ಬಾದಾಮಿಯಲ್ಲಿ ಸಿದ್ದರಾಮಯ್ಯ - ಶ್ರೀರಾಮುಲು ಮುಖಾಮುಖಿ
ಬೆಂಗಳೂರು, ಏಪ್ರಿಲ್ 22: ಸಿದ್ದರಾಮಯ್ಯ ಮೈಸೂರಿನ ಚಾಮುಂಡೇಶ್ವರಿ ಜೊತೆಗೆ ಬಾದಾಮಿಯಿಂದ ಸ್ಪರ್ಧಿಸುವುದು ಖಚಿತವಾಗಿದೆ. ಇಂದು ಕಾಂಗ್ರೆಸ್ ನ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು ಬಾದಾಮಿಯಲ್ಲಿ ಮುಖ್ಯಮಂತ್ರಿಗಳಿಗೆ ಟಿಕೆಟ್ ನೀಡಲಾಗಿದೆ.
ಹಲವು ದಿನಗಳಿಂದ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿಕೆಗಳನ್ನು ನೀಡಿರಲಿಲ್ಲ. ಸ್ಪರ್ಧಿಸುತ್ತೇನೆ, ಸ್ಪರ್ಧಿಸುವುದಿಲ್ಲ ಎಂಬ ಗೊಂದಲದ ಹೇಳಿಕೆಗಳನ್ನೇ ನೀಡುತ್ತಿದ್ದರು. ಹಾಲಿ ಶಾಸಕ ಬಿಬಿ ಚಿಮ್ಮನಕಟ್ಟಿ ಭೇಟಿಯಾದಾಗಲೂ 'ನಾನೇ ಸ್ಪರ್ಧಿಸುತ್ತೇನೆ ಬಿಡಯ್ಯ' ಎಂದಿದ್ದರು. ಆದರೂ ಸ್ಪರ್ಧೆ ಬಗ್ಗೆ ಗೊಂದಲಗಳು ಮುಂದುವರಿದಿದ್ದವು.
ಆದರೆ ಇದೀಗ ಕಾಂಗ್ರೆಸ್ ಅಂತಿಮ ಪಟ್ಟಿಯಲ್ಲಿ ಮುಖ್ಯಮಂತ್ರಿ ಸ್ಪರ್ಧಿಸುವುದು ಖಚಿತವಾಗಿದೆ. ಇದೆಲ್ಲದರ ಜೊತೆಗೆ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಸಂಸದ ಬಿ ಶ್ರೀರಾಮುಲು ಸಿದ್ಧವಾಗಿದ್ದಾರೆ.

ಏ. 24ರಂದು ನಾಮಪತ್ರ
ಇದೇ ಏಪ್ರಿಲ್ 24ರಂದು, ಅಂದರೆ ಮಂಗಳವಾರ ಮುಖ್ಯಮಂತ್ರಿಗಳು ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಗಳ ನಾಮಪತ್ರ ಸಲ್ಲಿಕೆಗೆ ಸೋಮವಾರ ದಿನ ನಿಗದಿಯಾಗಿತ್ತು. ಆದರೆ ಬಿಜೆಪಿ ಪಾಲಿಗೆ ಗೌಪ್ಯತೆ ಉಳಿಸಿಕೊಳ್ಳಲು ಮಂಗಳವಾರ ಕೊನೆಯ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿತ್ತು. ಈ ಹಿನ್ನಲೆಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಕೆಗೆ ದಿನ ನಿಗದಿಯಾಗಿದೆ.
ಆದರೆ ಅಂದುಕೊಂಡಿದ್ದ ಗೌಪ್ಯತೆ ಈಗ ಉಳಿದಿಲ್ಲ. ಕಾರಣ ಬಾದಾಮಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಹೆಸರನ್ನೇ ಅಂತಿಮಗೊಳಿಸಲಾಗಿದ್ದು, ಕಾಂಗ್ರೆಸ್ ಪಟ್ಟಿಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಇಲ್ಲಿ ಈ ಹಿಂದೆ ಡಾ. ದೇವರಾಜ್ ಪಾಟೀಲ್ ಗೆ ಟಿಕೆಟ್ ನೀಡಲಾಗಿತ್ತು.

ಶ್ರೀರಾಮುಲು ಸ್ಪರ್ಧೆ
ಬಳ್ಳಾರಿ ಬಿಟ್ಟು ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ಕಣಕ್ಕಿಳಿದಿರುವ ಸಂಸದ ಬಿ. ಶ್ರೀರಾಮುಲು ಸಿದ್ದರಾಮಯ್ಯ ವಿರುದ್ಧವೂ ಸ್ಪರ್ಧಿಸಲು ಮುಂದಾಗಿದ್ದಾರೆ. ಬಹುತೇಕ ಅವರೇ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲಿದ್ದಾರೆ. ಅವರು ಕೂಡ ಮಂಗಳವಾರ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಇದರಿಂದ ಶ್ರೀರಾಮುಲು ಕೂಡ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದಂತಾಗಲಿದೆ.
ಶ್ರೀರಾಮುಲು ಬಾದಾಮಿಯಿಂದ ಸ್ಪರ್ಧಿಸಲು ಮುಂದಾಗಿರುವುದಕ್ಕೆ ಜಾತಿ ಲೆಕ್ಕಾಚಾರಗಳೇ ಕಾರಣವಾಗಿದೆ.

ಜಾತಿ ಲೆಕ್ಕಾಚಾರ
ಬಾದಾಮಿಯಲ್ಲಿ ಕುರುಬರ ಮತಗಳು ಹೆಚ್ಚಿರುವ ಕಾರಣಕ್ಕೆ ಮುಖ್ಯಮಂತ್ರಿಗಳು ಸ್ಪರ್ಧಿಸಲು ಮುಂದಾಗಿದ್ದಾರೆ. ಇಲ್ಲಿ 48,000 ಕುರುಬ ಮತದಾರರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಮತದಾರರ ಸಂಖ್ಯೆ 47,000 ದಷ್ಟಿದ್ದರೆ, ಮುಸ್ಲಿಂ ಮತಗಳ ಸಂಖ್ಯೆ 11,000. ಇವುಗಳನ್ನು ನೆಚ್ಚಿಕೊಂಡು ಸಿಎಂ ಇಲ್ಲಿ ಕಣಕ್ಕಿಳಿಯಲು ಹೊರಟಿದ್ದಾರೆ.
ಆದರೆ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕೂಲವಾಗುವ ಲೆಕ್ಕಾಚಾರಗಳೂ ಇವೆ ಎಂಬ ಕಾರಣಕ್ಕೆ ಬಾದಾಮಿಯನ್ನು ಕಮಲ ಪಕ್ಷದ ನಾಯಕರೂ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸರಿಯಾದ ದಾಳ ಉರುಳಿಸಿದರೆ ಬಾದಾಮಿಯನ್ನು ಗೆದ್ದುಕೊಳ್ಳಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.
ಇಲ್ಲಿ 55,000 ಲಿಂಗಾಯತ ಮತಗಳಿವೆ. ಜತೆಗೆ ಶ್ರೀರಾಮುಲು ಅವರ ವಾಲ್ಮೀಕಿ ಸಮುದಾಯದ 36,000 ಮತಗಳಿವೆ. ಇದಲ್ಲದೆ ನೇಕಾರರ 13,000 ಮತ್ತು ಇತರ 30,000 ಮತಗಳಿವೆ.
ಈ ಎಲ್ಲಾ ಮತಗಳನ್ನು ಸೆಳೆದರೆ ಸಿದ್ದರಾಮಯ್ಯರನ್ನು ಸೋಲಿಸಬಹುದು ಎಂಬ ಲೆಕ್ಕಾಚಾರದಲ್ಲಿ ಶ್ರೀರಾಮುಲುರನ್ನು ಕಣಕ್ಕಿಳಿಸಲು ಬಿಜೆಪಿ ಯೋಜನೆ ರೂಪಿಸಿದೆ. ವರಿಷ್ಠರು ಒಪ್ಪಿದರೆ ನಾನು ಸ್ಪರ್ಧೆಗೆ ಸಿದ್ಧ ಎಂದೂ ಅವರು ಈಗಾಗಲೇ ಹೇಳಿಕೆ ನೀಡಿದ್ದಾರೆ.

ಬಿಜೆಪಿಯ ಅಭ್ಯರ್ಥಿ ಹುಡುಕಾಟ
ಬಾದಾಮಿಯಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಬಿಜೆಪಿಯಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆ, ಸಾಧ್ಯತೆಗಳ ಲೆಕ್ಕಾಚಾರವೇ ನಡೆದಿತ್ತು. ಇಲ್ಲಿ ವಿಆರ್ ಎಲ್ ಗ್ರೂಪ್ ಮುಖ್ಯಸ್ಥ ವಿಜಯ್ ಸಂಕೇಶ್ವರ ಕಣಕ್ಕಿಳಿಸಲು ಒಂದು ಹಂತದಲ್ಲಿ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿತ್ತು.
ಇನ್ನೊಂದು ಕಡೆ ಬಿಎಸ್ ಯಡಿಯೂರಪ್ಪನವರೇ ಸ್ಪರ್ಧಿಸಿದರೆ ಹೇಗೆ ಎಂಬ ಬಗ್ಗೆಯೂ ಚರ್ಚೆಗಳು ನಡೆದಿದ್ದವು. ಇಲ್ಲಿ ಕುರುಬ ಮತಗಳ ಮೇಲೆ ಸಿದ್ದರಾಮಯ್ಯ ಕಣ್ಣಿಟ್ಟಿದ್ದರಿಂದ ಈಶ್ವರಪ್ಪನವರ ಹೆಸರೂ ಕೇಳಿ ಬಂದಿತ್ತು.
ಇನ್ನು ಸಂಸದ ಪಿಸಿ ಗದ್ದಿಗೌಡರ್, ಮಾಜಿ ಶಾಸಕ ಎಂಕೆ ಪಟ್ಟಣಶೆಟ್ಟಿ ಬಗ್ಗೆಯೂ ಬಿಜೆಪಿಗರು ಚರ್ಚೆ ನಡೆಸಿ ಅಂತಿಮವಾಗಿ ಶ್ರೀರಾಮುಲು ಹೆಸರಿಗೆ ಬಂದು ನಿಂತಂತಿದೆ.












Click it and Unblock the Notifications