ಸಂಡೂರು: ತೋರಣಗಲ್‌ನ 42 ವರ್ಷದ ವ್ಯಕ್ತಿಗೆ ಕೊರೊನಾ ದೃಢ, ಅಗತ್ಯ ಕ್ರಮಕ್ಕೆ ಡಿಸಿ ಸೂಚನೆ
ಬಳ್ಳಾರಿ, ಡಿಸೆಂಬರ್, 30: ಜಿಲ್ಲೆಯ ಸಂಡೂರು ತಾಲೂಕು ತೋರಣಗಲ್‌ನ 42 ವರ್ಷದ ವ್ಯಕ್ತಿಗೆ ಕೋವಿಡ್ ದೃಢಪಟ್ಟಿದೆ. ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೆಎಸ್‌ಡಬ್ಲ್ಯೂ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಗುರುವಾರ ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ದಾಖಲಾದ ಕೋವಿಡ್‌ನ ಮೊದಲ ಪ್ರಕರಣ ಇದಾಗಿದೆ. ಆದರೆ ರೋಗಿಯ ಪ್ರವಾಸದ ವಿವರ ಇನ್ನೂ ತಿಳಿದುಬಂದಿಲ್ಲ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ತಿಳಿಸಿದ್ದಾರೆ.
ಕೊರೊನಾ ನಾಲ್ಕನೇ ಅಲೆಯನ್ನು ಎದುರಿಸಲು ಅಗತವಿರುವ್ಯ ಆಕ್ಸಿಜನ್ ಬೆಡ್, ವೆಂಟಿಲೇಟರ್‌ಗಳನ್ನು ಸಿದ್ಧಪಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಕೋವಿಡ್ ಮುಂಜಾಗ್ರತಾ ಕ್ರಮಗಳ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳು ಮತ್ತು ಆಕ್ಸಿಜನ್ ಬೆಡ್‍ಗಳು ಸೇರಿದಂತೆ ಅಗತ್ಯವಿರುವ ವೆಂಟಿಲೇಟರ್‌ಗಳನ್ನು ಆಳವಡಿಸಿ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿರುವ ಐಸಿಯು ಬೆಡ್‍ಗಳ ವಿವರ
ವಿಮ್ಸ್ 5, ಜಿಲ್ಲಾಸ್ಪತ್ರೆ 5, ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಡೂರು 2, ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿರುಗುಪ್ಪ 2, ತೋರಣಗಲ್ಲಿನ ಸಂಜೀವಿನಿ ಆಸ್ಪತ್ರೆಯಲ್ಲಿ 5 ಬೆಡ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು. ಇನ್ನು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ನಾಲ್ಕನೇ ಅಲೆ ಮುಂಜಾಗ್ರತೆ ಕ್ರಮವಾಗಿ ವಿಮ್ಸ್‌ನಲ್ಲಿ 10, ಜಿಲ್ಲಾಸ್ಪತ್ರೆ 10, ಸಂಡೂರು 5, ಸಿರುಗುಪ್ಪ 5, ಮೋಕಾ 5, ತೋರಣಗಲ್ಲು 5, ರೂಪನಗುಡಿ 5, ತೆಕ್ಕಲಕೋಟೆ 5, ಕುರುಗೊಡು 5, ಕಂಪ್ಲಿ 5, ಸಂಜೀವಿನಿ ಜಿಂದಾಲ್ ಆಸ್ಪತ್ರೆಯಲ್ಲಿ 5 ಆಕ್ಸಿಜನ್ ಬೆಡ್‍ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಲಭ್ಯವಿರುವ ಆಕ್ಸಿಜನ್ ಸಿಲಿಂಡರ್‌ಗಳು
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 530 ಆಕ್ಸಿಜನ್ ಜಂಬೋ ಸಿಲಿಂಡರ್‌ಗಳು ಲಭ್ಯವಿದ್ದು, 1500 ಎಲ್‍ಪಿಎಂ ಸಾಮರ್ಥ್ಯದ 3 ಆಕ್ಸಿಜನ್ ಉತ್ಪಾದನಾ ಘಟಕಗಳಿವೆ. ಉತ್ಪಾದನಾ ಘಟಕಗಳ 5 ಆಕ್ಸಿಜನ್ ಸಂಗ್ರಹಣ ಘಟಕಗಳಿವೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಎಲ್. ಜನಾರ್ಧನ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್. ಬಸರೆಡ್ಡಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications