ಬಾಗಲಕೋಟೆ ಅಭಿವೃದ್ದಿ ಪ್ರಾಧಿಕಾರ: 3ನೇ ಯುನಿಟ್ ಅಭಿವೃದ್ದಿ ಕಾರ್ಯಕ್ಕೆ ಶೀಘ್ರವೇ ಚಾಲನೆ: ಚರಂತಿಮಠ
ಬಾಗಲಕೋಟೆ, ಅಕ್ಟೋಬರ್, 11; ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಯುನಿಟ್-3ರ ಅಭಿವೃದ್ದಿಗೆ ಸರ್ಕಾರ 3,000 ಕೋಟಿ ರೂಪಾಯಿ ಅನುಮೋದನೆ ನೀಡಿದೆ. ಅಭಿವೃದ್ದಿ ಕಾರ್ಯಕ್ಕೆ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಶಾಸಕ ವೀರಣ್ಣ ಚರಂತಿಮಠ ಬಾಗಲಕೋಟೆಯಲ್ಲಿ ತಿಳಿಸಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಸಭಾಭವನದಲ್ಲಿ ಯುನಿಟ್-1 ಹಾಗೂ 2ರಲ್ಲಿ ಮುಖ್ಯ ಸಂತ್ರಸ್ಥರಿಗೆ ಹಾಗೂ ಇತರೆ ಸಂತ್ರಸ್ಥರಿಗೆ ಹಕ್ಕುಪತ್ರ ವಿತರಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಳುಗಡೆ ಸಂತ್ರಸ್ತ್ರರಿಗೆ ನಿವೇಶನ ನೀಡುವ ಸಲುವಾಗಿ ಯುನಿಟ್-3ರ ಅಭಿವೃದ್ದಿಗೆ ಸರ್ಕಾರ ಅನುಮೋದನೆ ನೀಡಿದೆ. ದೀಪಾವಳಿ ಹಬ್ಬ ಮುಗಿದ ತಕ್ಷಣ ಬಾಗಲಕೋಟೆ ಹಾಗೂ ಜಮಖಂಡಿಗೆ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ. ಸಿವಿಲ್ ಮತ್ತು ಎಲೆಕ್ಟ್ರಿಕಲ್ ಕಾಮಗಾರಿಯನ್ನು ಬೇರೆ ಬೇರೆ ಮಾಡಲಾಗುತ್ತಿದೆ. 50 ಸಾವಿರ ಎಕರೆ ನೀರಾವರಿ, ರಸ್ತೆ ಹಾಗೂ ಯುನಿಟ್-3ರ ಅಭಿವೃದ್ದಿಗೆ ಚಾಲನೆ ನೀಡಲಿದ್ದಾರೆ ಎಂದರು.

96 ಜನರಿಗೆ ಹಕ್ಕುಪತ್ರಗಳ ವಿತರಣೆ
ನಗರದ ಕಿಲ್ಲಾ ನಡೆಗಡ್ಡೆ ಪ್ರದೇಶದಲ್ಲಿನ 856ರಿಂದ 1,100 ಸಂತ್ರಸ್ತರ ಸರ್ವೇ ಕಾರ್ಯ ನಡೆಸಿ, ಪರಿಹಾರ ಹಾಗೂ ನಿವೇಶನ ಕೊಡುವ ಕಾರ್ಯಕ್ಕೂ ಚಾಲನೆ ನೀಡಲಾಗುತ್ತಿದೆ. ಯುನಿಟ್-1 ಹಾಗೂ 2ರಲ್ಲಿ 5 ಜನ ಬಾಡಿಗೆದಾರರಿಗೆ, 24 ಮುಖ್ಯ ಸಂತ್ರಸ್ಥರು, 50 ಮುಖ್ಯ ಸಂತ್ರಸ್ಥ ವಯಸ್ಕರ ಮಕ್ಕಳು, 5 ಜನ ಅತಿಕ್ರಮಣದಾರರು, 12 ವಾಣಿಜ್ಯ ಸಂತ್ರಸ್ಥರು ಸೇರಿ ಒಟ್ಟು 96 ಜನರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಇಲ್ಲಿಯವರೆಗೆ ಒಟ್ಟು 2,128 ನಿವೇಶನ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಹಕ್ಕು ಪತ್ರ ಪಡೆದುಕೊಂಡವರು ಒಂದು ವರ್ಷದಲ್ಲಿ ಮನೆ ಕಟ್ಟಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಿವೇಶನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಮೋಹನ್ ನಾಡಗೌಡ, ಶಿವಾನಂದ ಟವಳಿ, ಜಿ.ಜಿ.ಯಳ್ಳಿಗುತ್ತಿ, ಪ್ರಕಾಶ್ ತಪಶೆಟ್ಟಿ, ಪುನರ್ವಸತಿ ಪುನರ್ ನಿರ್ಮಾಣದ ಅಧಿಕಾರಿ ಗಣಪತಿ ಪಾಟೀಲ್, ಬಿಟಿಡಿಎ ಮುಖ್ಯ ಇಂಜಿನಿಯರ್ ಮನ್ಮಥಯ್ಯ ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications