ಬಿಜೆಪಿ ಶಾಸಕರು ನಾಳೆ ಸಂಜೆಯೊಳಗೆ ಕಾಂಗ್ರೆಸ್‌ಗೆ ಸೇರುತ್ತಾರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬಳ್ಳಾರಿ, ಸೆ.27 : ಮುಹೂರ್ತ ಫಿಕ್ಸ್ ಮಾಡಿಕೊಳ್ಳಿ, ಇಂದು ಅಥವಾ ನಾಳೆ ಸಂಜೆಯೊಳಗೆ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆ ಅಂಗವಾಗಿ ಬಳ್ಳಾರಿಯಲ್ಲಿ ಸಮಾವೇಶ ಆಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮುನಿಸಿಪಲ್ ಮೈದಾನವನ್ನು ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.
ಕಾಂಗ್ರೆಸ್‌ನ ಮೂರ್ನಾಲ್ಕು ಶಾಸಕರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲಿದ್ದಾರೆ ಎಂಬ ಶಾಸಕ ಸೋಮಶೇಖರ ರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಮುಹೂರ್ತ ಫಿಕ್ಸ್ ಆಗಿದೆ. ಬಿಜೆಪಿಯ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದ್ದಾರೆ.

ಸೆ.30ರಿಂದ ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ ಎಂಟ್ರಿಯಾಗಲಿದೆ. ಯಾತ್ರೆಯಲ್ಲಿ ನಾವು ಬಳ್ಳಾರಿಯಲ್ಲಿ ಮಾತ್ರ ಸಮಾವೇಶ ಹಮ್ಮಿಕೊಂಡಿದ್ದೇವೆ. ಎರಡು ದಿನ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಎಲ್ಲ ನಾಯಕರು ಪಕ್ಷಾತೀತವಾಗಿ ಬಂದು ಸಮಾವೇಶದಲ್ಲಿ ಭಾಗಿಯಾಗಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
"ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶ ನಡೆಸಬೇಕೆಂಬ ಆಲೋಚನೆ ಇತ್ತು, ಆದರೆ ಕ್ರೀಡಾಂಗಣದ ಕಾಮಗಾರಿ ಕೆಲಸ ಇರುವುದರಿಂದ ಮುನಿಸಿಪಲ್ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಮುನಿಸಿಪಲ್ ಮೈದಾನ ಐತಿಹಾಸಿಕ ಮೈದಾನವಾಗಿದ್ದು ಈ ಹಿಂದೆ ಇಲ್ಲಿ ಇಂದಿರಾ ಗಾಂಧಿ ಅವರು, ಸೋನಿಯಾ ಗಾಂಧಿ ಅವರು ಸಮಾವೇಶ ನಡೆಸಿದ್ದಾರೆ. ಹೀಗಾಗಿ ಈ ಮೈದಾನ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮುನಿಸಿಪಲ್ ಮೈದಾನದಲ್ಲಿ ಕಡಿಮೆ ಜನ ಸೇರಲು ಅವಕಾಶ ಇದ್ದರೂ ಕೂಡ ಯಾತ್ರೆಯಲ್ಲಿ ಒಟ್ಟಾರೆಯಾಗಿ ಅಂದಾಜು ಐದು ಲಕ್ಷ ಜನ ಸೇರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಎಐಸಿಸಿ ಚುನಾವಣೆ ನಡೆದರೆ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಮತದಾನ ಮಾಡಲಿದ್ದಾರೆ. ಅ.17ರಂದು ಮತದಾನ ಮಾಡಬೇಕಾಗುತ್ತದೆ. ಇದರಿಂದ ಯಾತ್ರೆಯಲ್ಲಿ ಒಂದು ದಿನ ಹಿಂದೆ ಮುಂದೆ ಆಗಬಹುದು. ಸಮಾವೇಶದಲ್ಲಿ ಎಷ್ಟು ಜನರು ಭಾಗಿ ಆಗುತ್ತಾರೆಂದು ನಿಮ್ಮ ಕ್ಯಾಮರಾ, ನಿಮ್ಮ ಕಣ್ಣು ಸಮಾವೇಶಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೇವಾಲಾ, ಸಂಸದ ಡಾ.ಸಯ್ಯದ್ ನಾಸಿರ್ ಹುಸೇನ್, ಡಾ.ಕೆ.ಎಲ್.ಹನುಮಂತಯ್ಯ, ಶಾಸಕ ಬಿ.ನಾಗೇಂದ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಮಾಜಿ ಸಚಿವ ದಿವಾಕರ ಬಾಬು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೊಹಮ್ಮದ್ ರಫೀಕ್, ಮುರಳಿಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.












Click it and Unblock the Notifications