ಕೆರೂರು ಗುಂಪು ಗಲಾಟೆ: ಶ್ರೀರಾಮುಲು ಭೇಟಿ, ಬೃಹತ್ ಪ್ರತಿಭಟನೆಗೆ ನಿರ್ಧಾರ
ಬಾಗಲಕೋಟೆ, ಜುಲೈ 8: ಕೆರೂರು ಪಟ್ಟಣದಲ್ಲಿ ನಡೆದ ಗುಂಪು ಘರ್ಷಣೆಯ ಹಿನ್ನೆಲೆಯಲ್ಲಿ ಶುಕ್ರವಾರ ದಕ್ಷಿಣ ಭಾರತದ ಹಿಂದೂ ಜಾಗರಣ ವೇದಿಕೆ ಸಂಚಾಲಕ ಜಗದೀಶ ಕಾರಂತ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಭೆಯನ್ನು ನಡೆಸಿದ್ದು, ಸಂಘಟನೆಯ ಸದಸ್ಯರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ಎರಡು ದಿನಗಳ ಹಿಂದೆ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕಟ್ಟಿಮನಿ ಹಾಗೂ ಆತನ ಸಹೋದರ ಲಕ್ಷ್ಮಣ ಕಟ್ಟಿಮನಿ ಹಾಗೂ ಮತ್ತೊರ್ವ ಯಮನೂರ ಚುಂಗಾರಿ ಎಂಬುವರಿಗೆ ಇನ್ನೊಂದು ಕೋಮಿನ ಜನ ಎಳೆನೀರು ಕೊಚ್ಚುವ ಮಚ್ಚಿನಿಂದ ಹಲ್ಲೆ ಮಾಡಿದ್ದರು. ಕೆರೂರ ಬಸ್ ನಿಲ್ದಾಣದ ಮುಂಭಾಗ ಪರಸ್ಪರ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದಿತ್ತು. ಇದರಿಂದ ಕೆರೂರ ಪಟ್ಟಣದಲ್ಲಿ ಉದ್ವಿಗ್ನ ವತಾವಾರಣ ನಿರ್ಮಾಣವಾಗಿದೆ.
ಆ ಹಲ್ಲೆಯ ಘಟನೆ ನಂತರ ಬಸ್ ನಿಲ್ದಾಣದಿಂದ ಕೆರೂರ ತರಕಾರಿ ಮಾರುಕಟ್ಟೆಗೆ ಈ ಗಲಭೆ ಸಿಫ್ಟ್ ಆಗಿ, ಕೆಲ ಕಿಡಿಗೇಡಿಗಳು ತರಕಾರಿ ಮಾರುಕಟ್ಟೆಯಲ್ಲಿನ ಅಂಗಡಿಗಳನ್ನ ಒತ್ತಾಯ ಪೂರ್ವಕವಾಗಿ ಮುಚ್ಚಿಸಿ, ಅಂಗಡಿ ಮುಂಭಾಗದ ತಗಡುಗಳನ್ನ ಕಿತ್ತುಹಾಕಿ, ತಳ್ಳುಗಾಡಿಗಳು ಹಾಗೂ ನಾಲ್ಕೈದು ಬೈಕ್‌ಗಳಿಗೆ ಬೆಂಕಿ ಹಚ್ಚಿದ ಘಟನೆ ಸಹ ನಡೆದಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಡೀ ಕೆರೂರ ಸಂಜೆ ವೇಳೆಗೆ ಬೇರೆಯದ್ದೆ ರೂಪ ತಾಳಿ 55 ವರ್ಷದ ಬಂದೇ ನವಾಜ್ ಎಂಬಾತ ವ್ಯಕ್ತಿ ಮೇಲೆ ಮತ್ತೊಂದು ಕೋಮಿನವರು ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಜುಲೈ 11ರಂದು ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆ
ಕೆರೂರ ಪಟ್ಟಣದಲ್ಲಿ ನಡೆದ ಗುಂಪು ಘರ್ಷಣೆ ಬಗ್ಗೆ ಚರ್ಚೆ ನಡೆಸಿದ ಹಿಂದೂ ಜಾಗರಣ ವೇದಿಕೆ ಸಭೆಯಲ್ಲಿ ಕೆಲವು ನಿರ್ಣಯ ಕೈಗೊಳ್ಳಲಾಯಿತು. ಇನ್ನು ಸಭೆಯ ನಿರ್ಣಯದಂತೆ ಜುಲೈ 11ರ ಸೋಮವಾರದಂದು ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅಂದು ಜಿಲ್ಲೆಯ ಬಾದಾಮಿ, ಹುನಗುಂದ, ಬೀಳಗಿ, ಮುಧೋಳ, ಇಲಕಲ್, ಗುಳೇದಗುಡ್ಡ, ರಬಕವಿ ಬನಹಟ್ಟಿ ತಾಲೂಕು ಕೇಂದ್ರಗಳಲ್ಲಿಯೂ ಏಕಕಾಲಕ್ಕೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಆದರೆ ಜಮಖಂಡಿಯಲ್ಲಿ ಮಾತ್ರ ಜುಲೈ 12 ರಂದು ಬಂದ್ ಕರೆ ನೀಡಲು ನಿರ್ಧಾರ ಮಾಡಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಾಗಬೇಕೆಂದು ಆಗ್ರಹಿಸಲು ನಿರ್ಧರಿಸಲಾಗಿದೆ.

ಘಟನೆಯ ಹಿಂದೆ ಪೊಲೀಸರ ಕೈವಾಡ
ಕೆರೂರು ಪಟ್ಟಣದಲ್ಲಿ ನಡೆದ ಘರ್ಷಣೆಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಚಾಕು ಇರಿಯಲಾಗಿದೆ. ಇದರಿಂದ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರು ಮತ್ತು ಗೋಪಾಲ ದಾಸ್ಮನಿ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಂದ ಮಾಹಿತಿಯನ್ನ ಪಡೆದಿದ್ದೇನೆ. ಆದರೆ ಇದು ವೈಯಕ್ತಿಕ ದ್ವೇಷವಲ್ಲ. ಪೊಲೀಸರು ವೈಯಕ್ತಿಕ ದ್ವೇಷ ಎಂದು ಹೇಳಿದ್ದಾರೆ. ಸಿಎಂ ಬೊಮ್ಮಾಯಿ ಪೊಲೀಸರ ವರದಿ ಪ್ರಕಾರ ವೈಯಕ್ತಿಕ ದ್ವೇಷ ಎಂದೇ ಹೇಳಿದಾರೆ. ಇದು ಹಿಂದೂಗಳ ಮೇಲೆ ನಡೆದ ದಬ್ಬಾಳಿಕೆ ಆಗಿದೆ, ಈ ಘಟನೆ ಹಿಂದೆ ಕೆರೂರ ಪೊಲೀಸ್ ಠಾಣೆಯ ಪಿಎಸ್ ಐ ಹಾಗೂ ಐವರು ಪೊಲೀಸರ ಕೈವಾಡವಿದೆ.
ಘಟನೆಯ ವೇಳೆ ಪೊಲೀಸರು ಸ್ಥಳದಲ್ಲೇ ಇದ್ದರೂ ಸಹ ಅಂದು ಕೇರ್ ಮಾಡಿಲ್ಲ. ಮೇಲಾಗಿ 307 ಸೆಕ್ಷನ್ ಹಾಕದೇ ಸುಮೊಟೊ ಕೇಸ್ ಹಾಕಿದ್ದಾರೆ. ಪೊಲೀಸರು ಇಂತಹ ಕೆಲಸ ಮಾಡೋದಾ? ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ದೇಶದಲ್ಲಿ ಕನ್ಹಯ್ಯಲಾಲ್ ,ರುದ್ರೇಶ್, ಶರತ್ ಮಡಿವಾಳ, ಹರ್ಷ ರೀತಿ ಇನ್ನೆಷ್ಟು ಜನರ ಹಿಂದೂಗಳ ಹತ್ಯೆಯಾಗಬೇಕು ಎಂದು ಆಕ್ರೋಶ ಹೊರ ಹಾಕಿದರು.

ಗಾಯಾಳುಗಳ ಸಂತೈಸಿ ಚೆಕ್ ವಿತರಿಸಿದ ರಾಮುಲು
ಕೆರೂರ ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರನ್ನು ಸಚಿವ ಶ್ರೀರಾಮುಲು ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದರಲ್ಲದೆ ವೈದ್ಯರಿಂದ ಗಾಯಾಳುಗಳ ಆರೋಗ್ಯ ಸ್ಥಿತಿಗತಿ ತಿಳಿದುಕೊಂಡರು. ನಂತರ ಗಾಯಗೊಂಡವರಿಗೆ ಸರಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ತಲಾ 50 ಸಾವಿರ ಧನಸಹಾಯ ಚೆಕ್ ನೀಡಿದರು.
" ಘಟನೆಯಲ್ಲಿ ಗಾಯಾಳುಗಳು ಉಳಿದಿರುವುದೇ ಹೆಚ್ಚು. ದೇವರ ಆಶೀರ್ವಾದದಿಂದ ಉಳಿದಿದ್ದಾರೆ. ಅದೇ ಪೆಟ್ಟು ಬೇರೆಯವರಿಗೆ ಬಿದ್ದಿದ್ರೆ ಉಳಿತಿರಲಿಲ್ಲ. ಹೋರಾಟ ಮಾಡುವ ವ್ಯಕ್ತಿಗಳ ಮೇಲೆ ಈ ರೀತಿ ಹಲ್ಲೆ ನಡೆದರೆ ಕುಗ್ಗಬಹುದು ಎಂದು ಅನ್ಕೊಂಡಿರಬಹುದು. ಆದರೆ ನಾವೆಲ್ಲರೂ ಕೂಡಾ ಗಾಯಾಳುಗಳ ಹಿಂದೆ ಇರುತ್ತೀವಿ. ನಮ್ಮ ಬಿಜೆಪಿ ಕೂಡಾ ಅವರ ಹಿಂದೆ ಇರುತ್ತದೆ. ಬಿಜೆಪಿ ಕಾರ್ಯಕರ್ತರು, ಸಂಘಟಕರು ಕುಗ್ಗುವಂತಹ ವ್ಯಕ್ತಿಗಳಲ್ಲ. ಗಾಯಾಳುಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೀನಿ. ಸರ್ಕಾರದಿಂದ ಕೊಡಬೇಕಾದ ಪರಿಹಾರವನ್ನು ಕೊಟ್ಟಿದ್ದೇನೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ, ಈ ರೀತಿಯ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಪೊಲೀಸರಿಗೆ ಆದೇಶ ನೀಡಿದ್ದೇವೆ" ಶ್ರೀರಾಮುಲು ಹೇಳಿದರು.

ಕೋಮುಗಲಬೆಗೆ ತಿರುಗುತ್ತಿರುವ ಗಲಾಟೆ
ಕೆರೂರು ಪಟ್ಟಣದಲ್ಲಿ ನಡೆದ ಗಲಾಟೆ ಪ್ರಕರಣವು ಕೊಂಚ ತಿಳಿಯಾಗುತ್ತಿರುವ ಬೆನ್ನಲ್ಲೆ ಶುಕ್ರವಾರ ಕುಳಗೇರಿ ಕ್ರಾಸ್ ಬಳಿರುವ ಡಾಬಾ ವೊಂದರಲ್ಲಿ ಕೆಲ ಕಿಡಿಗೇಡಿಗಳು ದಾಳಿ ಮಾಡಿ, ಡಾಬಾದ ಮಾಲೀಕರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಂಡ ರಫೀಕ್, ರಾಜೇಸಾಬ್, ದಾವಲ್ ಮಲೀಕ್, ಹನೀಪ್ ಸಾಬ್ ಮತ್ತು ರೆಹಾನ್ ಎಂಬುವವರನ್ನ ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಬೆನ್ನಲ್ಲೆ ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಎಸ್ಪಿ ಜಯಪ್ರಕಾಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೇ, ಡಾಬಾ ಬಳಿ ಹೆಚ್ಚುವರಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ, ತಪ್ಪಿತಸ್ಥರನ್ನ ಆದಷ್ಟು ಬೇಗ ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.












Click it and Unblock the Notifications