ಜೆಪಿ ನಡ್ಡಾ- ಬೊಮ್ಮಾಯಿ ಪ್ರತ್ಯೇಕ ಮಾತುಕತೆ: ಸಂಪುಟ ವಿಸ್ತರಣೆ ಚರ್ಚೆ?
ಬೆಂಗಳೂರು, ಏ.18: ಹೊಸಪೇಟೆಯಲ್ಲಿ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿಗೆ ತೆರೆ ಬಿದ್ದಿದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾರ್ಯಕಾರಿಣಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ನಿರೀಕ್ಷಿಸಿದವರಿಗೆ ಮತ್ತೆ ನಿರಾಶೆಯಾಗಿದೆ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆಯಲ್ಲಿ ಸುಮಾರು ಅರ್ಧ ತಾಸು ಪ್ರತ್ಯೇಕವಾಗಿ ಚರ್ಚಿಸಿದ್ದು, ಸಂಪುಟ ವಿಸ್ತರಣೆ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಜೆ.ಪಿ. ನಡ್ಡಾ ವಾಸ್ತವ್ಯ ಹೂಡಿದ್ದ ರೆಸಾರ್ಟ್‌ನಲ್ಲಿ ಸಿಎಂ ಬೊಮ್ಮಾಯಿ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಸಂಪುಟ ವಿಸ್ತರಣೆ ಸಂಬಂಧ ಯಾರಿಗೆ ಅವಕಾಶ ನೀಡಬಹುದು, ಯಾರನ್ನು ಕೈಬಿಡಬಹುದು ಎಂಬುದರ ಬಗ್ಗೆ ಪಟ್ಟಿ ಸಿದ್ಧಪಡಿಸಿ ಮತ್ತೊಮ್ಮೆ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಷ ವಿರೋಧಿ ಚಟುವಟಿಕೆ ಸಹಿಸುವುದಿಲ್ಲ:
ಈ ಮಧ್ಯೆ ಪಕ್ಷ ವಿರೋಧ ಚಟುವಟಿಕೆ ನಡೆಸುವುವರನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನೂ ನಡ್ಡಾ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆಗಳನ್ನು ನೀಡುವವರ ಪಟ್ಟಿ ಕೊಡಿ ಅಂತವರನ್ನು ಮಟ್ಟ ಹಾಕಲಾಗುವುದು ಎಂಬ ಮಾತನ್ನೂ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆಲಸ ಮಾಡದವರಿಗೆ ಗೇಟ್‌ಪಾಸ್:
ಕಾರ್ಯಕಾರಣಿ ಬಹಿರಂಗ ಸಮಾವೇಶ ನಂತರ ಸಭೆಯಲ್ಲಿಯೇ ಜೆಪಿ ನಡ್ಡಾ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದರು. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಸಹಿತ ಹಲವರು ಪಾಲ್ಗೊಂಡಿದ್ದರು.
ಇದು ಕರ್ನಾಟಕಕ್ಕೆ ಚುನಾವಣಾ ವರ್ಷ. ಎಲ್ಲ ಸಚಿವರೂ ಸಹ ಕಾರ್ಯಶೀಲರಾಗಿರಬೇಕು, ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಸೂಕ್ತ ವಾತಾವರಣ ನಿರ್ಮಿಸಬೇಕು. ಒಂದು ವೇಳೆ ಕಾರ್ಯದಕ್ಷತೆ ಇಲ್ಲದ ಸಚಿವರಿಗೆ ಗೇಟ್‌ಪಾಸ್ ನೀಡಿ ಎಂಬ ಎಚ್ಚರಿಕೆಯನ್ನೂ ಸಹ ಜೆ.ಪಿ. ನಡ್ಡಾ ಸಭೆಯಲ್ಲಿ ನೀಡಿದ್ದಾರೆ.

ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆ ವಿಚಾವೂ ಸಹ ಚರ್ಚೆಗೆ ಬಂದಿದ್ದು, ಈಶ್ವರಪ್ಪ ವಿಚಾರವಾಗಿ ರಾಜ್ಯದಲ್ಲಿ ಕಾಂಗ್ರೆಸ್ ನಿರಂತರ ಪ್ರತಿಭಟನೆ ನಡೆಸುತ್ತಿದೆ. ಸಚಿವರುಗಳು ಪ್ರತಿಪಕ್ಷಗಳ ಕೈಗೆ ಅಸ್ತ್ರ ನೀಡುವಂತಹ ಕೆಲಸವನ್ನು ಮಾಡಬಾರದು. ಇದು ಮುಂದುವರಿದರೆ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಸಲಾಗುವುದು ಎಂಬ ಸಂದೇಶವನ್ನೂ ಸಹ ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications