ಸುದ್ದಿ ಮಾಧ್ಯಮಗಳ ವಿರುದ್ಧ ಜಗನ್ ಸರ್ಕಾರ ಮಹತ್ವದ ನಿರ್ಣಯ
ಅಮರಾವತಿ, ಅಕ್ಟೋಬರ್ 19: ಮಾಧ್ಯಮಗಳ ವಿರುದ್ಧ ಆಂಧ್ರ ಪ್ರದೇಶದ ಜಗನ್ ಮೋಹನ್ ರೆಡ್ಡಿ ಸರ್ಕಾರ ಭಾರಿ ಮಹತ್ವದ ನಿರ್ಣಯ ತೆಗೆದುಕೊಂಡಿದೆ.
ಇಲಾಖೆಗಳಿಗೆ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲಿಸಲು, ಕಾನೂನು ಕ್ರಮ ಕೈಗೊಳ್ಳಲು ಸ್ವತಂತ್ರ್ಯ ಅಧಿಕಾರ ನೀಡಿದ್ದು, ಮಾಧ್ಯಮಗಳು ಬಿತ್ತರಿಸುವ ಸುಳ್ಳು ಸುದ್ದಿ, ಬೆದರಿಕೆ, ದುರುದ್ಧೇಶ ಪೂರ್ವಕ ಸುದ್ದಿ, ಹಣಕ್ಕೆ ಸುದ್ದಿಯಂತಹಾ ಪ್ರಕರಣಗಳನ್ನು ಕಡಿಮೆ ಮಾಡಲು ಈ ನಿರ್ಣಯ ಮಾಡಿರುವುದಾಗಿ ಸರ್ಕಾರ ಹೇಳಿದೆ.
ಟಿವಿ ಮಾಧ್ಯಮ, ಮುದ್ರಣ ಮಾಧ್ಯಮ, ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಯಾವುದೇ ಮಾನ ಹಾನಿಕರ ಸುದ್ದಿ, ಸುಳ್ಳು ಸುದ್ದಿಗಳ ವಿರುದ್ಧ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿ ಅಥವಾ ಆ ಮೇಲಿನ ಹಂತದ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಇದಕ್ಕೆ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.


ಮಾಧ್ಯಮ ಸಂಸ್ಥೆ, ವಿಪಕ್ಷ ಗಳಿಂದ ಭಾರಿ ಆಕ್ರೋಶ
ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಈ ನಿರ್ಣಯದ ವಿರುದ್ಧ ಮಾಧ್ಯಮಗಳು, ವಿಪಕ್ಷಗಳು, ಸಂಘ ಸಂಸ್ಥೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಆದರೆ ಜಗನ್ ಮೋಹನ್ ರೆಡ್ಡಿ ಸರ್ಕಾರ ಇದಕ್ಕೆ ಜಗ್ಗುವಂತೆ ಕಾಣುತ್ತಿಲ್ಲ.

ಎರಡು ಟಿವಿಗಳ ಮೇಲೆ ಅಘೋಷಿತ ನಿಷೇಧ
ಈಗಾಗಲೇ ಎರಡು ಪ್ರಸಿದ್ಧ ಟಿವಿ ಮಾಧ್ಯಮದ ಮೇಲೆ ಅಘೋಷಿತ ನಿಷೇಧ ಹೇರಲಾಗಿದೆ. ವಿಪಕ್ಷವಾದ ಚಂದ್ರಬಾಬು ನಾಯ್ಡು ಅವರಿಗೆ ಆಪ್ತ ಎನ್ನಲಾಗುವ ಟಿವಿ 5 ಮತ್ತು ಎಬಿಎನ್ ಆಂಧ್ರ ಜ್ಯೋತಿ ಚಾನೆಲ್‌ಗಳನ್ನು ರಾಜ್ಯದಾದ್ಯಂತ ಟಿವಿ ಆಪರೇಟರ್‌ಗಳು ತೆಗೆದುಬಿಟ್ಟಿದ್ದರು. ಈಗ ಎಲ್ಲ ಮಾಧ್ಯಮಗಳ ಮೇಲೂ ನಿಯಂತ್ರಣ ಹೇರಲು ಜಗನ್ ಕಾರ್ಯಪ್ರವೃತ್ತರಾಗಿದ್ದಾರೆ.

24 ಗಂಟೆಯಲ್ಲಿ ತನಿಖೆ ನಡೆಸಿ ದೂರು ದಾಖಲಿಸಬಹುದು
ಯಾವುದೇ ಆಕ್ಷೇಪಾರ್ಹ ಸುದ್ದಿ ಪ್ರಸಾರ ಅಥವಾ ಪ್ರಕಟಗೊಂಡ ಕೇವಲ 24 ಗಂಟೆಯ ಒಳಗಾಗಿ ಅದರ ಬಗ್ಗೆ ಸಂಬಂಧಿತ ಇಲಾಖೆ ತನಿಖೆ ನಡೆಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಅಧಿಕಾರನ್ನು ಇಲಾಖಾ ಮುಖ್ಯಸ್ಥರಿಗೆ ಸರ್ಕಾರ ನೀಡಿದೆ.

ಆಂಧ್ರದಲ್ಲಿ ಪತ್ರಕರ್ತರ ಮೇಲೆ ಹಲ್ಲೆಗಳಾಗಿವೆ
ಜಗನ್ ಸರ್ಕಾರದ ಮಾಧ್ಯಮದ ಮೇಲಿನ ಮುನಿಸು ಕೆಲವು ತಿಂಗಳಿಂದಲೂ ನಡೆಯುತ್ತಲೇ ಇದ್ದು, ರಾಜ್ಯದಲ್ಲಿ ಆಗಾಗ್ಗೆ ಮಾಧ್ಯಮದವರ ಮೇಲೆ ಹಲ್ಲೆಗಳೂ ಆಗಿವೆ. ಈಗ ಸರ್ಕಾರ ಅಧಿಕೃತವಾಗಿ ಮಾಧ್ಯಮದ ಮೇಲೆ ನಿಯಂತ್ರಣ ಹೇರಲು ಮುಂದಾಗಿದ್ದು ಸರ್ಕಾರ, ಮಾಧ್ಯಮದ ನಡುವಿನ ಕುಸ್ತಿ ಮತ್ತೊಂದು ಹಂತಕ್ಕೆ ಹೋಗುವ ಸಾಧ್ಯತೆ ಸ್ಪಷ್ಟ.












Click it and Unblock the Notifications