5 ಉಪ ಮುಖ್ಯಮಂತ್ರಿ ಆಯ್ತು, ಆಂಧ್ರದಲ್ಲಿ ಇನ್ನು 3 ರಾಜಧಾನಿ?
ಅಮರಾವತಿ, ಡಿಸೆಂಬರ್ 18: ಈಗಾಗಲೇ 5 ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಠಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ, ಅಧಿಕಾರ ವಿಕೇಂದ್ರಿಕರಣದ ನಿಟ್ಟಿನಲ್ಲಿ ರಾಜ್ಯದಲ್ಲಿ ಮೂರು ರಾಜಧಾನಿಗಳನ್ನು ಸೃಷ್ಠಿಸುವ ಸುಳಿವು ನೀಡಿದ್ದಾರೆ.
ವಿಧಾನಸಭೆಯಲ್ಲಿ ರಾಜಧಾನಿಗೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಗನ್ಮೋಹನ ರೆಡ್ಡಿ, ಈಗಿರುವ ಅಮರಾವತಿ ಶಾಸಕಾಂಗ ರಾಜಧಾನಿಯಾಗಿ, ಕರಾವಳಿ ನಗರ ವಿಶಾಖಪಟ್ಟಣವನ್ನು ಕಾರ್ಯಾಂಗ ರಾಜಧಾನಿಯಾಗಿ ಹಾಗೂ ಕರ್ನೂಲನ್ನು ನ್ಯಾಯಾಂಗ ರಾಜಧಾನಿಯನ್ನಾಗಿ ಮಾಡಬಹುದು ಎಂದು ಹೇಳಿದ್ದಾರೆ.
ಆಂಧ್ರಪ್ರದೇಶ ರಾಜ್ಯಕ್ಕೆ ಅಗತ್ಯ ಬಿದ್ದರೆ, ಮೂರು ರಾಜಧಾನಿಗಳನ್ನು ಹೊಂದಲು ಅವಕಾಶವಿದೆ ಎಂದು ಹೇಳುವ ಮೂಲಕ ಮೂರು ರಾಜಧಾನಿಗಳನ್ನು ಸೃಷ್ಠಿಸುವ ಬಗ್ಗೆ ಮಾಹಿತಿ ನೀಡಿದರು.

ಮೂರು ರಾಜಧಾನಿ ಕುರಿತು ಅಧ್ಯಯನ ನಡೆಸಲು ಈಗಾಗಲೇ ತಜ್ಞರ ಸಮಿತಿಯನ್ನು ನೇಮಿಸಿದ್ದು, ಅವರು ಕೊಟ್ಟ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಳೆದ ಜೂನ್ ತಿಂಗಳಿನಲ್ಲಿ ಅಧಿಕಾರಕ್ಕೆ ಬಂದಿದ್ದ ಜಗನ್ಮೋಹನ ನೇತೃತ್ವದ ಸರ್ಕಾರ, ಎಸ್ಸಿ, ಎಸ್ಟಿ, ಕಾಪು, ಅಲ್ಪಸಂಖ್ಯಾತ ಮತ್ತು ಇತರೆ ಹಿಂದುಳಿದ ವರ್ಗಕ್ಕೆ ಒಂದರಂತೆ 5 ಡಿಸಿಎಂ ಹುದ್ದೆ ನೀಡಿ ದಾಖಲೆ ಸೃಷ್ಠಿಸಿದ್ದರು.












Click it and Unblock the Notifications