Bagepalli Elections: ಜಿ. ವಿ. ಶ್ರೀರಾಮರೆಡ್ಡಿ ಇಲ್ಲದೇ ಬಾಗೇಪಲ್ಲಿಯಲ್ಲಿ ಮೊದಲ ಚುನಾವಣೆ
ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಗುಡ್ಡಗಾಡು ಮತ್ತು ಬಯಲು ಪ್ರದೇಶಗಳಿಂದ ಕೂಡಿದ ಪ್ರದೇಶಗಳನ್ನು ಒಳಗೊಂಡಿರುವ ವಿಧಾನಸಭಾ ಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ. ಜಿಲ್ಲೆಯಲ್ಲಿಯ ಹಿಂದುಳಿದ ತಾಲೂಕುಗಳು ಎನಿಸಿದ ಬಾಗೇಪಲ್ಲಿ, ಗುಡಿಬಂಡೆ, ಚೇಳೂರುಗಳನ್ನು ಸೇರಿಸಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವನ್ನು ರಚನೆ ಮಾಡಲಾಗಿದೆ. ಇಲ್ಲಿನ ಕೂಲಿ ಕಾರ್ಮಿಕರನ್ನು ಸಂಘಟನೆ ಮಾಡಿ ಸಿಪಿಎಂ ಪಕ್ಷ ದೊಡ್ಡ ಹೋರಾಟ ಮಾಡಿತ್ತು. ಮೂರು ಬಾರಿ ಪಕ್ಷದ ಅಭ್ಯರ್ಥಿಗಳು ಇಲ್ಲಿಂದ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದಾರೆ.
ಬಾಗೇಪಲ್ಲಿ ಕ್ಷೇತ್ರದಲ್ಲಿ ಅತಿ ಹೆಚ್ಚು ತೆಲಗು ಮಾತನಾಡುವ ಜನರು ಇದ್ದಾರೆ. ಅಭಿವೃದ್ಧಿಯಿಂದ ಕ್ಷೇತ್ರ ವಂಚಿತವಾಗಿದೆ. ನೀರಾವರಿ ಸೌಲಭ್ಯ ಇಲ್ಲಿನ ಬಹುದೊಡ್ಡ ಸಮಸ್ಯೆಯಾಗಿದೆ. ಇಲ್ಲಿಂದ ಚುನಾಯಿತರಾದವರು ಬೆಂಗಳೂರಿಗೆ ಹೋಗಿ ನೆಲೆಸುತ್ತಾರೆ ಇಲ್ಲಿನ ಜನರನ್ನು ನಿರ್ಲಕ್ಷ್ಯ ಮಾಡುತ್ತಾರೆ ಎಂಬುದು ಜನರ ಆರೋಪವಾಗಿದೆ. ಇಲ್ಲಿ ಬಿಜೆಪಿಯ ಪ್ರಭಾವೇ ಇಲ್ಲವಾಗಿದೆ. 13 ಚುನಾವಣೆಗಳಲ್ಲಿ ಕಾಂಗ್ರೆಸ್ 8 ಬಾರಿ ಸಿಪಿಎಂ 3 ಬಾರಿ ಗೆಲುವು ಕಂಡಿದೆ. ಎರಡು ಬಾರಿ ಪಕ್ಷೇತರರು ಗೆದ್ದು ಶಾಸಕರಾಗಿದ್ದಾರೆ.

ಕ್ಷೇತ್ರದ ಜನರು ದಿ. ಜಿ. ವಿ. ಶ್ರೀರಾಮರೆಡ್ಡಿಯವರನ್ನು ಸದಾ ನೆನೆಪಿಸಿಕೊಳ್ಳುತ್ತಾರೆ. ಇಲ್ಲಿ ನೂರಾರು ಕಾರ್ಮಿಕ ಹೋರಾಟಗಳನ್ನು ಸಂಘಟಿಸಿದ ಅವರು ಎರಡು ಬಾರಿ ಶಾಸಕರಾಗಿ ಸಹ ಆಯ್ಕೆಯಾಗಿದ್ದಾರೆ. 8 ಚುನಾವಣೆಯಲ್ಲಿ ಸ್ಪರ್ಧಿಸಿದ ಅವರು 6 ಬಾರಿ ಸೋತರೂ ಕ್ಷೇತ್ರದ ಜನರ ಜೊತೆಯೇ ಇದ್ದರು. ಅವರು ಮಾಡಿದ ಕೆಲಸಗಳು, ಹೋರಾಟಗಳನ್ನು ಜನರು ನೆನಪಿಸಿಕೊಳ್ಳುತ್ತಾರೆ. ಬಾಗೇಪಲ್ಲಿಯ ಚುನಾವಣೆ ಎಂದರೆ ಅದು ಕಾಂಗ್ರೆಸ್ ಮತ್ತು ಸಿಪಿಎಂ ನಡುವಿನ ಹೋರಾಟ. ಇಲ್ಲಿ ಬಿಜೆಪಿ, ಜೆಡಿಎಸ್ ಸೇರಿದಂತೆ ಇತರ ಪಕ್ಷಗಳು ಪ್ರಭಾವ ಹೊಂದಿಲ್ಲ.
ಬಾಗೇಪಲ್ಲಿ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್‌ನ ಎಸ್. ಎನ್. ಸುಬ್ಬಾರೆಡ್ಡಿ. 2023ರ ಚುನಾವಣೆಗೆ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಕ್ಷೇತ್ರಕ್ಕೆ ಎಸ್. ಎನ್. ಸುಬ್ಬಾರೆಡ್ಡಿ ಅವರೇ ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿದೆ. ಜೆಡಿಎಸ್ ನಾಗರಾಜರೆಡ್ಡಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಮಾಜಿ ಶಾಸಕ ಎನ್. ಸಂಪಂಗಿ, ಜಿ. ವಿ ಶ್ರೀರಾಮರೆಡ್ಡಿ, ಬಹುಭಾಷಾ ನಟ ಸಾಯಿ ಕುಮಾರ್ ಮುಂತಾದವರು ಬಾಗೇಪಲ್ಲಿಯ ಚುನಾವಣಾ ಕಣದಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಬಿಜೆಪಿ ಒಮ್ಮೆಯೂ ಇಲ್ಲಿ ಗೆದ್ದಿಲ್ಲ. ಆದರೆ ಚುನಾವಣೆ ಬಂದಾಗ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಇರುತ್ತದೆ. ಈ ಬಾರಿಯ ಚುನಾವಣೆಯಲ್ಲಿಯೂ ಸಹ ಟಿಕೆಟ್ ಪೈಪೋಟಿ ಇದೆ.
ರಾಜಕೀಯ ಇತಿಹಾಸ; 1962ರಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ರಚನೆಗೊಂಡಿತು. 1978ರ ತನಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು, ನಂತರ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಮೊದಲ ಚುನಾವಣೆಯಲ್ಲಿ ಗೆದ್ದವರು ಕಾಂಗ್ರೆಸ್‌ನ ಬಿ.ಸುಬ್ಬರಾಯಪ್ಪ. ಸ್ವತಂತ್ರ ಅಭ್ಯರ್ಥಿಯಾಗಿದ್ದ ಕೆ. ಎಂ. ಮುನಿಯಪ್ಪ ವಿರುದ್ಧ ಕೇವಲ 399 ಮತಗಳ ಅಂತರದಿಂದ ಗೆದ್ದಿದ್ದರು. 1967ರಲ್ಲಿ ಕೆ. ಎಂ. ಮುನಿಯಪ್ಪ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆದ್ದರು. 1972ರಲ್ಲಿ ರೇಣುಕಾ ರಾಜೇಂದ್ರ ಕಾಂಗ್ರೆಸ್ ಅಭ್ಯರ್ಥಿಯಾದರು. ಮತ್ತೆ ಪಕ್ಷೇತರನಾಗಿ ಕಣಕ್ಕಿಳಿದ ಕೆ. ಎಂ. ಮುನಿಯಪ್ಪ ವಿರುದ್ಧ 12,571 ಮತಗಳ ಅಂತರದಲ್ಲಿ ಗೆದ್ದರು.

1978ರ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾದಾಗ ಇಂದಿರಾ ಕಾಂಗ್ರೆಸ್‌ನ ಎಸ್. ಮುನಿರಾಜು ಕಾಂಗ್ರೆಸ್ ಅಭ್ಯರ್ಥಿ ವಿ. ಕೃಷ್ಣರಾವ್ ವಿರುದ್ಧ ಗೆದ್ದರು. ಬಾಗೇಪಲ್ಲಿಯಲ್ಲಿ ಸಿಪಿಎಂ ಪಕ್ಷ 1983ರಲ್ಲಿ ಖಾತೆ ತೆರೆಯಿತು. ಎ. ವಿ. ಅಪ್ಪಸ್ವಾಮಿರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ ಎಸ್. ಮುನಿರಾಜು ಸೋಲಿಸಿದರು. ಕ್ಷೇತ್ರದ ಕಾಂಗ್ರೆಸ್‌ಯೇತರ ಪಕ್ಷದ ಮೊದಲ ಶಾಸಕ ಎನಿಸಿಕೊಂಡರು. 1985ರಲ್ಲಿ ಜಿ. ವಿ. ಶ್ರೀರಾಮರೆಡ್ಡಿ ಸಿಪಿಎಂನಿಂದ ಕಣಕ್ಕಿಳಿದರು. ಕಾಂಗ್ರೆಸ್‌ನ ಬಿ. ನಾರಾಯಣಸ್ವಾಮಿ 2010 ಮತಗಳ ಅಂತದಲ್ಲಿ ಗೆಲುವು ಸಾಧಿಸಿದರು. 1994ರಲ್ಲಿ ಮೂರನೇ ಚುನಾವಣೆಯಲ್ಲಿ ಜಿ. ವಿ. ಶ್ರೀರಾಮರೆಡ್ಡಿ ಗೆಲುವು ಕಂಡರು, ಕಾಂಗ್ರೆಸ್‌ನ ಪಿ. ಎನ್. ಪದ್ಮನಾಭರಾವ್ ಸೋಲಿಸಿದರು. 1999ರಲ್ಲಿ ಬಲಿಜ ಸಮುದಾಯದ ಎನ್. ಸಂಪಂಗಿ ಬಾಗೇಪಲ್ಲಿಗೆ ಬಂದರು. ಜಿ. ವಿ. ಶ್ರೀರಾಮರೆಡ್ಡಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. 3298 ಮತಗಳ ಅಂತರದಿಂದ ಗೆದ್ದು, ಶಾಸಕರಾದರು.
2004ರಲ್ಲಿ ಎನ್. ಸಂಪಂಗಿ ಕಾಂಗ್ರೆಸ್ ಅಭ್ಯರ್ಥಿಯಾದರು. ಜಿ. ವಿ. ಶ್ರೀರಾಮರೆಡ್ಡಿ 11,135 ಮತಗಳ ಅಂತರದಲ್ಲಿ ಗೆದ್ದು 2ನೇ ಅವಧಿಗೆ ಶಾಸಕರಾದರು. 2008ರಲ್ಲಿ ಮತ್ತೆ ಎನ್. ಸಂಪಂಗಿ ಕಾಂಗ್ರೆಸ್‌ನಿಂದ ಕಣಕ್ಕಿಳಿದರು. ಬಿಜೆಪಿಯಿಂದ ಚಿತ್ರನಟ ಸಾಯಿ ಕುಮಾರ್, ಜೆಡಿಎಸ್‌ನಿಂದ ನಾಗರಾಜರೆಡ್ಡಿ ಅಭ್ಯರ್ಥಿಯಾದರು. ಮತಗಳು ಹಂಚಿ ಹೋಯಿತು. ಎನ್. ಸಂಪಂಗಿ 938 ಮತಗಳ ಅಂತರದಿಂದ ಗೆದ್ದರು. ಬಿಜೆಪಿಯ ಸಾಯಿ ಕುಮಾರ್ 26,070 ಮತಗಳನ್ನು, ಜಿ. ವಿ. ಶ್ರೀರಾಮರೆಡ್ಡಿ 31,306 ಮತಗಳನ್ನು ಪಡೆದರು. 2013ರಲ್ಲಿ ಎಸ್. ಎನ್. ಸುಬ್ಬಾರೆಡ್ಡಿ ಸ್ವತಂತ್ರ ಅಭ್ಯರ್ಥಿಯಾದರು. 30,755 ಮತಗಳ ಅಂತರದಿಂದ ಗೆಲವು ಕಂಡರು. ಕಾಂಗ್ರೆಸ್‌ನ ಎನ್. ಸಂಪಂಗಿ ಕೇವಲ 15,491 ಮತ ಪಡೆದರು. ಜಿ. ವಿ. ಶ್ರೀರಾಮರೆಡ್ಡಿ 35,472 ಮತಗಳನ್ನು ಪಡೆದರು.
2018ರಲ್ಲಿ ಹಾಲಿ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಕಾಂಗ್ರೆಸ್ ಸೇರಿ ಪಕ್ಷದ ಅಭ್ಯರ್ಥಿಯಾದರು. ಟಿಕೆಟ್ ಕೈ ತಪ್ಪಿದ ಸಂಪಂಗಿ ಕಣ್ಣೀರು ಹಾಕಿದರು. ಎಸ್. ಎನ್. ಸುಬ್ಬಾರೆಡ್ಡಿ 65,710 ಮತಗಳನ್ನು ಪಡೆದು ಗೆದ್ದರು. ಬಾಗೇಪಲ್ಲಿ ಕ್ಷೇತ್ರದಲ್ಲಿ ಸತತವಾಗಿ ಎರಡು ಬಾರಿ ಗೆದ್ದು ದಾಖಲೆ ಮಾಡಿದರು. ಜಿ. ವಿ. ಶ್ರೀರಾಮರೆಡ್ಡಿ 51,697 ಮತಗಳನ್ನು ಪಡೆದು ಸೋತರು. ಮತ್ತೆ ಚಿತ್ರನಟ ಬಿಜೆಪಿ ಅಭ್ಯರ್ಥಿಯಾದರು, ಆದರೆ ಪಡೆದ ಮತಗಳು ಕೇವಲ 4,410. 2022ರಲ್ಲಿ ಜಿ. ವಿ. ಶ್ರೀರಾಮರೆಡ್ಡಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಈ ಬಾರಿಯ ಚುನಾವಣೆ ಜಿ. ವಿ. ಶ್ರೀರಾಮರೆಡ್ಡಿ ಇಲ್ಲದೇ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಎಸ್. ಎನ್. ಸುಬ್ಬಾರೆಡ್ಡಿ, ಜೆಡಿಎಸ್‌ನಿಂದ ಜೆಡಿಎಸ್‌ನಿಂದ ನಾಗರಾಜರೆಡ್ಡಿ ಅಭ್ಯರ್ಥಿಗಳು.
Bagepalli Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಎಸ್. ಎನ್. ಸುಬ್ಬಾರೆಡ್ಡಿ (ಕಾಂಗ್ರೆಸ್) | 65,710 | ಜಿ. ವಿ. ಶ್ರೀರಾಮ ರೆಡ್ಡಿ (ಸಿಪಿಎಂ) | 51,697 |
| 2013 | ಎಸ್. ಎನ್. ಸುಬ್ಬಾರೆಡ್ಡಿ (ಪಕ್ಷೇತರ) | 66,227 | ಜಿ. ವಿ. ಶ್ರೀರಾಮರೆಡ್ಡಿ (ಸಿಪಿಎಂ) | 35,472 |
| 2008 | ಎನ್. ಸಂಪಂಗಿ (ಕಾಂಗ್ರೆಸ್) | 32,244 | ಜಿ. ವಿ. ಶ್ರೀರಾಮರೆಡ್ಡಿ (ಸಿಪಿಎಂ) | 31,306 |
ಜಿ. ವಿ. ಶ್ರೀರಾಮರೆಡ್ಡಿ ಪಕ್ಷದ ತತ್ವಗಳಿಗೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂದು ಸಿಪಿಎಂ ಅವರನ್ನು 2020ರಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡಿತು. ಅವರು ಪ್ರಜಾ ಸಂಘರ್ಷ ಸಮಿತಿ (ಪಿಎಸ್‌ಎಸ್) ಎಂಬ ಪಕ್ಷ ಕಟ್ಟಿದ್ದರು. ಅವರ ಅನುಪಸ್ಥಿತಿಯಲ್ಲಿ ಪಕ್ಷದ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಮಿಥುನ್ ರೆಡ್ಡಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳಿವೆ.
ಬಾಗೇಪಲ್ಲಿಯಲ್ಲಿ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ, ಆದರೆ ಟಿಕೆಟ್‌ಗಾಗಿ ಪೈಪೋಟಿ ಇದೆ. ಈ ಬಾರಿ ಸಿ. ಮುನಿರಾಜು ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ. ಬಲಿಜ ಜನಾಂಗದ ಮುಖಂಡ, ಉಪ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ. ಮುನಿರಾಜು ಹಲವಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿದ್ದಾರೆ. ಹರಿಕೆರೆ ಕೃಷ್ಣಾರೆಡ್ಡಿ ಸಹ ತಮ್ಮ ಜಾತಿ ಬಳಸಿಕೊಂಡು ಟಿಕೆಟ್ ಕೇಳಿದ್ದಾರೆ. ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಕೋನಪ್ಪರೆಡ್ಡಿ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು.
ಕ್ಷೇತ್ರದ ಒಟ್ಟು ಮತದಾರರು 1,94,781. 97,085 ಪುರುಷರು. 97,655 ಮಹಿಳೆಯರು. 24 ಇತರರು. ಸುಮಾರು 60 ಸಾವಿರದಷ್ಟು ಇರುವ ರೆಡ್ಡಿ-ಒಕ್ಕಲಿಗ ಮತಗಳು ಕ್ಷೇತ್ರದಲ್ಲಿ ನಿರ್ಣಾಯಕ. ಸುಮಾರು 25 ಸಾವಿರ ಕುರುಬ, 23 ಸಾವಿರ ಬಲಿಜ, 20 ಸಾವಿರ ಮುಸ್ಲಿಂ, 30 ಸಾವಿರದಷ್ಟು ಇತರ ಸಮಯದಾಯದ ಮತಗಳಿವೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications