ಚಿತ್ರಗಳು; ಕಚೇರಿಯನ್ನು ಕೋವಿಡ್ ಆಸ್ಪತ್ರೆ ಮಾಡಿದ ಉದ್ಯಮಿ
ಅಹಮದಾಬಾದ್, ಜುಲೈ 31: ಕೊರೊನಾ ವೈರಸ್ ಸೋಂಕಿನಿಂದ ಗುಣಮುಖಗೊಂಡ ಸೂರತ್ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ತಮ್ಮ ಕಚೇರಿಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿದ್ದಾರೆ.
ಉದ್ಯಮಿ ಖಾದರ್ ಶೇಕ್ ಕಚೇರಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಯಾಗಿದೆ. ಇಲ್ಲಿ 85 ಹಾಸಿಗೆಗಳು ಇದ್ದು, ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಖಾದರ್ ಶೇಕ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ಅವರಿಗೆ ದಾಖಲಾತಿ ಸಿಗಲಿಲ್ಲ. ಕೊನೆಗೆ ಖಾಸಗಿ ಆಸ್ಪತ್ರೆಗೆ ದಾಖಲಾದರು. 20 ದಿನಗಳ ಕಾಲ ಚಿಕಿತ್ಸೆ ಪಡೆದು ಅವರು ಗುಣಮುಖಗೊಂಡಿದ್ದಾರೆ.
ಗುಜರಾತ್‌ನಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 60,285. ಸೂರತ್‌ನಲ್ಲಿ ಒಟ್ಟು 12,785 ಸೋಂಕಿತರು ಇದ್ದಾರೆ. ಒಟ್ಟು 400 ಜನರು ಇದುವರೆಗೂ ಮೃತಪಟ್ಟಿದ್ದಾರೆ.

ಆಸ್ಪತ್ರೆಯನ್ನಾಗಿ ಮಾಡಿದ್ದು ಏಕೆ?
ಉದ್ಯಮಿ ಖಾದರ್ ಶೇಕ್ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆದಿದ್ದರು. ಬಳಿಕ ಬಿಲ್ ನೋಡಿದ ಅವರು ಬಡವರು ಉಚಿತವಾಗಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಕಚೇರಿಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿದ್ದಾರೆ.

ಸ್ಥಳೀಯ ಆಡಳಿತದ ಸಹಕಾರ
ತಮ್ಮ ಕಚೇರಿಯನ್ನು ಆಸ್ಪತ್ರೆಯಾಗಿ ಪರಿವರ್ತಿಸುವ ಕುರಿತು ಅವರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದರು. ಆಸ್ಪತ್ರೆಗೆ ಬೇಕಾದ ಸಿಬ್ಬಂದಿಯನ್ನು ಸ್ಥಳೀಯ ಆಡಳಿತ ಒದಗಿಸಿದ್ದು, ಆಸ್ಪತ್ರೆ ಈಗ ಸಿದ್ಧವಾಗಿದೆ. ಹಾಸಿಗೆಗಳನ್ನು ಅವರೇ ಖರೀದಿಸಿ ತಂದಿದ್ದಾರೆ. ಪ್ರತ್ಯೇಕವಾದ ಲೈನ್ ಮೂಲಕ ವಿದ್ಯುತ್ ವ್ಯವಸ್ಥೆ ಮಾಡಿದ್ದಾರೆ.

ಬಡವರು ಹೇಗೆ ಚಿಕಿತ್ಸೆ ಪಡೆಯಬೇಕು
ಮಾಧ್ಯಮಗಳ ಜೊತೆ ಮಾತನಾಡಿದ ಖಾದರ್ ಶೇಕ್ "ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಹೆಚ್ಚಿನ ದರವಿದೆ. ಬಡವರು ಹೇಗೆ ಚಿಕಿತ್ಸೆ ಪಡೆಯಬೇಕು?. ಇಲ್ಲಿ ಉಚಿತವಾಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ" ಎಂದು ಹೇಳಿದ್ದಾರೆ.

ಯಾರೂ ಬೇಕಾದರೂ ದಾಖಲಾಗಬಹುದು
"ತಮ್ಮ ಕಚೇರಿಯ ಆಸ್ಪತ್ರೆಗೆ ಜಾತಿ, ಧರ್ಮದ ಹಂಗಿಲ್ಲದೇ ಯಾರೂ ಬೇಕಾದರೂ ದಾಖಲಾಗಬಹುದು. ಇದರಿಂದ ಬಡವರಿಗೆ ಸಹಾಯವಾಗಲಿದೆ" ಎಂದು ಖಾದರ್ ಶೇಕ್ ಹೇಳಿದ್ದಾರೆ.












Click it and Unblock the Notifications