ಬಾಗಲಕೋಟೆ ನೂತನ ಜಿಲ್ಲಾಧಿಕಾರಿಯಾಗಿ ಪಿ.ಸುನೀಲ್ ಕುಮಾರ್ ಅಧಿಕಾರ ಸ್ವೀಕಾರ
ಬಾಗಲಕೋಟೆ, ಮೇ 21: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಪಿ.ಸುನೀಲ್ ಕುಮಾರ್ ಅವರು ಪ್ರಭಾರದಲ್ಲಿದ್ದ ಸಿಇಒ ಟಿ.ಭೂಬಾಲನ್ ಅವರಿಂದ ಶನಿವಾರ ಅಧಿಕಾರ ಸ್ವೀಕರಿಸಿದರು.
ನೂತನ ಜಿಲ್ಲಾಧಿಕಾರಿಯಾಗಿ 2011ರ ಐಎಎಸ್ ಬ್ಯಾಚ್ ನ ಹುದ್ದೆ ಸ್ವೀಕರಿಸಿರುವ ಪಿ.ಸುನೀಲ್ ಕುಮಾರ ಅವರು ಮೂಲತಃ ಆಂಧ್ರಪ್ರದೇಶ ರಾಜ್ಯದವರಾಗಿದ್ದು, ವರಂಗಲ್ ನ ನ್ಯಾಷನಲ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ ಐಟಿ) ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಯಾದಗಿರಿ ಜಿಲ್ಲೆ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, 4 ವರ್ಷ ಬೆಂಗಳೂರಿನಲ್ಲಿ ಕಾರ್ಮಿಕ ಇಲಾಖೆ, ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸಿ, ಕೊಪ್ಪಳ ಜಿಲ್ಲಾಧಿಕಾರಿಯಾಗಿ ಬಳಿಕ ವಿಜಯಪುರ ಜಿಲ್ಲಾಧಿಕಾರಿಯಾಗಿ ಕೂಡ ಸೇವೆ ಸಲ್ಲಿಸಿ ಈಗ ಬಾಗಲಕೋಟೆಗೆ ನೂತನ ಜಿಲ್ಲಾಧಿಕಾರಿಯಾಗಿದ್ದಾರೆ.
ಸುನೀಲ್ ಕುಮಾರ್ ವಿದ್ಯಾಭ್ಯಾಸ ಬಳಿಕ 2002 ರಿಂದ 2009ವರೆಗೆ ಟಾಟಾ ಕನ್ಸಲ್ಟಂಟ್ ಸಾಫ್ಟವೇರ್ ಕಂಪನಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ 2 ವರ್ಷ ಭಾರತ ಮತ್ತು 5 ವರ್ಷ ವಿದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ. ವಿದೇಶ ಸೇವೆಯ ನಂತರ ಭಾರತಕ್ಕೆ ಮರಳಿ ಯುಪಿಎಸ್‌ಸಿ ಪರೀಕ್ಷೆ ಬರೆದು 2011ರಲ್ಲಿ ಐಎಎಸ್ ತೇರ್ಗಡೆ ಹೊಂದಿರುತ್ತಾರೆ. ನಂತರ ಹಾಸನದಲ್ಲಿ 2 ವರ್ಷ ಪ್ರೋಬೇಷನರಿ ಅವಧಿ ಮುಗಿಸಿ, ಹೊಸಪೇಟೆಯಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಜಿಲ್ಲಾಧಿಕಾರಿಗಳು ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿ ಶ್ರಮಿಸುವುದಾಗಿ ತಿಳಿಸಿದ ಅವರು, ಮೊದಲು ಪದವೀಧರ ಮತ್ತು ಶಿಕ್ಷಕರ ಮತ ಕ್ಷೇತ್ರದ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಮೂವರು ಐಎಎಸ್ ಅಧಿಕಾರಿಗಳಾಗಿದ್ದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ಭೂಬಾಲನ್, ಯುಕೆಪಿಯ ಮಹಾ ವ್ಯವಸ್ಥಾಪಕ ಲೋಖಂಡೆ, ಬಾಗಲಕೋಟೆ ಜಿಲ್ಲೆ ಅಭಿವೃದ್ಧಿಪಥದತ್ತ ಸಾಗಲಿದೆ ಎಂದರು.