ಬಿಎಸ್ವೈ ಸದ್ಯಕ್ಕೆ ಬದಲಾವಣೆಯಿಲ್ಲ: ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಬಾಗಲಕೋಟೆ, ಮೇ 28: ಬಿಜೆಪಿಯವರು ಪಕ್ಷದ ಚೌಕಟ್ಟಿನೊಳಗೆ ಜಗಳವಾಡುತ್ತಿಲ್ಲ, ಬೀದಿಬೀದಿಯಲ್ಲಿ ಜಗಳವಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.
"ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನೇರವಾಗಿ ಯೋಗೇಶ್ವರ್ ಮೇಲೆ ವಾಗ್ದಾಳಿ ನಡೆಸುತ್ತಾರೆ. ಹಿಂದೆ ಸಚಿವರಾಗಿದ್ದಾಗ ಕೋಟಿ ಕೋಟಿ ಲೂಟಿ ಹೊಡೆದರು ಎಂದು. ಇಂತಹ ಪಕ್ಷದಿಂದ ಏನು ಆಡಳಿತ ನಿರೀಕ್ಷೆ ಮಾಡಲು ಸಾಧ್ಯ"ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತ ಪಡಿಸಿದರು.
"ನನಗಿರುವ ಮಾಹಿತಿಯ ಪ್ರಕಾರ, ಯಡಿಯೂರಪ್ಪನವರನ್ನು ಸದ್ಯ ಬದಲಾವಣೆ ಮಾಡುವುದಿಲ್ಲ. ಕೊರೊನಾ ಕಾರಣದಿಂದ ಅವರ ವರಿಷ್ಠರು ಸದ್ಯ ಅವರನ್ನೇ ಮುಂದುವರಿಸಲು ಚಿಂತನೆ ನಡೆಸಿರಬಹುದು"ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

"ಯಡಿಯೂರಪ್ಪನವರನ್ನು ಬಿಟ್ಟರೆ ಬಿಜೆಪಿಯಲ್ಲಿ ಯಾರೂ ಸಮರ್ಥ ಅಭ್ಯರ್ಥಿಯಿಲ್ಲ. ಅವರನ್ನು ಬದಲಾವಣೆ ಮಾಡದಿರಲು ಅದೂ ಒಂದು ಕಾರಣ. ನನಗೂ ಮತ್ತು ಯಡಿಯೂರಪ್ಪನವರಿಗೂ ವೈಯಕ್ತಿಕ ಸಂಬಂಧ ಉತ್ತಮವಾಗಿಯೇ ಇದೆ"ಎಂದು ಸಿದ್ದರಾಮಯ್ಯ ಹೇಳಿದರು.
"ಮುಖ್ಯಮಂತ್ರಿ ಯಡಿಯೂರಪ್ಪನವರು ಒಳ್ಳೆಯವರೇ, ಆದರೆ ಮುಖ್ಯಮಂತ್ರಿಯಾಗಿ ಅವರು ವೈಫಲ್ಯವನ್ನು ಕಂಡಿದ್ದಾರೆ. ಅವರ ಹೈಕಮಾಂಡ್ ಮತ್ತು ಬಿಜೆಪಿ ಶಾಸಕರಲ್ಲಿ ಕೆಲವರು ಅವರ ಬದಲಾವಣೆಗೆ ಪ್ರಯತ್ನವನ್ನು ಮಾಡುತ್ತಿದ್ದರು"ಎಂದು ಸಿದ್ದರಾಮಯ್ಯ ಹೇಳಿದರು.
ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಸಂವಿಧಾನದ ಈ ಯಾವ ನಿಯಮಗಳನ್ನು ಪೊಲೀಸ್ ಇಲಾಖೆ ಪಾಲಿಸುತ್ತಿಲ್ಲ. ಬಿಜೆಪಿ ಸರ್ಕಾರ ತಮಗೆ ಬೇಕಾದಂತೆ ಸಂವಿಧಾನದ ನಿಯಮಗಳನ್ನು ತಿರುಚಿಕೊಂಡಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದರು.












Click it and Unblock the Notifications