ಕೆಂಪುಕೋಟೆಯ ಮುಂದೆ ಇಂದು ಮೋದಿ ಸಾರ್ವಜನಿಕ ಸಭೆ
ಅಂಬಿಕಾಪುರ, ಸೆ 7: ಭಾರತದ ಪ್ರತಿ ರಾಜಕಾರಿಣಿಗಳಿಗೆ ದೆಹಲಿಯ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸ ಬೇಕೆನ್ನುವ ಮಹಾದಾಸೆ ಇರದೇ ಇರದು. ಯಾಕೆಂದರೆ ದೇಶದ ಪ್ರಧಾನಿ ಆದವರು ಮಾತ್ರ ಐತಿಹಾಸಿಕ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದಂದು ಧ್ವಜ ಹಾರಿಸುವುದು ವಾಡಿಕೆ.
ಇಂದು (ಸೆ 7) ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಛತ್ತೀಸ್ ಗಢದ ಅಂಬಿಕಾಪುರದಲ್ಲಿ ಕೆಂಪು ಕೋಟೆಯ ಮುಂದೆ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯೊಬ್ಬರು ಕೆಂಪು ಕೋಟೆಯ ಮುಂದೆ ಸಾರ್ವಜನಿಕ ಸಭೆ ನಡೆಸುವುದೇ ಎಂದು ಆಶ್ಚರ್ಯ ಪಡಬೇಕಾಗಿಲ್ಲ. ಮೋದಿ ಸಭೆ ನಡೆಸುವುದು ಬೃಹತ್ ವೇದಿಕೆಯ ಮೇಲೆ ವ್ಯವಸ್ಥೆ ಮಾಡಲಾಗಿರುವ ಕೆಂಪು ಕೋಟೆಯನ್ನೇ ಹೋಲುವ ಪ್ರತಿಕೃತಿಯ ಮುಂದೆ.

ಕೆಲವೇ ದಿನಗಳ ಹಿಂದೆ "ದೇಶದ ಮುಂದಿನ ಪ್ರಧಾನ ಮಂತ್ರಿಯಾಗುವ ಆಸೆಯೂ ಇಲ್ಲ, ದರ್ದೂ ಇಲ್ಲ. ಅಂತಹ ಕನಸನ್ನೂ ಕಾಣುವುದಿಲ್ಲ. ಗುಜರಾತ್ ಜನತೆ 2017 ರವರೆಗೆ ಬಿಜೆಪಿ ಸರಕಾರಕ್ಕೆ ಆಶೀರ್ವದಿಸಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದ್ದರು.
ರಾಜಧಾನಿ ರಾಯಪುರದಿಂದ 250 ಕಿಲೋಮೀಟರ್ ದೂರದಲ್ಲಿರುವ ಅಂಬಿಕಾಪುರದಲ್ಲಿ ನರೇಂದ್ರ ಮೋದಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಇದೇ ವರ್ಷ ಛತ್ತೀಸಗಢದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ.
ಆಗಸ್ಟ್ ಹದಿನೈದರಂದು ಪಿಎಂ ಮನಮೋಹನ್ ಸಿಂಗ್ ಅವರು ದೇಶವನ್ನು ಉದ್ದೇಶಿಸಿ ಮಾಡುವ ಭಾಷಣಕ್ಕಿಂತ ಹೆಚ್ಚು ದೇಶದ ಜನತೆ ನನ್ನ ಭಾಷಣದ ಮೇಲೆ ಆಸಕ್ತಿ ಹೊಂದಿದ್ದಾರೆಂದು ಕಳೆದ ಸ್ವಾತಂತ್ರ್ಯ ದಿನದಂದು ಮೋದಿ ಹೇಳಿದ್ದರು.
ಮುಖ್ಯಮಂತ್ರಿ ರಮಣ್ ಸಿಂಗ್ ಅವರ ರಾಜ್ಯವ್ಯಾಪಿ ಯಾತ್ರೆ ಕೂಡಾ ಅಂಬಿಕಾ ಪುರದಲ್ಲಿ ಸಾಗಲಿದೆ. ಈ ಮಧ್ಯೆ, ಪ್ರಧಾನಿ ಅಭ್ಯರ್ಥಿಗೆ ಮೋದಿ ಹೆಸರನ್ನು ತಡ ಮಾಡದೇ ಅಂತಿಮ ಗೊಳಿಸಲು RSS ಬಿಜೆಪಿ ನಾಯಕರಿಗೆ ಸೂಚಿಸಿದೆ.
ಭಾನುವಾರ ಸೆ. 8ರಂದು ನವದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಸಭೆಯಲ್ಲಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಬಗ್ಗೆ ಪಕ್ಷ ನಿರ್ಧಾರ ತೆಗೆದು ಕೊಳ್ಳುವ ಸಾಧ್ಯತೆಯಿದೆ.












Click it and Unblock the Notifications