
ಗುಜರಾತ್ ವಿಧಾನಸಭಾ ಚುನಾವಣೆ: ಉಚಿತ ಶಿಕ್ಷಣದ ಭರವಸೆ ನೀಡಿದ ಕೇಜ್ರಿವಾಲ್
ಅಹಮದಾಬಾದ್ ಆಗಸ್ಟ್ 16: ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಅದಾಗಲೇ ಬಿಜೆಪಿ ಭದ್ರಕೋಟೆಯಾದ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಲು ತೊಡೆ ತಟ್ಟಿ ನಿಂತಿದೆ. ಇದಕ್ಕೆ ಬೇಕಾದ ತಯಾರಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ (ಎಎಪಿ) ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಹಲವಾರು ಯೋಜನೆಗಳನ್ನು ಘೋಷಿಸುವ ಮೂಲಕ ಮತದಾರರನ್ನು ಸೆಳೆಯುತ್ತಿದೆ. ಪ್ರಸ್ತುತ ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ನಲ್ಲಿ ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಗೆಲುವು ಸಾಧಿಸಿದರೆ ಮೂಲ ಸೌಕರ್ಯಗಳನ್ನು ಈಡೇರಿಸುವುದಾಗಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಚುನಾವಣೆಗೆ ಒಳಪಡುವ ರಾಜ್ಯದ ಜನರಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಹಾಗೂ ಹೊಸ ಶಾಲೆಗಳನ್ನು ತೆರೆಯುವುದಾಗಿ ಘೋಷಿಸಿದ್ದಾರೆ. ವರ್ಷಾಂತ್ಯದ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಆಯ್ಕೆಯಾದರೆ ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಗಳ ಮೂಲಸೌಕರ್ಯವನ್ನು ಸುಧಾರಿಸುವುದಾಗಿ ಮತ್ತು ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಶಾಲೆಗಳನ್ನು ತೆರೆಯುವುದಾಗಿ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ಉಚಿತ ಮತ್ತು ಗುಣಮಟ್ಟದ ಶಿಕ್ಷಣ
ಇಲ್ಲಿ ಟೌನ್ ಹಾಲ್ ಸಭೆಯಲ್ಲಿ ಮಾತನಾಡಿದ ಅವರು, "ಗುಜರಾತ್‌ನಲ್ಲಿ ಜನಿಸಿದ ಎಲ್ಲರಿಗೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಸಿಗುತ್ತದೆ. ನಾವು ಯಾರನ್ನೂ ಒತ್ತಾಯಿಸುವುದಿಲ್ಲ. ಪೋಷಕರಿಗೆ ಹಣವಿದ್ದರೆ, ಅವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಬಹುದು. ಆದರೆ ಅವರ ಬಳಿ ಹಣವಿಲ್ಲದಿದ್ದರೆ, ಹಣದ ಕೊರತೆ ಬರಲು ನಾವು ಬಿಡುವುದಿಲ್ಲ. ಅವರ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ಉಚಿತವಾಗಿ ನೀಡುತ್ತೇವೆ'' ಎಂದು ಹೇಳಿದರು.
ಗುಜರಾತ್‌ನಲ್ಲಿ ಎಎಪಿ ಮುಂದಿನ ಸರ್ಕಾರವನ್ನು ರಚಿಸಿದರೆ, ಎಲ್ಲಾ ಖಾಸಗಿ ಶಾಲೆಗಳನ್ನು ಆಡಿಟ್ ಮಾಡಲಾಗುವುದು ಮತ್ತು ಅವರ ಪಕ್ಷ ಅಧಿಕಾರದಲ್ಲಿರುವ ದೆಹಲಿಯಲ್ಲಿ ಮಾಡಿರುವಂತಹ ಹೆಚ್ಚುವರಿ ಹಣವನ್ನು ಪೋಷಕರಿಂದ ಸಂಗ್ರಹಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದರು. ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಮಾರಾಟ ಮಾಡುವ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ ಎಂದು ದೆಹಲಿ ಸಿಎಂ ಹೇಳಿದ್ದಾರೆ.

ಮಹಿಳೆಯರಿಗೆ ಉನ್ನತ ಶಿಕ್ಷಣ ಸೌಲಭ್ಯ
ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚಿಸಿದಾಗ, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸೇವೆಯನ್ನು ಕಾಯಂಗೊಳಿಸಲಾಗುವುದು ಮತ್ತು ಅವರಿಗೆ ಉದ್ಯೋಗ ಭದ್ರತೆಯನ್ನು ನೀಡಲಾಗುವುದು ಎಂದು ಅವರು ಹೇಳಿದರು. ಸರ್ಕಾರಿ ಶಾಲಾ ಶಿಕ್ಷಕರಿಗೆ ಬೋಧಕೇತರ ಉದ್ಯೋಗಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲಾಗುವುದು ಎಂದು ಎಎಪಿ ನಾಯಕ ಹೇಳಿದರು.
ಜೊತೆಗೆ ಕೇಜ್ರಿವಾಲ್ ಹೊಸ ಶಾಲೆಗಳಲ್ಲಿ ಬೋಧನಾ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿದರು. ಮಹಿಳೆಯರಿಗೆ ಉನ್ನತ ಶಿಕ್ಷಣದ ಸೌಲಭ್ಯಗಳನ್ನು ರಾಜ್ಯಾದ್ಯಂತ ರಚಿಸಲಾಗುತ್ತದೆ ಮತ್ತು "ವಿದ್ಯಾ ಸಹಾಯಕರು" (ಶಿಕ್ಷಣ ಸಹಾಯಕರು) ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದು ಅವರು ಹೇಳಿದರು.

'ಕೈ'ಕೊಟ್ಟ್ ಆರು ಶಾಸಕರು
ಕೇಜ್ರಿವಾಲ್ ಅವರು ತಮ್ಮ ಹಿಂದಿನ ಗುಜರಾತ್ ಭೇಟಿಗಳ ಸಂದರ್ಭದಲ್ಲಿ ವಿದ್ಯುತ್, ಉದ್ಯೋಗಗಳು, ನಿರುದ್ಯೋಗ ಭತ್ಯೆ, ಮಹಿಳೆಯರು ಮತ್ತು ಬುಡಕಟ್ಟು ಜನಾಂಗದವರಿಗೆ ಸಂಬಂಧಿಸಿದ ಚುನಾವಣಾ ಪೂರ್ವ ಖಾತರಿಗಳನ್ನು ಘೋಷಿಸಿದ್ದರು. ಈ ಬಾರಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.
ಇನ್ನೂ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ದೊಡ್ಡ ಹೊಡೆತ ಅನುಭವಿಸುತ್ತಿದೆ. ಗುಜರಾತ್‌ನಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಹಣದ ಕೊರತೆಯನ್ನು ಎದುರಿಸುತ್ತಿದ್ದು ಹೀಗಾಗಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ದೊಡ್ಡ ಕ್ಷೀಣತೆಯನ್ನು ಎದುರಿಸುತ್ತಿದೆ. ಶೀಘ್ರದಲ್ಲೇ ಆರು ಶಾಸಕರು ಕಾಂಗ್ರೆಸ್ ಹಡಗನ್ನು ಜಿಗಿಯಬಹುದು ಎನ್ನಲಾಗುತ್ತಿದೆ.
|
ಯಾರು? ಎಲ್ಲಿ? ಸ್ಪರ್ಧೆ
ಗುಜರಾತ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯ ಘೋಷಣೆಯೊಂದಿಗೆ ಆಮ್ ಆದ್ಮಿ ಪಕ್ಷ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ತನ್ನ ಅಭ್ಯರ್ಥಿಯನ್ನು ಘೋಷಿಸಿದ ಪಕ್ಷವಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕ್ಲೀನ್ ಇಮೇಜ್ ಮತ್ತು ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಆಗಸ್ಟ್ 2ರಂದು ಆಮ್ ಆದ್ಮಿ ಪಕ್ಷ್ ತನ್ನ ಮೊದಲ ಪಟ್ಟಿಯಲ್ಲಿ ಒಟ್ಟು 10 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ದಿಯೋದರ್‌ನಿಂದ ಭೀಮಾಭಾಯಿ ಚೌಧರಿ, ಸೋಮನಾಥ್‌ನಿಂದ ಜಗ್ಮಲ್‌ವಾಲಾ, ಛೋಟಾ ಉದಯಪುರದಿಂದ ಅರ್ಜುನ್ ರಥ್ವಾ, ಬೆಚರಾಜಿಯಿಂದ ಸಾಗರ್ ರಾಬರಿ, ರಾಜ್‌ಕೋಟ್ ಗ್ರಾಮಾಂತರದಿಂದ ವಾಶ್ರಮ್ ಸಗಾಥಿಯಾ, ಕಾಮಾಜಿಯಿಂದ ರಾಮ್ ಧದುಕಿ, ದಕ್ಷಿಣದಿಂದ ಶಿವಲಾಲ್‌ಭಾಯ್ ಬಾರ್ಸಿಯಾ, ರಾಜ್‌ಕೋಟ್‌ನಿಂದ ಸಿಲ್ವಾಲ್ ಬಾರ್ಸಿಯಾ ಹಾಗೂ ಸುಧೀರ್ ವಘಾನಿಗೆ ಗರಿಯಾಧರ್, ರಾಜೇಂದ್ರ ಸೋಲಂಕಿಗೆ ಬಾರ್ಡೋಲಿ, ಓಂ ಪ್ರಕಾಶ್ ತಿವಾರಿಗೆ ನರೋಡಾ (ಅಹಮದಾಬಾದ್) ನಿಂದ ಟಿಕೆಟ್ ನೀಡಿದೆ.

182 ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧೆ
2022 ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 182 ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪ್ರಕಟಿಸಿದ್ದಾರೆ. 2021 ರಲ್ಲಿ ನಡೆದ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಎಂಸಿ) ಚುನಾವಣೆಯಲ್ಲಿ 120 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಗೆದ್ದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅರವಿಂದ್ ಕೇಜ್ರಿವಾಲ್, "ಎಎಪಿ 2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಂದು ಸ್ಥಾನದಲ್ಲೂ ಸ್ಪರ್ಧಿಸಲಿದೆ. ಎಎಪಿಯು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ವಿಶ್ವಾಸಾರ್ಹ ಪರ್ಯಾಯವಾಗಿದೆ. ಗುಜರಾತ್ ಶೀಘ್ರದಲ್ಲೇ ಬದಲಾಗುತ್ತದೆ," ಎಂದು ಹೇಳಿದ್ದರು.