ವಿವಾದಾತ್ಮಕ ಹೇಳಿಕೆ: ಉಲ್ಟಾ ಹೊಡೆದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ
ಬಳ್ಳಾರಿ, ಜನವರಿ 06: ವಿವಾದಾತ್ಮಕ ಹೇಳಿಕೆ ನೀಡಿದ್ದ ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರು ಹೇಳಿಕೆ ಬಗ್ಗೆ ಉಲ್ಟಾ ಹೊಡೆದಿದ್ದಾರೆ.
'ಅವರು (ಮುಸ್ಲೀಮರು) ಹತ್ತು ಮಕ್ಕಳು ಹಡೆದರೆ, ನಾವು (ಹಿಂದೂಗಳು) ಐವತ್ತು ಮಕ್ಕಳನ್ನು ಹುಟ್ಟಿಸೋಣ' ಎಂಬ ಹೇಳಿಕೆ ಸೇರಿದಂತೆ ಮುಸ್ಲೀಮರು ಮತ್ತು ವಿಪಕ್ಷಗಳ ಬಗ್ಗೆ ಬಹುವಿವಾದಾತ್ಮಕ ಹೇಳಿಕೆಯನ್ನು ಸೋಮಶೇಖರ್ ರೆಡ್ಡಿ ನೀಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ದೂರು ನೀಡಿದ್ದರು. ದೂರು ದಾಖಲಾಗಿ ವಿವಾದ ತಾರಕ್ಕೇರಿದ ಬಳಿಕ ಘಟನೆ ಬಗ್ಗೆ ಮಾತನಾಡಿರುವ ಸೋಮಶೇಖರ ರೆಡ್ಡಿ, 'ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ(!?)' ಎಂದಿದ್ದಾರೆ.

'ಸಿಎಎ, ಎನ್‌ಆರ್‌ಸಿ ಪರ ಕಾರ್ಯಕ್ರಮದಲ್ಲಿ ಬೇರೆ ದೇಶದ ಸಮುದಾಯದ ಬಗ್ಗೆ ನಾನು ಮಾತನಾಡಿದ್ದೆ, ಅದನ್ನು ತಪ್ಪಾಗಿ ಅರ್ಥೈಸಲಾಗಿದೆ' ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ಸಮಯದಲ್ಲಿ ಮುಸ್ಲಿಂ ನಾಯಕರು ಹಾಗೂ ಶಾಸಕ ಸೋಮಶೇಖರ ರೆಡ್ಡಿ ನಡುವೆ ಸಚಿವ ಶ್ರೀರಾಮುಲು ಸಂಧಾನ ಮಾಡುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.
ಕೆಲವು ದಿನಗಳ ಹಿಂದೆ ಬಹಿರಂಗ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸೋಮಶೇಖರ ರೆಡ್ಡಿ, ಸಿಎಎ ವಿರುದ್ಧ ಪ್ರತಿಭಟನೆ ಮಾಡಿದವರನ್ನು ಶೂಟ್ ಮಾಡಿ ಕೊಂದರೆ ಜನಸಂಖ್ಯೆ ಆದರೂ ಕಡಿಮೆ ಆಗುತ್ತದೆ ಎಂದಿದ್ದರು. ಜೊತೆಗೆ 'ಅವರು (ಮುಸ್ಲೀಮರು) ಹತ್ತು ಮಕ್ಕಳು ಹಡೆದರೆ, ನಾವು (ಹಿಂದೂಗಳು) ಐವತ್ತು ಮಕ್ಕಳನ್ನು ಹುಟ್ಟಿಸೋಣ' ಎಂದು ಸಹ ಹೇಳಿದ್ದರು.
ಇದೊಂದೆ ಅಲ್ಲದೆ ಹಲವು ವಿವಾದಾತ್ಮಕ ಹೇಳಿಕೆ ನೀಡಿದ್ದ ಅವರು, 'ನೀವು (ಮುಸ್ಲಿಂ) ಇರುವುದು 17% ಹಿಂದೂಗಳು 80% ಇದ್ದೇವೆ, ನಾವು ತಿರುಗಿ ಬಿದ್ದರೆ ನಿಮ್ಮ ಕತೆ ಏನಾಗಬಹುದು ಊಹಿಸಿ' ಎಂದು ಸಮುದಾಯಕ್ಕೆ ಎಚ್ಚರಿಕೆ ನೀಡುವ ದನಿಯಲ್ಲಿ ಮಾತನಾಡಿದ್ದರು.











Click it and Unblock the Notifications