'ಗುಜರಾತಿನಲ್ಲಿ ಕಾಂಗ್ರೆಸ್ ಅಂತ್ಯವಾಗಿದೆ' ಎಂದ ಅರವಿಂದ್ ಕೇಜ್ರಿವಾಲ್
ಅಹಮದಾಬಾದ್ ಸೆಪ್ಟೆಂಬರ್ 13: ಗುಜರಾತ್ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 'ಗುಜರಾತಿನಲ್ಲಿ ಕಾಂಗ್ರೆಸ್ ಅಂತ್ಯವಾಗಿದೆ' ಎಂದು ಗುಜರಾತ್‌ನಲ್ಲಿ ಇಂದು ಘೋಷಣೆ ಮಾಡಿದ್ದಾರೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಪ್ರಚಾರ ಕೈಗೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುಜರಾತ್‌ಗೆ ಆಗಮಿಸಿದ್ದಾರೆ. ನೈರ್ಮಲ್ಯ ಕಾರ್ಮಿಕರೊಂದಿಗೆ ಟೌನ್ ಹಾಲ್ ಅನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಅವರಿಗೆ ವರದಿಗಾರರು ಪ್ರಶ್ನೆಗಳನ್ನು ಕೇಳಿದರು.
ಪಂಜಾಬ್‌ನ ಎಎಪಿ ಸರ್ಕಾರವು ದಿವಾಳಿತನದ ಅಂಚಿನಲ್ಲಿದ್ದರೂ ಮತ್ತು ಸಂಬಳಕ್ಕೂ ಹಣವಿಲ್ಲದ ಪರಿಸ್ಥಿತಿಯಲ್ಲಿದೆ. ಆದರೆ ಗುಜರಾತ್‌ಗಾಗಿ ಜಾಹೀರಾತುಗಳಿಗಾಗಿ ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ ಎಂಬ ಕಾಂಗ್ರೆಸ್‌ನ ಆರೋಪಕ್ಕೆ ಪ್ರತಿಕ್ರಿಯಿಸುವಂತೆ ವರದಿಗಾರರೊಬ್ಬರು ಕೇಜ್ರಿವಾಲ್ ಅವರನ್ನು ಕೇಳಿದರು.
"ಈ ಪ್ರಶ್ನೆಯನ್ನು ಯಾರು ಕೇಳಿದರು," ಎಂದು ಕೇಜ್ರಿವಾಲ್ ವರದಿಗಾರನನ್ನು ಕೇಳಿದರು. ಇದು ಕಾಂಗ್ರೆಸ್ ನಾಯಕರ ಆರೋಪ ಎಂದು ಹೇಳಿದಾಗ, "ಕಾಂಗ್ರೆಸ್ ಮುಗಿದಿದೆ, ಅವರ ಪ್ರಶ್ನೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ, ಜನರು ಈ ಬಗ್ಗೆ ಸ್ಪಷ್ಟವಾಗಿದ್ದಾರೆ, ಅವರ ಪ್ರಶ್ನೆಗಳ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ" ಎಂದು ಅವರು ತಿರುಗೇಟು ನೀಡಿದರು.

'ಗುಜರಾತಿನಲ್ಲಿ ಕಾಂಗ್ರೆಸ್ ಅಂತ್ಯವಾಗಿದೆ'
ಕಾಂಗ್ರೆಸ್ ಬದಲಿಗೆ ಎಎಪಿಯನ್ನು ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿ ಎಂದು ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ತಮ್ಮ ಮತಗಳನ್ನು ವ್ಯರ್ಥ ಮಾಡಬೇಡಿ ಎಂದು ಅವರು ಮತದಾರರನ್ನು ಕೋರಿದ್ದಾರೆ. ಕಾಂಗ್ರೆಸ್ ಪಕ್ಷವು ಎಲ್ಲಿಯೂ ಉಳಿದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಆಡಳಿತವನ್ನು ಬಯಸದ ಜನರಿದ್ದಾರೆ ಮತ್ತು ಅವರು ಕಾಂಗ್ರೆಸ್‌ಗೆ ಮತ ಹಾಕಲು ಇಷ್ಟಪಡುವುದಿಲ್ಲ, ರಾಜ್ಯದಲ್ಲಿ ಬಿಜೆಪಿಗೆ ನಾವೇ ಪರ್ಯಾಯವಾಗಿರುವುದರಿಂದ ಅವರ ಮತಗಳನ್ನು ನಾವು ಪಡೆಯಬೇಕು ಎಂದು ಅವರು ಹೇಳಿದರು.
ಇಂದಿನ ಸಮಾರಂಭದಲ್ಲಿ ಕೇಜ್ರಿವಾಲ್ ಅವರು ಗುಜರಾತ್‌ನಲ್ಲಿ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ಮುಖ್ಯಮಂತ್ರಿಯಾಗಿ ತರಲು ಬಯಸುತ್ತಿದ್ದಾರೆ ಎಂದು ಬಿಜೆಪಿ ಹೇಳಿಕೊಳ್ಳುವ ಬಗ್ಗೆಯೂ ಕೇಳಲಾಯಿತು. ಅದಕ್ಕೆ ಕೇಜ್ರಿವಾಲ್ ತಿರುಗೇಟು ನೀಡಿ "ನರೇಂದ್ರ ಮೋದಿ ನಂತರ, ಸೋನಿಯಾ ಗಾಂಧಿಯನ್ನು ಪ್ರಧಾನಿಯಾಗಿ ತರಲು ಬಿಜೆಪಿ ಯೋಜಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಅದರ ಬಗ್ಗೆ ಕಾಂಗ್ರೆಸ್ ಏನು ಹೇಳುತ್ತಾರೆ?" ಎಂದು ಮರು ಪ್ರಶ್ನೆ ಮಾಡಿದರು.

ಆಟೋ ಚಾಲಕನ ಮನೆಗೆ ಊಟಕ್ಕೆ ಹೋದ ಕೇಜ್ರಿವಾಲ್
ಗುಜರಾತ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಎಎಪಿಯ ಪ್ರಚಾರದ ಭಾಗವಾಗಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಕೇಜ್ರಿವಾಲ್, ನಿನ್ನೆ (ಸೆಪ್ಟೆಂಬರ್ 12) ಮಧ್ಯಾಹ್ನ ಅಹಮದಾಬಾದ್‌ನಲ್ಲಿ ಆಟೋರಿಕ್ಷಾ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಗರದ ಘಟ್ಲೋಡಿಯಾ ಪ್ರದೇಶದ ನಿವಾಸಿ ವಿಕ್ರಮ್ ದಾಂತನಿ ಎಂಬ ಆಟೋ-ರಿಕ್ಷಾ ಚಾಲಕ ಕೇಜ್ರಿವಾಲ್ ಅವರನ್ನು ತಮ್ಮ ಮನೆಯಲ್ಲಿ ರಾತ್ರಿ ಊಟ ಮಾಡುವಂತೆ ವಿನಂತಿಸಿದರು. 'ನಾನು ನಿಮ್ಮ ಅಭಿಮಾನಿ. ಸೋಷಿಯಲ್ ಮೀಡಿಯಾದಲ್ಲಿ ನಾನು ನೋಡಿದ ವಿಡಿಯೊದಲ್ಲಿ, ನೀವು ಪಂಜಾಬ್‌ನ ಆಟೋ ಡ್ರೈವರ್‌ನ ಮನೆಗೆ ಊಟಕ್ಕೆ ಹೋಗಿದ್ದೀರಿ. ಹಾಗಾದರೆ, ನೀವು ನನ್ನ ಮನೆಗೆ ಊಟಕ್ಕೆ ಬರುತ್ತೀರಾ?' ಎಂದು ದಾಂತನಿ ಕೇಳಿದರು. ಆಮಂತ್ರಣಕ್ಕೆ ದಿಲ್ಲಿ ಮುಖ್ಯಮಂತ್ರಿ ತಕ್ಷಣವೇ ಸಕಾರಾತ್ಮಕವಾಗಿ ಉತ್ತರಿಸಿದರು. ಜೊತೆಗೆ ಆಟೋ ಚಾಲಕನ ಮನೆಗೆ ಊಟಕ್ಕೆ ಹೋಗಿದ್ದರು.

ಎಎಪಿ ಅಭ್ಯರ್ಥಿಗಳ ಮೂರು ಪಟ್ಟಿ ಬಿಡುಗಡೆ
ಎಎಪಿ ಈವರೆಗೆ ಅಭ್ಯರ್ಥಿಗಳ ಮೂರು ಪಟ್ಟಿ ಬಿಡುಗಡೆ ಮಾಡಿದೆ. ಚುನಾವಣಾ ದಿನಾಂಕ ಪ್ರಕಟವಾಗುವ ಮುನ್ನವೇ ಎಎಪಿ ಮೂರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಹತ್ತು ಜನ ಎರಡನೇ ಪಟ್ಟಿಯಲ್ಲಿ ಒಂಬತ್ತು ಜನ ಹಾಗೂ ಮೂರನೇ ಪಟ್ಟಿಯಲ್ಲಿ ಹತ್ತು ಜನ ಅಭ್ಯರ್ಥಿಗಳ ಪಟ್ಟಿಯನ್ನು ಆಪ್ ಬಿಡುಗಡೆ ಮಾಡಿದೆ. ಜೊತೆಗೆ ಹಲವಾರು ಭರವಸೆಗಳನ್ನು ನೀಡುವ ಮೂಲಕ ಮತದಾರರನ್ನು ಆಪ್ ಸೆಳೆಯುತ್ತಿದೆ. ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚಿಸಿದಾಗ, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸೇವೆಯನ್ನು ಕಾಯಂಗೊಳಿಸಲಾಗುವುದು ಮತ್ತು ಅವರಿಗೆ ಉದ್ಯೋಗ ಭದ್ರತೆಯನ್ನು ನೀಡಲಾಗುವುದು, ಮಹಿಳೆಯರಿಗೆ ಶಿಕ್ಷಣ, ಶಾಲೆಗಳ ಹೆಚ್ಚಳ, ಭತ್ಯೆ, ಇತ್ಯಾದಿಗಳ ಭರವಸೆಯನ್ನು ಎಎಪಿ ನೀಡಿದೆ.

ಗ್ರಾಮ ಮಟ್ಟದವರೆಗೂ ಸಂಘಟನೆಗೆ ಬಲ
ಗುಜರಾತಿನ ಚುನಾವಣಾ ರಾಜಕೀಯದಲ್ಲಿ ಹೊಸ ಆಟಗಾರನಾಗಿದ್ದರೂ, ಆಮ್ ಆದ್ಮಿ ಪಕ್ಷವು (ಎಎಪಿ) ತನ್ನ ಸಂಘಟನೆಯನ್ನು ಗ್ರಾಮ ಮಟ್ಟದವರೆಗೂ ಬಲಪಡಿಸುವ ಮೂಲಕ ಮತ್ತು ಸ್ವಯಂಸೇವಕರನ್ನು ಸಜ್ಜುಗೊಳಿಸುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಬಿಜೆಪಿಯನ್ನು ಎದುರಿಸಲು ಹೊರಟಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ, ಗುಜರಾತ್‌ನ ವರ್ಷಾಂತ್ಯದ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಗ್ರಾಮ ಸಮಿತಿಗಳ ಮೂಲಕ ತಳಮಟ್ಟದಲ್ಲಿ ತನ್ನ ಸಂಘಟನೆಯನ್ನು ಬಲಪಡಿಸುತ್ತಿದೆ. ರಾಜ್ಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸುವ ಮತ್ತು ಆಳಗೊಳಿಸುವ ಗುರಿಯ ಭಾಗವಾಗಿ AAP ಗುಜರಾತ್‌ನ ಹಳ್ಳಿಗಳಲ್ಲಿ ಬೀಡುಬಿಟ್ಟಿದೆ. ಎಎಪಿ ಇದುವರೆಗೆ ರಾಜ್ಯದ 18,000 ಹಳ್ಳಿಗಳ ಪೈಕಿ 16,000 ಗ್ರಾಮಗಳಲ್ಲಿ ಸಮಿತಿಗಳನ್ನು ರಚಿಸಿದೆ. ವಾರ್ಡ್ ಮಟ್ಟದಲ್ಲಿ 6,000 ಸಮಿತಿಗಳನ್ನು ಹೊಂದಿದೆ. ಈ ಮೂಲಕ ಪ್ರಚಾರದ ಕಾರ್ಯ ಭರದಿಂದ ಸಾಗಿದೆ. ಜೊತೆಗೆ ಜನರ ಸಮಸ್ಯೆಗಳು ಪರಿಹಾರ ಭರವಸೆಗಳು ಜೋರಾಗಿ ನಡೆಯುತ್ತಿವೆ.












Click it and Unblock the Notifications