ಬಳ್ಳಾರಿ ತಾಲೂಕಿನ ಕುಂಟನಾಳದಲ್ಲಿ ಕಲುಷಿತ ನೀರು ಸೇವಿಸಿ 5 ಕುಟುಂಬಗಳ 18 ಜನ ಅಸ್ವಸ್ಥ
ಬಳ್ಳಾರಿ, ಏಪ್ರಿಲ್, 03: ಕಲುಷಿತ ನೀರು ಸೇವಿಸಿ 18 ಜನ ಅಸ್ವಸ್ಥಗೊಂಡಿರುವ ಘಟನೆ ಬಳ್ಳಾರಿ ತಾಲೂಕಿನ ಕುಂಟನಾಳ ಗ್ರಾಮದಲ್ಲಿ ನಡೆದಿದೆ.
ಕಲುಷಿತ ನೀರು ಸೇವಿಸಿದ ಪರಿಣಾಮ ವಾಂತಿ ಮತ್ತು ಬೇಧಿಯಿಂದ ಅಸ್ವಸ್ಥರಾಗಿದ್ದವರಿಗೆ ಕುಂಟನಾಳ ಗ್ರಾಮದ ವಾಲ್ಮೀಕಿ ಭವನದಲ್ಲಿ ತಾತ್ಕಾಲಿಕ ಆರೋಗ್ಯ ಶಿಬಿರ ನಿರ್ಮಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ತೆರಳಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಎಚ್.ಎಲ್.ಜನಾರ್ಧನ, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಕುಮಾರಿ ಅವರು ಗ್ರಾಮದ ಹೊರ ವಲಯದಲ್ಲಿ ಹರಿಯುತ್ತಿರುವ ವೇದಾವತಿ ನದಿ ನೀರನ್ನು ಪರಿಶೀಲನೆ ನಡೆಸಿದ್ದಾರೆ.
ಇನ್ನು ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮನೆಗಳಿಗೆ ನೀರು ಪೂರೈಸುವ ಪೈಪ್‌ಲೈನ್ ಕಾಮಗಾರಿ ಕೆಲಸ ನಡೆಯುತ್ತಿದೆ. ಗ್ರಾಮದ ಕೆಲ ಭಾಗದಲ್ಲಿ ಪೈಪ್‌ಲೈನ್ ಒಡೆದು ಚರಂಡಿ ನೀರು ಕುಡಿಯುವ ನೀರಿಗೆ ಸೇರ್ಪಡೆ ಆಗುತ್ತಿದ್ದು, ಇದನ್ನು ಸೇವಿಸಿದ ಐದು ಕುಟುಂಬಗಳ 18 ಜನರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ.

ಗ್ರಾ.ಪಂ.ಸಿಬ್ಬಂದಿಯ ನಿರ್ಲಕ್ಷ್ಯ
ಈ ಘಟನೆಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಗ್ರಾಮದಲ್ಲಿದ್ದ ಏಕೈಕ ಶುದ್ಧ ಕುಡಿಯುವ ನೀರಿನ ಘಟಕ ಕೈಕೊಟ್ಟಿದ್ದು, ಗ್ರಾಮಸ್ಥರಿಗೆ ವೇದಾವತಿ ನದಿಯಿಂದ ನೀರು ಪೂರೈಸಲಾಗುತ್ತಿದೆ. ಇದರೊಂದಿಗೆ ಒಡೆದ ಪೈಪ್‌ಲೈನ್ ಮೂಲಕ ಒಳಚರಂಡಿ ನೀರು ಕಲುಷಿತಗೊಂಡು ನೀರು ಸರಬರಾಜು ಆಗಿದೆ. ಕುಂಟನಾಳ ಗ್ರಾಮಸ್ಥರು ಇದೇ ನೀರು ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
18 ಜನರಿಗೆ ಮುಂದುವರೆದ ಚಿಕಿತ್ಸೆ
ಈ ಗ್ರಾಮಸ್ಥರು ಹೆಚ್ಚು ರೈತಾಪಿ ವರ್ಗದವರಾಗಿದ್ದು, ಇವರು ಜಮೀನುಗಳ ಹತ್ತಿರದ ಕಲುಷಿತ ನದಿ ನೀರನ್ನು ಕುಡಿದಿದ್ದಾರೆ. ಆಗ ವಾಂತಿ ಮತ್ತು ಬೇಧಿಯಿಂದ ಅಸ್ವಸ್ಥರಾಗಿದ್ದಾರೆ. ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ 18 ಜನರು ಇದೀಗ ಚಿಕಿತ್ಸೆ ಪಡೆದಿದ್ದು, ಇದರಲ್ಲಿ 10 ಜನ ಚೇತರಿಸಿಕೊಂಡಿದ್ದಾರೆ. ಉಳಿದ 8 ಜನರು ತಾತ್ಕಾಲಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆ ಸರ್ವೇ ಕೈಗೊಂಡಿದ್ದು, ತಾತ್ಕಾಲಿಕ ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರೂಪನಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರೀಕ್ಷಣಾಧಿಕಾರಿ ವೀರರೆಡ್ಡಿ ತಿಳಿಸಿದರು. ಅಲ್ಲದೆ ವಾಂತಿ-ಬೇಧಿ ಕಾಣಿಸಿಕೊಂಡ ಹಿನ್ನೆಲೆ ವೈದ್ಯರ ತಂಡವೊಂದು ಕುಂಟನಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.
ತಾಲೂಕು ವೈದ್ಯಾಧಿಕಾರಿಗಳ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ವಾಂತಿ-ಬೇಧಿಗೆ ಗುರಿಯಾದವರನ್ನು ಪರೀಕ್ಷಿಸಿದ್ದಾರೆ. ಅಲ್ಲದೆ ಗ್ರಾಮಕ್ಕೆ ಪೂರೈಕೆ ಮಾಡುತ್ತಿರುವ ನೀರಿನ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ನಂತರ ಶುಚಿತ್ವಕ್ಕಾಗಿ ಜನರಿಗೆ ಜಾಗೃತಿ ಮೂಡಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಶುಚಿತ್ವ ಕಾಪಾಡಿಕೊಳ್ಳುವಂತೆ ಸಲಹೆ
ವೈದ್ಯರ ತಂಡವು ಒಟ್ಟು 26 ಆಶಾ ಕಾರ್ಯಕರ್ತೆಯರ ಜೊತೆ ಸೇರಿಕೊಂಡು ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಸರ್ವೇ ಮಾಡುತ್ತಿದೆ. ಈಗಾಗಲೇ ಕಲುಷಿತ ನೀರು ಸೇವಿಸಿದ ಐದು ಕುಟುಂಬಗಳ 18 ಜನರಿಗೆ ಚಿಕಿತ್ಸೆ ನೀಡಿ, ಶುಚಿತ್ವ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಕಲುಷಿತ ನೀರು ಸೇವಿಸಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಗುಣವಾಗಿರುವವರಿಗೆ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ವಿಶೇಷ ಕಾಳಜಿ ವಹಿಸಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅಲ್ಲದೇ ತುರ್ತು ಸಂದರ್ಭಕ್ಕಾಗಿ ಒಂದು ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ.












Click it and Unblock the Notifications