'ಗೆಲ್ಲೋ ಯೋಗ್ಯತೆ ಇಲ್ಲದಿದ್ದರೆ ಯಾಕೆ ನಿಲ್ಲಬೇಕು': ಸಿದ್ದರಾಮಯ್ಯಗೆ ಹೊಸ ಸಂಕಟ
ಬಾಗಲಕೋಟೆ, ಡಿ 6: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ರಾಜಕೀಯ ಮರುಹುಟ್ಟು ನೀಡಿದ ಬಾದಾಮಿಯಲ್ಲಿ ಅವರು ತೀವ್ರ ಮುಜುಗರಕ್ಕೀಡಾಗುವ ವಿದ್ಯಮಾನ ನಡೆದಿದೆ. ಸ್ವಪಕ್ಷೀಯರಿಂದಲೇ ಸಿದ್ದರಾಮಯ್ಯ ವಿರೋಧ ಎದುರಿಸಬೇಕಾಗಿ ಬಂದಿದೆ.
ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಎಲ್ಲಿಂದ ಸ್ಪರ್ಧಿಸುತ್ತಾರೆ ಎನ್ನುವ ಪ್ರಶ್ನೆ ಎದುರಾದಾಗ, ಮತ್ತೆ ಬಾದಾಮಿ ಅಥವಾ ಚಾಮುಂಡೇಶ್ವರಿ, ವರುಣಾ, ಚಾಮರಾಜಪೇಟೆ, ಕೋಲಾರ ಕ್ಷೇತ್ರದ ಹೆಸರು ಕೇಳಿ ಬರುತ್ತಿದೆ.
ಕೆಲವು ದಿನಗಳ ಹಿಂದೆ ಬಾದಾಮಿ ಕ್ಷೇತ್ರದ ಸುಮಾರು ಐನೂರು ಜನರು ಅಲ್ಲಿಂದಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ಒತ್ತಾಯವನ್ನು ಬೆಂಗಳೂರಿನ ಸಿದ್ದರಾಮಯ್ಯನವರ ನಿವಾಸಕ್ಕೆ ಬಂದು ಮಾಡಿ ಹೋಗಿದ್ದರು.
ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ತುರುಸಿನ ಸ್ಪರ್ಧೆ ಎದುರಿಸಬೇಕಾದೀತು ಎನ್ನುವ ಸುಳಿವನ್ನು ಅರಿತಿದ್ದ ಸಿದ್ದರಾಮಯ್ಯ, ಬಾದಾಮಿಯಿಂದಲೂ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈ ಬಾರಿ ಅಲ್ಲಿನ ಪರಿಸ್ಥಿತಿ ಅಷ್ಟು ಸುಲಭವಾಗಿಲ್ಲ ಎನ್ನುವುದು ಇಂದು (ಡಿ 6) ನಡೆದ ಸಭಾ ಕಾರ್ಯಕ್ರಮದಲ್ಲಿ ರುಜುವಾತಾಗಿದೆ.

ಕಾಂಗ್ರೆಸ್ ಮುಖಂಡ ಬಿ.ಬಿ.ಚಿಮ್ಮನಕಟ್ಟಿ ಕ್ಷೇತ್ರ ತ್ಯಾಗ ಮಾಡಿದ್ದರು
ಬಾದಾಮಿಯಿಂದ ಸ್ಪರ್ಧಿಸಲು ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಮುಖಂಡ ಬಿ.ಬಿ.ಚಿಮ್ಮನಕಟ್ಟಿ ಕ್ಷೇತ್ರ ತ್ಯಾಗ ಮಾಡಿದ್ದರು. ಆ ವೇಳೆ, ಅವರಿಗೆ ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡುವ ಆಫರ್ ನೀಡಲಾಗಿತ್ತು. ಅದೂ ನಡೆಯದೇ, ಮುಂದಿನ ಚುನಾವಣೆಯಲ್ಲಿ ಮತ್ತೆ ಸಿದ್ದರಾಮಯ್ಯ ಸ್ಪರ್ಧಿಸಿದರೆ ತನ್ನ ರಾಜಕೀಯ ಭವಿಷ್ಯ ಹಾಳಾಗುತ್ತದೆ ಎಂದು, ಚಿಮ್ಮನಕಟ್ಟಿಯವರು ಕಾಂಗ್ರೆಸ್ ಪ್ರಚಾರ ಸಭೆಯಲ್ಲೇ ಸಿದ್ದರಾಮಯ್ಯನವರಿಗೆ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಕಣಕ್ಕಿಳಿದು, ಭಾರೀ ಅಂತರದಿಂದ ಸೋತರು
"ಸಿದ್ದರಾಮಯ್ಯನವರ ಕ್ಷೇತ್ರ ವರುಣಾ, ಕಳೆದ ಬಾರಿ ಅಲ್ಲಿಂದ ಅವರ ಮಗನನ್ನು ಕಣಕ್ಕಿಳಿಸಿದ್ದರು. ಅಲ್ಲಿ, ಅವರೇ ನಿಂತಿದ್ದರೆ ಚುನಾವಣೆ ಗೆಲ್ಲಬಹುದಿತ್ತು. ಅದು ಬಿಟ್ಟು ಚಾಮುಂಡೇಶ್ವರಿಯಲ್ಲಿ ಕಣಕ್ಕಿಳಿದು, ಭಾರೀ ಅಂತರದಿಂದ ಸೋತರು. ಗೆಲ್ಲುವ ಯೋಗ್ಯತೆ ಇಲ್ಲದಿದ್ದ ಮೇಲೆ ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು"ಎಂದು ಚಿಮ್ಮನಕಟ್ಟಿ, ಸಿದ್ದರಾಮಯ್ಯನವರ ವಿರುದ್ದ ಪ್ರಖರವಾದ ಮಾತಿನಿಂದ ಹರಿಹಾಯ್ದರು.

ಚುನಾವಣೆಯಲ್ಲಿ ಗೆಲ್ಲುವ ತಾಖತ್ ಇದ್ದರೆ ಮಾತ್ರ ಸ್ಪರ್ಧಿಸಬೇಕು
"ಚುನಾವಣೆಯಲ್ಲಿ ಗೆಲ್ಲುವ ತಾಖತ್ ಇದ್ದರೆ ಮಾತ್ರ ಸ್ಪರ್ಧಿಸಬೇಕು, ಅದು ಬಿಟ್ಟು ನನ್ನ ಗಂಟು ಬಿದ್ದಿದ್ದಾನೆ. ನಾವೇನು ಮಾಡಬೇಕು ಎಲ್ಲಿಗೆ ಹೋಗಬೇಕು, ಹುಲಿಯಾಗಿ ಇದ್ದವನನ್ನು ಇಲಿಯನ್ನಾಗಿ ಮಾಡಿದ್ದೀರಿ. ಸ್ವಕ್ಷೇತ್ರದಲ್ಲೇ ಸಿದ್ದರಾಮಯ್ಯನವರು ಗೆದ್ದು ಅಸೆಂಬ್ಲಿಗೆ ಆಯ್ಕೆಯಾಗಲಿ, ನನ್ನ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಈಗ ನೋಡ್ರೀ" ಎಂದು ಚಿಮ್ಮನಕಟ್ಟಿ ವಾಗ್ದಾಳಿ ನಡೆಸುತ್ತಿದ್ದಾಗ, ಸಿದ್ದರಾಮಯ್ಯ ತೀವ್ರ ಮುಜುಗರಕ್ಕೀಡಾದರು.

ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಮಾವೇಶ
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಾದಾಮಿಯಲ್ಲಿ ಆಯೋಜಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಮಾವೇಶದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಸಂವಿಧಾನ ಹಾಗೂ ಅಧಿಕಾರ ವಿಕೇಂದ್ರೀಕರಣದ ಪರವಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಗೌಡ ಪಾಟೀಲ್ ಅವರನ್ನು ಬೆಂಬಲಿಸುವಂತೆ ಕೋರಿದರು. ಆ ವೇಳೆ, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಉಮಾಶ್ರೀ, ಎಚ್.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಂಜಯ್ಯನ ಮಠ, ವಿಜಯಪುರ ಜಿಲ್ಲಾಧ್ಯಕ್ಷ ರಾಜು ಅಲಗೂರ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.












Click it and Unblock the Notifications