವಂತೆ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಬೆಳಗ್ಗೆ 8ರೊಳಗೆ ಹೊಸಪೇಟೆಯಿಂದ ಹೊರಟು 9.30ರ ಒಳಗಾಗಿ ಬಳ್ಳಾರಿಗೆ ತಲುಪವಂತಹ ನೂತನ ರೈಲನ್ನು ಆರಂಭಿಸಬೇಕು. ಸಂಜೆ 7ಕ್ಕೆ ಬಳ್ಳಾರಿಯಿಂದ ಹೊರಟು, ರಾತ್ರಿ 10ರೊಳಗೆ ಹೊಸಪೇಟೆ ತಲುಪುವಂತೆ ರೈಲು ಆರಂಭಿಸಬೇಕು ಎಂದು ಮನವಿ ಮಾಡಲಾಗಿದೆ.
ಎರಡು ದಶಕಗಳಿಂದ ಹರಿಹರ-ಕೊಟ್ಟೂರು ಪ್ರಯಾಣಿಕರ ರೈಲಿಗಾಗಿ ಬೇಡಿಕೆ ಇತ್ತು. 2019ರ ಅಕ್ಟೋಬರ್ 18ರಂದು ರೈಲು ಸಂಚಾರ ಆರಂಭವಾಗಿತ್ತು. ಇದರಿಂದಾಗಿ ಬೆಂಗಳೂರು-ಹೊಸಪೇಟೆ-ಹಂಪಿ ನಡುವಿನ ಪ್ರಯಾಣದ ಅವಧಿ ಕಡಿತವಾಗಿತ್ತು.












Click it and Unblock the Notifications