ಸಿದ್ದರಾಮೋತ್ಸವ ದಿನ ಅಪಘಾತ: ಮೃತನ ಕುಟುಂಬಸ್ಥರಿಗೆ ಸಿದ್ದು ಸಾಂತ್ವನ
ಬಾಗಲಕೋಟೆ, ಆಗಸ್ಟ್ 10; ದಾವಣಗೆರೆಯಲ್ಲಿ ನಡೆಯುತ್ತಿದ್ದ ಸಿದ್ದರಾಮೋತ್ಸವಕ್ಕೆ ತೆರಳುವ ವೇಳೆ ಕ್ರೂಸರ್ ಅಪಘಾತದಿಂದ ಬಾಗಲಕೋಟೆ ಮೂಲದ ನಾಲ್ವರು ಗಾಯಗೊಂಡಿದ್ದು, ಓರ್ವ ಸಾವನ್ನಪ್ಪಿದ್ದ.
ಬುಧವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೀಳಗಿ ತಾಲೂಕಿನ ಚಿಕ್ಕ ಆಲಗುಂಡಿಗೆ ಭೇಟಿ ನೀಡಿದ್ದು, ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, "ಘಟನೆಯಲ್ಲಿ ಪ್ರಕಾಶ್ ಬಡಿಗೇರ ಅವರು ಮೃತಪಟ್ಟಿದ್ದು, ಇನ್ನುಳಿದವರು ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಕೆಲವರು ಗುಣಮುಖರಾಗಿದ್ದಾರೆ. ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರು ಮಾತ್ರ ಐಸಿಯುನಲ್ಲಿದ್ದಾರೆ. ಅದರಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ವೈದ್ಯರು ಮಾಹಿತಿ ನೀಡಿದ್ದಾರೆ" ಎಂದರು.

"ಇಂತಹ ಘಟನೆ ಆಗಬಾರದಾಗಿತ್ತು. ಈ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಮೃತಪಟ್ಟವರ ಕುಟುಂಬದ ಬಳಿ ಹೋಗುತ್ತಿದ್ದೇನೆ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ" ಎಂದು ಹೇಳಿದರು.
ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ನಾಲ್ವರು ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ ಸಿದ್ದರಾಮಯ್ಯ, ಗಾಯಾಳುಗಳು ಹಾಗೂ ಮೃತ ಕುಟುಂಬಕ್ಕೆ 7 ಲಕ್ಷ ರೂಪಾಯಿ ವೈಯಕ್ತಿಕ ಹಣಕಾಸು ನೆರವು ನೀಡಿದರು.
ಐಸಿಯುನಲ್ಲಿ ಇರುವ ಇಬ್ಬರು ಗಾಯಾಳುಗಳಿಗೆ ತಲಾ ಒಂದು ಲಕ್ಷ ರೂಪಾಯಿ, ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುವ ಇಬ್ಬರಿಗೆ ತಲಾ 50 ಸಾವಿರ ರೂಪಾಯಿ ನೆರವು ನೀಡಿದ್ದಾರೆ. ಬಳಿಕ ಬೀಳಗಿ ತಾಲೂಕಿನ ಚಿಕ್ಕ ಆಲಗುಂಡಿ ಗ್ರಾಮಕ್ಕೆ ಭೇಟಿ ಕೊಟ್ಟ ಅವರು ಮೃತ ಪ್ರಕಾಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಎರಡು ಲಕ್ಷ ರೂಪಾಯಿ ಹಣ ನೀಡಿದರು. ಚಿಕಿತ್ಸೆ ಪಡೆದು ಮನೆಗೆ ತೆರಳಿರುವ ಮುಧೋಳ ತಾಲೂಕಿನ ಬಿಕೆ ಆಲಗುಂಡಿ ಗ್ರಾಮದ ಎಂಟು ಜನರಿಗೆ ತಲಾ 25 ಸಾವಿರ ರೂಪಾಯಿ ಧನಸಹಾಯ ಮಾಡಿದರು.

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸ ದಿನದಂದು ಕ್ರೂಸರ್ ಪಲ್ಟಿಯಾಗಿ ದುರ್ಘಟನೆ ನಡೆದಿತ್ತು. ಸಿದ್ದರಾಮಯ್ಯ ಅವರೇ ಸ್ವತಃ ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಗಾಯಾಳುಗಳನ್ನು ಭೇಟಿ ಆಗಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಹಾಗೂ ವೈದ್ಯ ಬಳಿ ಗಾಯಾಳುಗಳ ಆರೋಗ್ಯದ ಬಗ್ಗೆಯೂ ಮಾಹಿತಿ ಪಡೆದರು.












Click it and Unblock the Notifications