ಡಿಕೆ ಶಿವಕುಮಾರ್ ಗೆ ಕೊನೆಗೂ ಜಾಮೀನು: ಸಿದ್ದರಾಮಯ್ಯ ಹೇಳಿದ್ದೇನು?
ಬಾದಾಮಿ, ಅಕ್ಟೋಬರ್ 23: ಕನಕಪುರ ಶಾಸಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿರುವುದನ್ನು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
ಸ್ವಾಗತಿಸಿದ್ದಾರೆ.
ಬಾದಾಮಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ಡಿಕೆ ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯದ ಕೋರ್ಟಿನಲ್ಲಿಯೇ ಜಾಮೀನು ಸಿಗಬೇಕಿತ್ತು. ಆದರೆ ಹೈಕೋರ್ಟ್‌ನಲ್ಲಿ ಜಾಮೀನು ಸಿಕ್ಕಿದೆ. ನ್ಯಾಯ ಸಿಕ್ಕಿದೆ ಎಂಬುದು ಸಂತೋಷ ತಂದಿದೆ" ಎಂದರು.
"ತಪ್ಪಿತಸ್ಥ ಎಂಬುದು ಸಾಬೀತಾದರೆ ಜೈಲಿಗೆ ಕಳುಹಿಸಲಿ. ತನಿಖೆ ಹಂತದಲ್ಲಿಯೇ ಜೈಲಿಗೆ ಕಳಿಸುವುದು ಸರಿಯಲ್ಲ. ಇದು ದ್ವೇಷದ ರಾಜಕಾರಣ" ಎಂದು ಸಿದ್ದರಾಮಯ್ಯ ಹೇಳಿದರು.

ಈ ಕುರಿತು ಟ್ವೀಟ್ ಸಹ ಮಾಡಿರುವ ಸಿದ್ದರಾಮಯ್ಯ, "ಡಿ.ಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದು ನನಗೆ ಸಂತೋಷ ಉಂಟುಮಾಡಿದೆ. ದ್ವೇಷ ರಾಜಕಾರಣದ ಉದ್ದೇಶದಿಂದ ಪ್ರಕರಣವು ತನಿಖಾ ಹಂತದಲ್ಲಿರುವಾಗಲೇ ಅವರನ್ನು ಬಂಧಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಲಾಗಿತ್ತು. ಅವರಿಗೆ ಜಾಮೀನು ದೊರೆತಿರುವುದು ನ್ಯಾಯಕ್ಕೆ ದೊರೆತ ಜಯ" ಎಂದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್‌ರನ್ನು ಸೆಪ್ಟೆಂಬರ್ 3ರಂದು ಬಂಧಿಸಿತ್ತು. ಇದಕ್ಕೂ ಮೊದಲು ಆಗಸ್ಟ್ 30ರಿಂದ ಸತತ ನಾಲ್ಕು ದಿನ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಅವರನ್ನು ವಿಶೇಷ ನ್ಯಾಯಾಲಯವು ಇ.ಡಿ ವಶಕ್ಕೆ ಒಪ್ಪಿಸಿತ್ತು.












Click it and Unblock the Notifications