ಸರ್ಕಾರಿ ವೈದ್ಯರ ಮುಷ್ಕರ: ಗಣಿ ನಾಡು ಬಳ್ಳಾರಿಯಲ್ಲಿ ರೋಗಿಗಳ ಪರದಾಟ
ಏಳನೇ ವೇತನ ಆಯೋಗದ ಜಾರಿಗೆ ಒತ್ತಾಯಿಸಿ ಬಳ್ಳಾರಿಯಲ್ಲಿ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿದ್ದು, ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡಿದ್ದಾರೆ.
ಬಳ್ಳಾರಿ, ಮಾರ್ಚ್, 01: ಹಳೇ ಪಿಂಚಣಿ ಯೋಜನೆ ಹಾಗೂ ಏಳನೇ ವೇತನ ಆಯೋಗದ ಜಾರಿಗೆ ಒತ್ತಾಯಿಸಿ ರಾಜ್ಯಾದ್ಯಂತ ಸರ್ಕಾರಿ ನೌಕರರು ಇಂದು ಪ್ರತಿಭಟನೆ ನಡೆಸಿದ್ದು, ಈ ಮುಷ್ಕರದ ಬಿಸಿ ಗಣಿ ನಾಡು ಬಳ್ಳಾರಿಯ ಸಾರ್ವಜನಿಕರನ್ನು ಕೂಡ ತಟ್ಟಿದೆ.
ಬಳ್ಳಾರಿಯ ಸುಮಾರು 6 ಸಾವಿರ ಸರ್ಕಾರಿ ನೌಕರರು ಕೆಲಸಕ್ಕೆ ಗೈರಾಗಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಅದರಲ್ಲಿಯೂ ಆರೋಗ್ಯ ಕ್ಷೇತ್ರಕ್ಕೆ ತೀವ್ರ ಬಿಸಿ ತಟ್ಟಿದೆ. ಸರ್ಕಾರಿ ನೌಕರರ ಮುಷ್ಕರದಿಂದ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿ ರೋಗಿಗಳು ಪರದಾಡಿದ ದೃಶ್ಯ ಕಂಡುಬಂದಿದೆ. ಬಳ್ಳಾರಿ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಸರದಿ ಸಾಲಿನಲ್ಲಿ ಕಾದು ಕುಳಿತ ರೋಗಿಗಳ ಪರದಾಟದ ದೃಶ್ಯ ಕಂಡುಬಂದಿತು.

ಪರದಾಡಿದ ರೋಗಿಗಳು
ಆಸ್ಪತ್ರೆ ಮುಂಭಾಗ ಬಾಣಂತಿಯರು, ವೃದ್ಧರು ಸೇರಿ ನೂರಾರು ರೋಗಿಗಳು ವೈದ್ಯರಿಲ್ಲದೆ ಪರದಾಡಿದ್ದಾರೆ.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೇವಲ ತುರ್ತು ಚಿಕಿತ್ಸೆ ಮಾತ್ರ ಕೊಡುತ್ತಿದ್ದು, ಹೋರರೋಗಿ ವಿಭಾಗದ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಹಾಗೆಯೇ ಮತ್ತೊಂದೆಡೆ ಸರ್ಕಾರಿ ನೌಕರರ ಮುಷ್ಕರದಿಂದ ಬಳ್ಳಾರಿ ಸೇರಿದಂತೆ ವಿಜಯನಗರ, ರಾಯಚೂರು ಜಿಲ್ಲೆಗಳಲ್ಲಿ ರೋಗಿಗಳು ಪರದಾಡಿದ್ದಾರೆ.
ಕರ್ತವ್ಯ ಪ್ರಜ್ಞೆ ಮೆರೆದ ಸಿಬ್ಬಂದಿ
ಏಳನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಇಂದು ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿದ್ದಾರೆ. ಇದರ ಮಧ್ಯೆಯೇ ಧಾರವಾಡ ಜಿಲ್ಲಾಸ್ಪತ್ರೆ ಸಿಬ್ಬಂದಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ. ಮುಷ್ಕರಕ್ಕೂ ಬೆಂಬಲ ಸೂಚಿಸಲು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ರೋಗಿಗಳಿಗೆ ತೊಂದರೆಯಾಗದಂತೆ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಆಸ್ಪತ್ರೆಯ ಓಪಿಡಿ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ತುರ್ತು ಚಿಕಿತ್ಸಾ ವಿಭಾಗ, ಐಸಿಯು, ಡಯಾಲಿಸಿಸ್, ತುರ್ತು ಚಿಕಿತ್ಸಾ ಘಟಕ, ಹೆರಿಗೆ ವಾರ್ಡ್ ಸೇರಿದಂತೆ ಅನೇಕ ವಾರ್ಡ್‌ಗಳಲ್ಲಿ ಸರ್ಕಾರಿ ನೌಕರರು ಕೈಗೆ ಕಪ್ಪು ಪಟ್ಟಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.












Click it and Unblock the Notifications