ದೇವೇಗೌಡರು ಮತ್ತೆ ಮೋಸ ಮಾಡ್ತಾರೆ: ಸಿದ್ದರಾಮಯ್ಯಗೆ ಬಿಎಸ್‌ವೈ ಎಚ್ಚರಿಕೆ
Recommended Video

ಬಾಗಲಕೋಟೆ, ಅಕ್ಟೋಬರ್ 24: ದೇವೇಗೌಡರು ಮಾಡಿದ ದ್ರೋಹ ಮರೆತು ಮತ್ತೆ ಅವರ ಜತೆ ಕೈಜೋಡಿಸಿರುವ ನಿಮಗೆ ಮೋಸವಾಗುವುದಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಜಮಖಂಡಿ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಅವರ ಪರ ಪ್ರಚಾರ ಮಾಡಿದ ಯಡಿಯೂರಪ್ಪ, ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.
ದೇವೇಗೌಡರು ಮತ್ತು ಸಿದ್ದರಾಮಯ್ಯ ಅವರದು ದೃತರಾಷ್ಟ್ರ ಅಪ್ಪುಗೆ. ದೇವೇಗೌಡ ಅವರು ಮಾಡಿದ ದ್ರೋಹವನ್ನು ಮರೆತಿದ್ದೀರಾ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದರು.
ಬಾಗಲಕೋಟೆ ಜಿಲ್ಲೆಗೆ ಸರ್ಕಾರ ಏನು ಮಾಡಿದೆ? ಈ ಭಾಗಕ್ಕೆ ಅವರ ಕೊಡುಗೆಗಳೇನು? ನೀರಾವರಿ ಇಲಾಖೆಯಲ್ಲಿ ಬಿಲ್ ಇನ್ನೂ ಬಾಕಿ ಇದೆ. ಗುತ್ತಿಗೆದಾರರಿಗೆ ಹಣ ಪಾವತಿ ಮಾಡಿಲ್ಲ.
ಸಮ್ಮಿಶ್ರ ಸರ್ಕಾರ ಹಣಬಲ, ಹೆಂಡದ ಬಲ ಮತ್ತು ತೋಳ್ಬಲದ ಜತೆಗೆ ಜಾತಿಯ ವಿಷಬೀಜವನ್ನು ಜನರಲ್ಲಿ ಬಿತ್ತುತ್ತಿದೆ. ಈ ಚುನಾವಣೆಯಲ್ಲಿ ಸರ್ಕಾರಕ್ಕೆ ಬುದ್ದಿ ಕಲಿಸಲು ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಪ್ರಚಾರದ ವೇಳೆ ಅವರು, ಸಿದ್ದರಾಮಯ್ಯ, ದೇವೇಗೌಡ ಮತ್ತು ಸಮ್ಮಿಶ್ರ ಸರ್ಕಾರದ ವಿರುದ್ಧ ಏನು ಹೇಳಿದರು, ಮುಂದೆ ಓದಿ.

ಚಾಮುಂಡೇಶ್ವರಿ ಸೋಲು ನೆನಪಿಲ್ಲವೇ?
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮ್ಮ ವಿರುದ್ಧ ಜಿಟಿ ದೇವೇಗೌಡ ಅವರನ್ನು ನಿಲ್ಲಿಸಿ ನಿಮ್ಮನ್ನು ಸೋಲಿಸಿರಲಿಲ್ಲವೇ? ಇದನ್ನೆಲ್ಲ ಮರೆತು ಅವರೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕವೂ ಮೈಸೂರು ಜಿಲ್ಲಾ ಉಸ್ತುವಾರಿಯನ್ನಾಗಿ ಜಿ.ಟಿ. ದೇವೇಗೌಡರನ್ನು ನೇಮಿಸಿ ನಿಮ್ಮನ್ನು ಹಣಿಯಲು ಪ್ರಯತ್ನಿಸಿದರು. ಒಂದು ವೇಳೆ ನೀವು ಬಾದಾಮಿಯಲ್ಲಿ ಸೋತಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಯೋಚಿಸಿ ಎಂದು ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ಹೇಳಿದರು.

ಕಾಂಗ್ರೆಸ್-ಜೆಡಿಎಸ್ ಭ್ರಮೆಯಲ್ಲಿವೆ
ಕಾಂಗ್ರೆಸ್ ಮತ್ತು ಜೆಡಿಎಸ್ ಹೆಣ-ಹೆಂಡ ಹಂಚಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿವೆ. ಆದರೆ, ಈ ಉಪಚುನಾವಣೆ ಮೂಲಕ ಮೈತ್ರಿ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಹೋದ ಕಡೆಯಲ್ಲೆಲ್ಲಾ ಸಾಲ ಮನ್ನಾ ಮಾಡಿರುವುದಾಗಿ ಕುಮಾರಸ್ವಾಮಿ ಹೇಳಿಕೊಳ್ಳುತ್ತಾರೆ. ಆದರೆ ಇದುವರೆಗೂ ಸಾಲ ಮನ್ನಾ ಎಲ್ಲಿ ಆಗಿದೆ ಎನ್ನುವುದನ್ನು ತೋರಿಸಿ ಎಂದು ಸವಾಲು ಹಾಕಿದರು.

ಎಲುಬಿಲ್ಲದ ನಾಲಗೆ
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಅಡ್ಡಿಯಾಗಿದ್ದಾರೆ ಎಂದು ಕುಮಾರಸ್ವಾಮಿ ಬೊಬ್ಬೆ ಹೊಡೆಯುತ್ತಾರೆ. ಎಲುಬಿಲ್ಲದ ನಾಲಿಗೆ ಅಂತ ಏನೇನೋ ಮಾತನಾಡುತ್ತಾರೆ. ಅಲ್ಪ ಸಂಖ್ಯಾತ ಮಹಿಳೆಯರಿಗೆ ದ್ರೋಹ ಮಾಡಿದ್ದಾರೆ. ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಬಾಂಡ್ ನೀಡಿಲ್ಲ. ನೇಕಾರರ ಸಾಲಮನ್ನಾ ಮಾಡಲು ನಾನು ಮುಖ್ಯಮಂತ್ರಿಯಾಗಿದ್ದಾಗ ನಿರ್ಧರಿಸಿದ್ದೆ. ಒಂದು ವಾರ ಸಿಎಂ ಆಗಿ ಮುಂದುವರಿದಿದ್ದರೂ ಸಾಲ ಮನ್ನಾ ಮಾಡುತ್ತಿದ್ದೆ. ಆದರೆ, ಮೂರೇ ದಿನದಲ್ಲಿ ಅಧಿಕಾರ ಬಿಡಬೇಕಾಯಿತು.

ವಾಲ್ಮೀಕಿ ಸಮುದಾಯಕ್ಕೆ ಅವಮಾನ
ಶ್ರೀರಾಮುಲು ಅವರನ್ನು 420 ಎಂದು ಕರೆದು ಸಿದ್ದರಾಮಯ್ಯ ಅವರು ಅವಮಾನ ಮಾಡಿದ್ದಾರೆ. ಇದು ವಾಲ್ಮೀಕಿ ಸಮುದಾಯಕ್ಕೆ ಮಾಡಿರುವ ಅವಮಾನ. ಅದಕ್ಕಾಗಿ ಅವರು ಸಮುದಾಯದ ಕ್ಷಮೆ ಕೋರಬೇಕು. ಲೋಕಸಭೆಯಲ್ಲಿ ಶ್ರೀರಾಮುಲು ಪ್ರಶ್ನೆಗಳನ್ನು ಕೇಳಲಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಮೊದಲು ಅವರ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಎಷ್ಟು ಮಾತನಾಡಿದ್ದಾರೆ ಎಂದು ಉತ್ತರಿಸಲಿ ಎಂದು ಸವಾಲು ಹಾಕಿದರು.

ನೆನಪಾಗಲಿಲ್ಲ ಎಂದು ತೋರಿಸಿ
ತಮಗೆ 37 ಸೀಟುಗಳು ಮಾತ್ರ ಬಂದಿವೆ. ಉತ್ತರ ಕರ್ನಾಟಕದ ಭಾಗದ ಜನರು ತಮಗೆ ಮತ ಹಾಕಿಲ್ಲ. ತಮ್ಮ ಶಾಸಕರನ್ನು ಗೆಲ್ಲಿಸಿಲ್ಲ ಎಂದು ಬಹಿರಂಗವಾಗಿ ಆರೋಪಿಸಿದ್ದರು. ಈಗ ಹೇಗೆ ತಾನೆ ಇಲ್ಲಿಗೆ ಬಂದು ಜನರ ಬಳಿ ಮತಯಾಚನೆ ಮಾಡುತ್ತಾರೆ? ಇದನ್ನೆಲ್ಲ ಮರೆತು ಮೈತ್ರಿ ಪಕ್ಷದ ಅಭ್ಯರ್ಥಿಗೆ ಮತ ಹಾಕಬಾರದು. ಉಪಚುನಾವಣೆಯಲ್ಲಿ ನೀವು ನೆನಪಿಗೆ ಬರಲೇ ಇಲ್ಲ ಎಂಬುದನ್ನು ತೋರಿಸಿಕೊಡಬೇಕು ಎಂದು ಯಡಿಯೂರಪ್ಪ ಜನರಿಗೆ ಮನವಿ ಮಾಡಿದರು.












Click it and Unblock the Notifications