ಕಾಂಗ್ರೆಸ್ ಗೆಲುವಿನ ಮೂಲಕ ಸಿದ್ದು ನ್ಯಾಮಗೌಡ ಕನಸು ನನಸು: ಡಿಸಿಎಂ
ಬೆಂಗಳೂರು, ಅಕ್ಟೋಬರ್ 30: ಜಮಖಂಡಿ ಶಾಸಕರಾಗಿದ್ದ ದಿವಂಗತ ಸಿದ್ದು ನ್ಯಾಮಗೌಡ ಅವರು ಜಮಖಂಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಕನಸನ್ನು ಹೊಂದಿದ್ದರು, ಆ ಕನಸು ನನಸಾಗಬೇಕಾದರೆ ಅವರ ಪುತ್ರ ಆನಂದ ನ್ಯಾಮಗೌಡ ಅವರಿಗೆ ಮತ ಹಾಕಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಹೇಳಿದರು.
ಭವಿಷ್ಯದಲ್ಲಿ ಜಮಖಂಡಿಯನ್ನು ಜಿಲ್ಲೆಯನ್ನಾಗಿ ಮಾಡುವ ದೂರಾಲೋಚನೆ ಹೊಂದಿದ್ದ ಸಿದ್ದು ನ್ಯಾಮಗೌಡರು ಈ ಭಾಗದಲ್ಲಿ ದೊಡ್ಡ ಕಚೇರಿ ನಿರ್ಮಿಸಿದ್ದಾರೆ. ಅವರ ಕನಸನ್ನು ನನಸು ಮಾಡಲು ಆನಂದ ನ್ಯಾಮಗೌಡರಿಗೆ ಅವಕಾಶ ನೀಡಬೇಕು ಎಂದು ಪರಮೇಶ್ವರ ಸಾರ್ವಜನಿಕರಲ್ಲಿ ಮತಯಾಚನೆ ಮಾಡಿದ್ದಾರೆ.
ಜಮಖಂಡಿಯಲ್ಲಿ ಮಂಗಳವಾರವೂ ವಿವಿಧ ಬೀದಿಗಳಲ್ಲಿ ರ‌್ಯಾಲಿ ನಡೆಸಿ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದು ನ್ಯಾಮಗೌಡ ಅವರು ಈ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಬಿಜೆಪಿಯ ಕುಲಕರ್ಣಿ ಅವರು ಕೊನೆಬಾರಿ ನಿಲ್ಲುತ್ತಿದ್ದೇನೆ ಎಂದು ಹೇಳಿಕೊಂಡು ಮತ ಕೇಳುತ್ತಿದ್ದಾರೆ.

70 ವರ್ಷದ ತರುಣ ಕುಲಕರ್ಣಿಗೆ ಆರು ಬಾರಿ ಸ್ಪರ್ಧೆ ಮಾಡಿ ಕೇವಲ ಒಂದೇ ಅವಧಿ ಗೆದ್ದವರು. ಆದರೆ ಅವರ ಐದು ವರ್ಷದ ಸಾಧನೆ ಮಾತ್ರ ಶೂನ್ಯ. ಸಿದ್ದು ನ್ಯಾಮಗೌಡರು ಹಾಗೂ ಕುಲಕರ್ಣಿ ಇಬ್ಬರ ಕೆಲಸ ಕಾರ್ಯಗಳನ್ನು ಪಟ್ಟಿ ಮಾಡಿದರೆ ಯಾರು ಹೆಚ್ಚು ಕೆಲಸ ಮಾಡಿದ್ದಾರೆ ಎಂಬ ಸತ್ಯ ಜನರಿಗೆ ಅರಿವಾಗಲಿದೆ. ಸಿದ್ದು ನ್ಯಾಮಗೌಡ ಅವರ ಮಾದರಿಯಲ್ಲೇ ಅವರ ಮಗ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಬೆನ್ನೆಲುಬಾಗಿ ನಾನು ನಿಲ್ಲುತ್ತೇನೆ ಎಂದರು.












Click it and Unblock the Notifications