ಶೂ ಪಾಲೀಶ್ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಕರವೇ ಅಶ್ವಿನಿ ಗೌಡ; ಕಾರಣ?
ಬಾಗಲಕೋಟೆ, ಡಿಸೆಂಬರ್ 9: ಬಾಗಲಕೋಟೆ ಮೆಡಿಕಲ್ ಕಾಲೇಜಿಗೆ ಅನುದಾನ ನೀಡಬೇಕೆಂಬ ಕರ್ನಾಟಕ ರಕ್ಷಣಾ ವೇದಿಕೆಯ ಚಳವಳಿ ಈಗ ಇನ್ನೊಂದು ಘಟ್ಟ ಪ್ರವೇಶಿಸಿದ್ದು, ಕರವೇ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಹಾಗೂ ಕಿರುತೆರೆ ನಟಿ ಅಶ್ವಿನಿ ಗೌಡ ಹೋರಾಟದ ಅಂಗಳಕ್ಕೆ ಧುಮುಕಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಡಿಸೆಂಬರ್ 11ರಂದು ಅಶ್ವಿನಿ ಗೌಡ ಅವರು ಬಾಗಲಕೋಟೆಗೆ ಆಗಮಿಸಲಿದ್ದು, ಜಿಲ್ಲಾ ಮಹಿಳಾ ಘಟಕ ಏರ್ಪಡಿಸಿರುವ "ಬೂಟ್ ಪಾಲೀಶ್ ಅಭಿಯಾನ'ದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕರವೇ ಮಹಿಳಾ ಕಾರ್ಯಕರ್ತೆಯರು ಈ ಅಭಿಯಾನದಲ್ಲಿ ಪಾಲ್ಗೊಳ್ಳಿದ್ದಾರೆ.
ಬಾಗಲಕೋಟೆ ನಗರದಾದ್ಯಂತ ರವೇ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಅಶ್ವಿನಿ ಗೌಡ ಬೂಟ್ ಪಾಲೀಶ್ ಮಾಡುವುದರೊಂದಿಗೆ ಹಣ ಇಲ್ಲ ಎಂದು ಸಬೂಬು ಹೇಳುತ್ತಿರುವ ರಾಜ್ಯ ಸರ್ಕಾರಕ್ಕೆ ನಿಧಿ ಸಂಗ್ರಹ ಮಾಡಿಕೊಡಲಿದ್ದಾರೆ.

ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ 22 ಮಂದಿ ರೋಗಿಗಳು ವೈದ್ಯರ ಅಚಾತುರ್ಯದಿಂದ ಕಣ್ಣು ಕಳೆದುಕೊಂಡ ಪ್ರಕರಣದಲ್ಲಿ ಕಣ್ಣು ಕಳೆದುಕೊಂಡವರ ಪರವಾಗಿ ನಡೆದ ಹೋರಾಟವನ್ನು ಕರವೇ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಅಶ್ವಿನಿ ಗೌಡ ಮುನ್ನಡೆಸುವ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದರು.
ಈ ಹೋರಾಟದ ಸಂದರ್ಭದಲ್ಲಿ ಸುಳ್ಳು ಪ್ರಕರಣವನ್ನೂ ಎದುರಿಸಿದ್ದ ಅಶ್ವಿನಿ ಗೌಡ ಎದೆಗುಂದದೆ ನ್ಯಾಯ ದೊರಕಿಸಿಕೊಡುವವರೆಗೆ ಹೋರಾಟ ನಡೆಸಿದ್ದರು. ಈಗ ಅಶ್ವಿನಿ ಗೌಡರವರು ಬಾಗಲಕೋಟೆ ಮೆಡಿಕಲ್ ಕಾಲೇಜು ಹೋರಾಟಕ್ಕೆ ಪಾದಾರ್ಪಣೆ ಮಾಡಿರುವುದು ಅತ್ಯಂತ ಕುತೂಹಲಕ್ಕೆ ಕಾರಣವಾಗಿದೆ.
ಬಾಗಲಕೋಟೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜಿಗೆ ಅನುದಾನ ನೀಡಬೇಕೆಂದು ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ನೇತೃತ್ವದಲ್ಲಿ ಕಳೆದ ನವೆಂಬರ್ ತಿಂಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕವಾಗಿ ಬೂಟ್ ಪಾಲೀಶ್ ಅಭಿಯಾನ ನಡೆಸಲಾಗಿತ್ತು.
ಈ ಹೋರಾಟದ ಕುರಿತು ಲಘುವಾಗಿ ಪ್ರತಿಕ್ರಿಯೆ ನೀಡಿದ್ದ ಬಾಗಲಕೋಟೆ ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ, ಬಾಗಲಕೋಟೆ ನಗರದ ಬೀದಿ ಬೀದಿಯಲ್ಲಿ ಬೂಟ್ ಪಾಲೀಶ್ ಮಾಡಿ, ಹಣ ಹೆಚ್ಚು ಸಂಗ್ರಹವಾಗುತ್ತದೆ ಎಂದು ಗೇಲಿ ಮಾಡುವ ಧಾಟಿಯಲ್ಲಿ ಮಾತನಾಡಿದ್ದರು.
ಈ ಸವಾಲನ್ನು ಗಂಭೀರವಾಗಿ ಸ್ವೀಕರಿಸಿದ್ದ ಕರವೇ ಜಿಲ್ಲಾ ಘಟಕ ಬಾಗಲಕೋಟೆ ನಗರದಲ್ಲಿ ಬೃಹತ್ ಬೂಟ್ ಪಾಲೀಶ್ ಅಭಿಯಾನ ನಡೆಸಿ ಶಾಸಕರಿಗೆ ತಿರುಗೇಟು ನೀಡಿದ್ದರು. ಇದಲ್ಲದೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಬೂಟ್ ಪಾಲೀಶ್ ಅಭಿಯಾನ ನಡೆಸಿ, ಗೇಲಿ ಮಾಡಿದ ಶಾಸಕರಿಗೆ ತಕ್ಕ ಉತ್ತರ ನೀಡಿದ್ದರು.
ಇದೀಗ ಕರವೇ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಅಶ್ವಿನಿ ಗೌಡ ಚಳವಳಿಯ ಅಖಾಡ ಪ್ರವೇಶಿಸಿದ್ದು, "ಬೂಟ್ ಪಾಲೀಶ್ ಮಾಡುವುದು, ಚಪ್ಪಲಿ ಹೊಲೆಯುವುದು ಶ್ರೇಷ್ಠ ಕೆಲಸ. ಅದನ್ನು ನಾವು ಹೆಮ್ಮೆಯಿಂದ ಮಾಡುತ್ತೇವೆ. ಬಸವಣ್ಣನವರ ಕಾಯಕ ಧರ್ಮವನ್ನು ನಾವು ಪಾಲಿಸುತ್ತೇವೆ. ಶಾಸಕ ವೀರಣ್ಣ ಚರಂತಿಮಠರ ಬೇಜವಾಬ್ದಾರಿತನ, ಜನ ವಿರೋಧಿ ನೀತಿಯ ಕುರಿತು ಡಿ.11ರಂದು ನಡೆಯುವ ಅಭಿಯಾನದಲ್ಲಿ ಮಾತನಾಡುತ್ತೇನೆ,'' ಎಂದು ಅಶ್ವಿನಿ ಗೌಡ ಘೋಷಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಬೂಟ್ ಪಾಲೀಶ್ ಅಭಿಯಾನದಿಂದಾಗಿ ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ತೀವ್ರ ಮುಜುಗರ, ಮುಖಭಂಗಕ್ಕೆ ಒಳಗಾಗಿದ್ದು, ಸ್ಥಳೀಯ ಬಿಜೆಪಿ ಮುಖಂಡರೇ ಶಾಸಕರ ಧೋರಣೆಯ ಕುರಿತು ಅಸಮಾಧಾನಗೊಂಡಿದ್ದಾರೆ.
ಅಭಿಯಾನ ಹೀಗೇ ಮುಂದುವರೆದರೆ ಭಾರತೀಯ ಜನತಾ ಪಕ್ಷಕ್ಕೆ ಅಪಾರ ನಷ್ಟವಾಗಲಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಾದರೂ ಮೆಡಿಕಲ್ ಕಾಲೇಜಿಗೆ ಅನುದಾನದ ಘೋಷಣೆಯಾಗಬೇಕು ಎಂದು ಹೇಳುತ್ತಿದ್ದಾರೆ.












Click it and Unblock the Notifications