ಬಾಗಲಕೋಟೆ; ಅಪರಿಚಿತ ವಾಹನ ಡಿಕ್ಕಿ, ನಾಲ್ವರು ಸ್ಥಳದಲ್ಲಿ ಸಾವು
ಬಾಗಲಕೋಟೆ, ಜೂನ್ 03: ಅವರೆಲ್ಲ ಶ್ರಮವಹಿಸಿ ದುಡಿದು ಜೀವನ ನಡೆಸುವವರು. ಅವರ ಮನೆಗೆ ಅವರ ದುಡಿಮೆಯೇ ಆಧಾರವಾಗಿತ್ತು. ಸಾಲಸೋಲ ಮಾಡಿ ಕ್ಯಾಂಟರ್ ವಾಹನ ಮಾಡಿ, ಅದರಿಂದ ಬರುವ ದುಡ್ಡಲ್ಲಿ ಜೀವನ ಸಾಗಿಸುತ್ತಿದ್ದ ಮಾಲೀಕರು. ಇಬ್ಬರು ಚಾಲಕರಿಗೆ ಕೆಲಸ ಕೊಟ್ಟು ಅವರ ಕುಟುಂಬಕ್ಕೂ ನೆರವಾಗಿದ್ದರು. ಆದರೆ ಮಳೆ ಆ ನಾಲ್ವರ ಪಾಲಿಗೆ ಸಾವಿನ ಗಂಟೆಯಾದಂತಿತ್ತು. ನಾಲ್ವರ ಸಾವಿಗೆ ಒಂದು ಅಪರಿಚಿತ ವಾಹನದ ಚಾಲಕ ಕಾರಣನಾಗಿದ್ದಾನೆ.
ಪಂಕ್ಚರ್ ಆಗಿ ನಿಂತಿದ್ದ ಕ್ಯಾಂಟರ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಬಳಿ ನಿಂತಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ನಡೆದಿದೆ.
ಪಂಕ್ಚರ್ ಆಗಿ ನಿಂತಿದ್ದ ಕ್ಯಾಂಟರ್‌ಗೆ ಒಬ್ಬರು ಟೈರ್ ಜೋಡಿಸುತ್ತಿದ್ದರು. ಉಳಿದ ನಾಲ್ವರು ವಾಹನ ಪಕ್ಕ ನಿಂತಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯಾರದ್ದೋ ತಪ್ಪಿಗೆ ಜೀವಬಿಟ್ಟ ಜನರು
ಮಗನನ್ನು ಕಳೆದುಕೊಂಡ ತಾಯಿ ಬಿಕ್ಕಿ-ಬಿಕ್ಕಿ ಅಳುತ್ತಿರುವುದು. ಪತಿಯ ಶವದ ಪಕ್ಕ ಇಬ್ಬರು ಮಕ್ಕಳ ಜೊತೆ ಕೂತು ರೋಧಿಸುತ್ತಿರುವ ಮಡದಿ. ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬೀಳಗಿ ಪಟ್ಟಣದ ತಾಲೂಕಾ ಆಸ್ಪತ್ರೆ. ಗುರುವಾರ ರಾತ್ರಿ ಜಿಲ್ಲೆಯಾದ್ಯಂತ ಭಾರೀ ಮಳೆ, ಗಾಳಿ ಶುರುವಾಗಿತ್ತು. ಆ ಸಮಯದಲ್ಲೇ ಈರುಳ್ಳಿ ತುಂಬಿದ ಕ್ಯಾಂಟರ್ ಒಂದು ವಿಜಯಪುರದಿಂದ ಬೆಂಗಳೂರಿನ ಕಡೆಗೆ ರಾಷ್ಟ್ರ ಹೆದ್ದಾರಿ 218ರ ಮೇಲೆ ಬಾಡಗಂಡಿ ಮಾರ್ಗದಲ್ಲಿ ಬರುತ್ತಿತ್ತು. ಆಸಮಯದಲ್ಲಿ ಕ್ಯಾಂಟರ್‌ನ ಒಂದು ಟೈರ್ ಸ್ಫೋಟವಾಗಿದೆ. ಹೀಗಾಗಿ ಕ್ಯಾಂಟರ್ ಡ್ರೈವರ್ ರಜಾಕ್ ತಾಂಭೋಳೆ ಹಾಗೂ ಇನ್ನೋರ್ವ ಚಾಲಕ ನಾಸೀರ್ ಮುಲ್ಲಾ ಕ್ಯಾಂಟರ್ ಅನ್ನು ರಸ್ತೆ ಪಕ್ಕ ನಿಲ್ಲಿಸಿ, ಮಾಲೀಕ ಮಲ್ಲೇಶ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಗುರುವಾರ ರಾತ್ರಿ 10.25ಕ್ಕೆ ನಡೆದ ಅಪಘಾತ
ಕ್ಯಾಂಟರ್ ಮಾಲೀಕ ಗಾಡಿ ಟೈರ್ ತೆಗೆದುಕೊಂಡು ಹೋಗಲು ರಾಮಸ್ವಾಮಿ ಎಂಬುವವರನ್ನು ಕಳಿಸಿದ್ದಾರೆ. ಟೈರ್ ಬಂದ ಬಳಿಕ ಅದನ್ನು ಬದಲಿಸುವಾಗ ವಿಜಯಪುರ ಮಾರ್ಗದಿಂದ ಬಂದ ಅಪರಿಚಿತ ವಾಹನ ರಸ್ತೆ ಪಕ್ಕ ನಿಂತಿದ್ದ ಮಲ್ಲೇಶ್ ಹಾಗೂ ಇತರರಿಗೆ ಡಿಕ್ಕಿ ಹೊಡೆದಿದೆ. ಆದರೆ ಅಪರಿಚಿತ ವಾಹನದ ಚಾಲಕ ಗಾಡಿ ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಘಟನೆ ಗುರುವಾರ ರಾತ್ರಿ10,25ರ ಸುಮಾರಿಗೆ ನಡೆದಿದೆ.

ಚಾಲಕನನ್ನು ಪತ್ತೆ ಹಚ್ಚಲು ಸೂಚನೆ
ಈ ಅಪಘಾತದಲ್ಲಿ ಟೈರ್ ಹೊತ್ತು ತಂದ ಡ್ರೈವರ್, ಕ್ಯಾಂಟರ್ ಮಾಲೀಕ ಮಲ್ಲೇಶ್ ಮಳಲಿ, ಕ್ಯಾಂಟರ್ ಡ್ರೈವರ್ ನಾಸೀರ್ ಮುಲ್ಲಾ, ರಜಾಕ್ ತಾಂಭೋಳಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಜನ ಇವರೆಲ್ಲರನ್ನೂ 108 ಮೂಲಕ ಬೀಳಗಿ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟೊತ್ತಿಗೆ ಎಲ್ಲರೂ ಮೃತಪಟ್ಟಿದ್ದರು. ಕ್ಯಾಂಟರ್ ಕ್ಲೀನರ್‌ಗೆ ಗಾಯಗಳಾಗಿವೆ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಲ್ಲೇಶ್ ಪತ್ನಿ ಮಧು, ಇಬ್ಬರು ಮಕ್ಕಳನ್ನ ಕಟ್ಟಿಕೊಂಡು ನಾನು ಹೇಗೆ ಜೀವನ ಸಾಗಿಸಲಿ ಎಂದು ಬಿಕ್ಕಿ ಬಿಕ್ಕಿ ಅತ್ತರು. ಸ್ಥಳೀಯ ಶಾಸಕ ಮುರಗೇಶ್ ನಿರಾಣಿ ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಹನಮಂತ್ ನಿರಾಣಿ ಅವರು ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯ ಹಾಗೂ ಪರಿಹಾರ ಕೊಡಿಸಲು ಪ್ರಯತ್ನಿಸುವ ಭರವಸೆ ನೀಡಿದ್ದಾರೆ. ಅಪರಿಚಿತ ವಾಹನದ ಚಾಲಕನ ಪತ್ತೆಗೆ ಸೂಚನೆ ನೀಡಿದ್ದಾರೆ.

ನಾಲ್ವರ ಶವ ಬೀಳಗಿ ಆಸ್ಪತ್ರೆಗೆ ರವಾನೆ
ರಸ್ತೆ ಅಪಘಾತದಲ್ಲಿ ಮೃತಪಟ್ಟ ನಾಲ್ವರ ಶವಗಳನ್ನು ಬೀಳಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪರಿಷತ್ ಸದಸ್ಯ ಹನಮಂತ ನಿರಾಣಿ ಆಸ್ಪತ್ರೆಗೆ ಭೇಟಿ ನೀಡಿದರು. ಅಪರಿಚಿತ ವಾಹನದ ಚಾಲಕನ ಅಚಾತುರ್ಯದಿಂದ ನಾಲ್ವರು ವ್ಯಕ್ತಿಗಳು ಜೀವ ಕಳೆದುಕೊಳ್ಳುವಂತಾಗಿದೆ. ಡಿಕ್ಕಿ ಹೊಡೆದ ವಾಹನ, ಡ್ರೈವರ್‌ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.












Click it and Unblock the Notifications