ಬಾಗಲಕೋಟೆ: ಮಗನಿಗಾಗಿ ಶಾಸಕರ ಮನೆ ಎದುರು ತಾಯಿ ಆತ್ಮಹತ್ಯೆ
ಬಾಗಲಕೋಟೆ, ಮಾರ್ಚ್ 22: ಮಗನಿಗೆ ಸಿಗಬೇಕಾಗಿದ್ದ ನೌಕರಿಯನ್ನು ಅಧಿಕಾರದ ಪ್ರಭಾವ ಬಳಸಿ ತಮ್ಮ ಸಂಬಂಧಿಗಳಿಗೆ ಕೊಡಿಸಿದ ಶಾಸಕರ ಮನೆ ಎದುರೇ ವಿಷ ಸೇವಿಸಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬದಾಮಿ ತಾಲ್ಲೂಕಿನ ಯರಗೊಪ್ಪ ಗ್ರಾಮದ ಶಾಂತವ್ವ ವಾಲಿಕಾರ (46) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಆಕೆ ಬದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮನೆ ಎದುರು ಪ್ರಾಣ ಬಿಟ್ಟಿದ್ದಾಳೆ.
ಶಾಂತವ್ವನ ಪತಿ ಗೋವಿಂದಪ್ಪ ಮುತ್ತಲಗೆರಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸೇವಕನಾಗಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಅಕಾಲಿಕ ಮರಣಕ್ಕೆ ತುತ್ತಾದರು. ಅನುಕಂಪದ ಆಧಾರದ ಮೇಲೆ ಆ ನೌಕರಿಯನ್ನು ಮಗನಿಗೆ ನೀಡುವಂತೆ ಶಾಂತವ್ವ ಶಾಸಕರಲ್ಲಿ ಮನವಿ ಸಲ್ಲಿಸಿದ್ದಳು. ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರು ನೌಕರಿ ಕೊಡಿಸುವುದಾಗಿ ಭರವಸೆ ಸಹ ಕೊಟ್ಟಿದ್ದರು. ಆದರೆ ಈಡೇರಿಸಲಿಲ್ಲ.

ಶಾಸಕ ಬಿ.ಬಿ.ಚಿಮ್ಮನಕಟ್ಟಿ ತಮ್ಮ ಪ್ರಭಾವ ಬಳಸಿ ತಮ್ಮ ಸಂಬಂಧಿಯೊಬ್ಬನಿಗೆ ಆ ನೌಕರಿ ಕೊಡಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ಶಾಂತವ್ವ ಶಾಸಕರ ಮನೆ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕೆ ಶಾಸಕ ಚಿಮ್ಮನಕಟ್ಟಿ ಮನೆ ಮುಂದೆ ಸ್ಥಳೀಯರು ಧರಣಿ ನಡೆಸಿದರು. ಶಾಂತವ್ವ ಸಾವಿಗೆ ಶಾಸಕರೆ ಕಾರಣ ಎಂದು ಆರೋಪಿಸಿದರು. ತನಗಾಗಿ ಜೀವ ಬಿಟ್ಟ ಅಮ್ಮನ ಶವದ ಮುಂದೆ ಅಳುತ್ತಿದ್ದ ಮಗನ ದುಖಃ ಅರಣ್ಯರೋಧನವೇ ಆಗಿತ್ತು.












Click it and Unblock the Notifications